ಗುರುವಾರ , ನವೆಂಬರ್ 21, 2019
20 °C

‘ಗಿರಿಗಿಟ್‌’ ಪ್ರದರ್ಶನಕ್ಕೆ ಕೋರ್ಟ್‌ ತಡೆ

Published:
Updated:

ಮಂಗಳೂರು: ನಗರವೂ ಸೇರಿದಂತೆ ರಾಜ್ಯದಾದ್ಯಂತ ಪ್ರದರ್ಶನ ಕಾಣುತ್ತಿರುವ ತುಳು ಚಲನಚಿತ್ರ ‘ಗಿರಿಗಿಟ್’ ಚಿತ್ರ ಪ್ರದರ್ಶನಕ್ಕೆ ಮಂಗಳೂರು ಕಿರಿಯ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಈ ಚಿತ್ರದಲ್ಲಿ ವಕೀಲ ಸಮುದಾಯವನ್ನು ಅವಹೇಳನ ಮಾಡಲಾಗಿದೆ. ಅಲ್ಲದೆ, ನ್ಯಾಯಾಂಗ ವ್ಯವಸ್ಥೆ ಮತ್ತು ವಕೀಲರ ಬಗ್ಗೆ ಕೀಳು ಅಭಿರುಚಿಯಲ್ಲಿ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಚಿತ್ರದ ವಿರುದ್ಧ ಮಂಗಳೂರು ವಕೀಲರ ಸಂಘವು, ನ್ಯಾಯಾಂಗ ನಿಂದನೆ ಅರ್ಜಿಯೊಂದಿಗೆ ತಡೆಯಾಜ್ಞೆ ಕೋರಿ ದಾವೆ ಹೂಡಿತ್ತು. ಸಂಘದ ಪರ ಹಿರಿಯ ವಕೀಲ ಎಂ.ಪಿ. ಶೆಣೈ ವಾದ ಮಂಡಿಸಿದ್ದರು. ವಾದವನ್ನು ಆಲಿಸಿದ ಮಂಗಳೂರು ಕಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ ಅವರು, ತಡೆಯಾಜ್ಞೆ ನೀಡಿ ಆದೇಶ ನೀಡಿದ್ದಾರೆ.

ಈ ಆದೇಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ‘ಇಂತಹ ಮಾನಹಾನಿಕರ ಸನ್ನಿವೇಶಗಳ ಚಿತ್ರೀಕರಣದ ಬಗ್ಗೆ ಮಂಗಳೂರು ವಕೀಲರ ಸಂಘವು ತೀವ್ರ ಹೋರಾಟ ನಡೆಸಲಿದೆ’ ಎಂದು ತಿಳಿಸಿದರು.

ಸಂಘದ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಪಿ. ಶೆಣೈ, ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಉಪಾಧ್ಯಕ್ಷ ಜಿನೇಂದ್ರ ಕುಮಾರ್, ಜತೆ ಕಾರ್ಯದರ್ಶಿ ಶರ್ಮಿಳಾ, ಕೋಶಾಧಿಕಾರಿ ಅರುಣಾ ಬಿ.ಪಿ. ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಇದ್ದರು.

ಪ್ರತಿಕ್ರಿಯಿಸಿ (+)