ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆ ಕುಸಿತ: ಇಬ್ಬರು ಕಾರ್ಮಿಕರ ಸಾವು

ಕರಂಗಲ್ಪಾಡಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ದುರ್ಘಟನೆ
Last Updated 28 ಫೆಬ್ರುವರಿ 2020, 19:56 IST
ಅಕ್ಷರ ಗಾತ್ರ

ಮಂಗಳೂರು: ನಗರದ ಕರಂಗಲ್ಪಾಡಿಯಲ್ಲಿ ಶುಕ್ರವಾರ ಮಧ್ಯಾಹ್ನ ನಿರ್ಮಾಣ ಹಂತದ ಕಟ್ಟಡವೊಂದರ ಪಕ್ಕದ ಧರೆ ಕುಸಿದು ಮಣ್ಣಿನಡಿ ಸಿಲುಕಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಒಬ್ಬ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಭೀಮಯ್ಯ (25) ಮತ್ತು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಮಸ್ರಿಗುಲ್‌ (20) ಮೃತರು. ಮಾಲ್ಡಾ ಜಿಲ್ಲೆಯ ಹನಿಗುಲ್‌ (23) ಎಂಬ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಯೇನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರಂಗಲ್ಪಾಡಿಯಲ್ಲಿ ಉದ್ಯಮಿ ಎ.ಜೆ.ಶೆಟ್ಟಿ ಒಡೆತನದ ಸಂಸ್ಥೆಯು ತಾರಾ ಹೋಟೆಲ್‌ಗಾಗಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುತ್ತಿದೆ. ನಿವೇಶನದ ಪಕ್ಕದ ರಸ್ತೆಗೆ ಹೊಂದಿಕೊಂಡಂತೆ ಮಣ್ಣಿನ ದಿಬ್ಬವನ್ನು ಕತ್ತರಿಸಿ ಹಾಗೆಯೇ ಬಿಡಲಾಗಿತ್ತು. ನಿರ್ಮಾಣ ಹಂತದ ಕಟ್ಟಡದ ಮೂರು ಭಾಗಗಳಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಿಸಿದ್ದು, ಕುಸಿತವಾದ ಭಾಗದಲ್ಲಿ ಮಾತ್ರ ಬಾಕಿ ಇತ್ತು.

ಧರೆ ಕುಸಿದ ಭಾಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ 1.15ರ ಸುಮಾರಿಗೆ ಬಹುತೇಕ ಕಾರ್ಮಿಕರು ಊಟಕ್ಕೆ ತೆರಳಿದ್ದರು. ಈ ಮೂವರೂ ಸರಳುಗಳನ್ನು ತಂತಿಯಿಂದ ಬಿಗಿಯುವ ಕೆಲಸದಲ್ಲಿ ನಿರತರಾಗಿದ್ದರು. ದಿಢೀರನೆ ರಸ್ತೆಯ ಭಾಗದಿಂದ ಧರೆ ಕುಸಿದಿದ್ದು, ಮಣ್ಣಿನ ರಾಶಿ ಕಾರ್ಮಿಕರ ಮೇಲೆ ಅಪ್ಪಳಿಸಿದೆ.

ಧರೆ ಕುಸಿಯುವುದನ್ನು ಕಂಡ ಹನಿಗುಲ್‌ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೂ ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದಾನೆ. ಭೀಮಯ್ಯ ಮತ್ತು ಮಸ್ರಿಗುಲ್‌ ಮಣ್ಣಿನ ರಾಶಿಯೊಳಗೆ ಸಿಲುಕಿ ಮೃತಪಟ್ಟಿದ್ದರು. ಅಗ್ನಿಶಾಮಕ ದಳದ 30 ಸಿಬ್ಬಂದಿಯ ತಂಡ 45 ನಿಮಿಷಗಳ ಕಾರ್ಯಾಚರಣೆ ನಡೆಸಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆಯಿತು.

ಕದ್ರಿ ಅಗ್ನಿಶಾಮಕ ಠಾಣೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಜಿ. ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ ನವಾಝ್‌, ಅಗ್ನಿಶಾಮಕ ಅಧಿಕಾರಿ ಸುನೀಲ್‌ ಕುಮಾರ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ ಸೇರಿದಂತೆ ಹಲವು ‍ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು.

ಪಿಲ್ಲರ್‌ಗಳೂ ಉರುಳಿದವು:ಅವಘಡದಲ್ಲಿ ಭಾರಿ ಪ್ರಮಾಣದ ಮಣ್ಣು ಕುಸಿದು, ನಿರ್ಮಾಣ ಹಂತದ ಕಟ್ಟಡದ ಮೇಲೆ ಬಿದ್ದಿದೆ. ಪರಿಣಾಮವಾಗಿ ಕಟ್ಟಡದ ತಳ ಮಹಡಿಯ ಕೆಲವು ಕಾಂಕ್ರೀಟ್‌ ಪಿಲ್ಲರ್‌ಗಳೂ ಉರುಳಿಬಿದ್ದಿವೆ. ರಸ್ತೆಯ ಭಾಗವೂ ಕುಸಿದು ಬಿದ್ದಿದ್ದು, ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ.

ತಾತ್ಕಾಲಿಕವಾಗಿ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ. ಒಂದು ಭಾಗದಲ್ಲಿ ಶಾಲೆ ಇದ್ದರೆ, ಇನ್ನೊಂದು ಭಾಗದಲ್ಲಿ ಮೆಡಿಕೇರ್‌ ವಾಣಿಜ್ಯ ಕಟ್ಟಡವಿದೆ. ಧರೆ ಕುಸಿತದಿಂದ ಶಾಲೆ ಮತ್ತು ವಾಣಿಜ್ಯ ಕಟ್ಟಡಗಳಿಗೂ ಹಾನಿಯಾಗುವ ಅಪಾಯವಿದೆ ಎಂದು ಸ್ಥಳೀಯರು ದೂರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರಾದ ಶಾರದಾ ಜೆ.ಶೆಟ್ಟಿ ಮತ್ತು ಗುತ್ತಿಗೆದಾರ ಕಿಶೋರ್‌ ಕುಮಾರ್‌ ವಿರುದ್ಧ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT