ವಿಜಯಾ ಬ್ಯಾಂಕ್‌ ವಿಲೀನಕ್ಕೆ ಕರಾವಳಿಯಲ್ಲಿ ವ್ಯಾಪಕ ವಿರೋಧ

7
ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ವಿಜಯಾ ಬ್ಯಾಂಕ್‌ ವಿಲೀನಕ್ಕೆ ಕರಾವಳಿಯಲ್ಲಿ ವ್ಯಾಪಕ ವಿರೋಧ

Published:
Updated:
Prajavani

ಮಂಗಳೂರು: ಕರಾವಳಿಯ ವಿಜಯಾ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನ ಮಾಡುವುದಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರದ ಕ್ರಮಕ್ಕೆ ಕರಾವಳಿಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕರಾವಳಿಯ ಹೆಮ್ಮೆಯಾಗಿದ್ದ ಬ್ಯಾಂಕಿನ ಹೆಸರನ್ನು ಶಾಶ್ವತವಾಗಿ ಅಳಿಸಿ ಹಾಕುವ ಹುನ್ನಾರ ಇದಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.

‘ಲಾಭದಲ್ಲಿರುವ ಮತ್ತು ದಕ್ಷಿಣ ಕನ್ನಡ ಮೂಲದ ವಿಜಯಾ ಬ್ಯಾಂಕ್‌ ಅನ್ನು ನಷ್ಟದಲ್ಲಿರುವ ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದರೂ, ಸಂಸದ ನಳಿನ್‌ಕುಮಾರ್ ಕಟೀಲ್‌ ಮೌನ ವಹಿಸಿರುವುದು ಏಕೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.

ವಿಜಯಾ ಬ್ಯಾಂಕ್ ಅನ್ನು ಯಾವುದೇ ಕಾರಣಕ್ಕೂ ಬ್ಯಾಂಕ್ ಆಪ್ ಬರೋಡಾದಲ್ಲಿ ವಿಲೀನಗೊಳಿಸಬಾರದು. ವಿಜಯಾ ಬ್ಯಾಂಕಿನ ಹೆಸರನ್ನು ಬದಲಾಯಿಸಬಾರದು, ಅಲ್ಲದೇ ಸ್ಥಳೀಯ ನೌಕರನ್ನು ವಿಜಯಾ ಬ್ಯಾಂಕ್ ಇಲ್ಲದ ಸ್ಥಳಕ್ಕೆ ವರ್ಗಾವಣೆ ಮಾಡಬಾರದು ಎಂದು ಒತ್ತಾಯಿಸಿದ ಅವರು, ವಿಜಯಾ ಬ್ಯಾಂಕ್ ತುಳುನಾಡಿನ ಸಿರಿಯಾಗಿದ್ದು, ಒಂದು ವೇಳೆ ವಿಲೀನಗೊಂಡರೆ ಗುಜರಾತಿನ ಮಣ್ಣಿನ ದೂಳಿನಲ್ಲಿ ಸೇರಿ ಹೇಳಹೆಸರಿಲ್ಲದಂತಾಗಬಹುದು ಎಂದರು.

ವಿಜಯಾ ಬ್ಯಾಂಕ್ ಸುಮಾರು ₹200 ಕೋಟಿ ಲಾಭದಲ್ಲಿದೆ. ಬರೋಡಾ ಬ್ಯಾಂಕ್ ₹3 ಸಾವಿರ ಕೋಟಿ ನಷ್ಟದಲ್ಲಿದೆ. ಪ್ರಧಾನಿ ತಮ್ಮ ತವರು ರಾಜ್ಯದ ಬ್ಯಾಂಕ್‌ ಅನ್ನು ಉಳಿಸುವುದಕ್ಕಾಗಿ ವಿಜಯಾ ಬ್ಯಾಂಕ್‌ ಅನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ವಿಜಯಾ ಬ್ಯಾಂಕ್ ಅನ್ನು ಕೇಂದ್ರ ಸರ್ಕಾರ ಗುಜರಾತಿನ ಬ್ಯಾಂಕಿನ ಜತೆಗೆ ವಿಲೀನ ಮಾಡುತ್ತಿದ್ದು, ಜಿಲ್ಲೆಯ ಲೋಕಸಭಾ ಸದಸ್ಯರೂ ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ ಎಂದು ಹೇಳಿದರು.

ಕರಾಳ ದಿನ: ಜಿಲ್ಲೆಯ ಪ್ರತಿಷ್ಠಿತ ವಿಜಯಾ ಬ್ಯಾಂಕ್‌ ಅನ್ನು ಬ್ಯಾಂಕ್‌ ಆಫ್‌ ಬರೋಡಾದೊಂದಿಗೆ ವಿಲೀನ ಮಾಡಲಾಗುತ್ತಿದ್ದು, ಇಲ್ಲಿನ ವಿಜಯಾ ಬ್ಯಾಂಕ್‌ ಶಾಖೆಯ ಎದುರು ಬ್ಯಾಂಕ್‌ ಆಫ್‌ ಬರೋಡಾ ಎಂಬ ಫಲಕ ಹಾಕಿದ ದಿನ ಜಿಲ್ಲೆಯ ಪಾಲಿಗೆ ಕರಾಳ ದಿನ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ನಷ್ಟದಲ್ಲಿರುವ ಬ್ಯಾಂಕ್‌ ಅನ್ನು ಲಾಭದಲ್ಲಿರುವ ಬ್ಯಾಂಕಿನೊಂದಿಗೆ ವಿಲೀನ ಮಾಡಲಾಗುತ್ತದೆ. ಆದರೆ, ಇಲ್ಲಿ ಲಾಭದಲ್ಲಿರುವ ಬ್ಯಾಂಕ್‌ ಅನ್ನೇ, ನಷ್ಟದಲ್ಲಿರುವ ಬ್ಯಾಂಕಿನ ಜತೆಗೆ ವಿಲೀನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಈಗಾಗಲೇ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ. ವಿಜಯಾ ಬ್ಯಾಂಕ್‌ ಶಾಖೆಗಳ ಎದುರು ಪ್ರತಿಭಟನೆ ಮಾಡುವ ಮೂಲಕ ನಮ್ಮ ಆಕ್ಷೇಪವನ್ನು ದಾಖಲಿಸಿದ್ದೇವೆ. ಮುಂದಿನ ಹಂತದಲ್ಲಿ ಇನ್ನೂ ತೀವ್ರವಾದ ಹೋರಾಟ ಹಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !