ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಹೊಸ ಮಾರ್ಗಸೂಚಿ ಶೀಘ್ರ

ಎರಡನೇ ಸುತ್ತಿನ ಲಸಿಕೆ ಪಡೆದ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ
Last Updated 18 ಮಾರ್ಚ್ 2021, 11:56 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ, ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ನಗರದ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದಲ್ಲಿ ಗುರುವಾರ ಹಿರಿಯರು ಹಾಗೂ 45 ವರ್ಷ ಮೇಲ್ಪಟ್ಟ ಇತರ ಕಾಯಿಲೆ ಹೊಂದಿರುವ ಪತ್ರಕರ್ತರಿಗೆ ಪ್ರಥಮ ಸುತ್ತಿನ ಲಸಿಕೆಗೆ ಚಾಲನೆ ಹಾಗೂ ಎರಡನೇ ಸುತ್ತಿನ ಲಸಿಕೆ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ, ದಂಡ ವಿಧಿಸುವ ಪ್ರಕ್ರಿಯೆ ನಡೆಸುವ ಅಗತ್ಯವಿದೆ. ಗಡಿ ಪ್ರದೇಶಗಳಲ್ಲಿ ನಿತ್ಯ ಓಡಾಡುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರಿಗೆ ತೊಂದರೆ ಆಗದಂತೆ ಕ್ರಮ ವಹಿಸಿ, ಅನಗತ್ಯವಾಗಿ ಸಂಚರಿಸುವವರ ಮೇಲೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ದೇವಸ್ಥಾನ ಸಿಬ್ಬಂದಿಗೂ ಲಸಿಕೆ:

ಈಗಾಗಲೇ ಆರೋಗ್ಯ ಕಾರ್ಯಕರ್ತರು ಹಾಗೂ ಸಮಾಜದ ಮುಂಚೂಣಿ ಸೇವೆಯಲ್ಲಿರುವವರಿಗೆ, 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ ಎಂದರು.

45 ವರ್ಷ ಮೇಲ್ಪಟ್ಟ ರಕ್ತದೊತ್ತಡ ಹಾಗೂ ಮಧುಮೇಹ ಹೊಂದಿರುವವರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಇದೇ ವೇಳೆ ಮುಂಚೂಣಿ ಸೇವಕರಾಗಿ ಗುರುತಿಸಿಕೊಂಡಿರುವ ದತ್ತಿ ಇಲಾಖೆಗೊಳಪಡುವ ದೇವಸ್ಥಾನಗಳ ಅರ್ಚಕರು, ಸಿಬ್ಬಂದಿಗೂ ಲಸಿಕೆ ನೀಡಲಾಗುವುದು. ಇವರಿಗೆ ಯಾವುದೇ ರೀತಿಯ ಆನ್‌ಲೈನ್ ಬುಕ್ಕಿಂಗ್ ಅಗತ್ಯವಿರುವುದಿಲ್ಲ. ನೇರವಾಗಿ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವೃದ್ಧಾಶ್ರಮ ಅಥವಾ ಆಶ್ರಯ ತಾಣಗಳಲ್ಲಿರುವ 60 ವರ್ಷ ಮೇಲಿನವರು 30ಕ್ಕಿಂತ ಹೆಚ್ಚು ಮಂದಿ ಇದ್ದಲ್ಲಿ, ಅವರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಲಸಿಕಾ ಕೇಂದ್ರಗಳಿಗೆ ಕರೆಸಿಕೊಂಡು ಲಸಿಕೆ ಒದಗಿಸಲಾಗುವುದು ಎಂದು ತಿಳಿಸಿದರು.

‘100 ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷೆ’

ಕಾಲೇಜು, ಹಾಸ್ಟೆಲ್‌ಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಕೋವಿಡ್ ಸೋಂಕಿತರ ಪ್ರಕರಣಗಳಲ್ಲೂ ಹೆಚ್ಚಳ ಕಂಡುಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ 100ಕ್ಕೂ ಅಧಿಕ ಕಾಲೇಜುಗಳಲ್ಲಿ ಒಂದು ಸುತ್ತಿನ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಸೋಂಕು ಪತ್ತೆಯಾದವರಲ್ಲಿ ಒಂದೆರಡು ಪ್ರಕರಣ ಹೊರತುಪಡಿಸಿ, ಉಳಿದವರಲ್ಲಿ ರೋಗಲಕ್ಷಗಳಿಲ್ಲ. ಹಾಗಾಗಿ ಯಾವುದೇ ರೀತಿಯ ಭಯ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಾರಿ ಮಾತನಾಡಿ, ‘ಗುರುವಾರ 69 ಜನರಿಗೆ ಕೋವಿಡ್ ದೃಢಪಟ್ಟಿದೆ. ಡಿಸೆಂಬರ್‌ನಿಂದ ಮಾರ್ಚ್ 14 ರವರೆಗೆ ಜಿಲ್ಲೆಯಲ್ಲಿ ಕೇರಳದ 8,347 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 425 ಮಂದಿಗೆ ಕೋವಿಡ್‌ ದೃಢವಾಗಿದೆ ಎಂದು ತಿಳಿಸಿದರು.

‘ಗೃಹರಕ್ಷಕರೇ ಮಾರ್ಷಲ್‌ಗಳು’

ಜಿಲ್ಲೆಯಲ್ಲಿ ಕೋವಿಡ್–19 ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮಾರ್ಷಲ್‌ಗಳ ಮಾದರಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಗೃಹರಕ್ಷಕರನ್ನು ಬಳಸಿಕೊಂಡು ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ಆರಂಭದಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಈ ವಿಧಾನ ಅನುಸರಿಸರಿಸಲಾಗುವುದು. ಬಳಿಕ ಜಿಲ್ಲೆಯ ಇತರ ಭಾಗಗಳಿಗೂ ವಿಸ್ತರಿಸಲಾಗುವುದು. ಜನಸಂದಣಿ ಇರುವ ಪ್ರದೇಶಗಳು, ಗಡಿ ಭಾಗ, ಬಸ್ ನಿಲ್ದಾಣ, ಸಭೆ ಸಮಾರಂಭಗಳಲ್ಲಿ ಜಿಲ್ಲಾಡಳಿತದಿಂದ ನಿಯೋಜಿಸಲಾದ ಗೃಹರಕ್ಷಕರು ಜಾಗೃತಿ ಮೂಡಿಸುವ, ಪರಿಶೀಲನೆ, ತಪಸಾಣೆ ನಡೆಸುವ ಕೆಲಸ ಮಾಡಲಿದ್ದಾರೆ. ಬಸ್‌ಗಳನ್ನು ನಿಲ್ಲಿಸಿ ಜನರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಗಿನ ವಿಡಿಯೊ ಕಾನ್ಫರೆನ್ಸ್ ಸಂದರ್ಭದಲ್ಲಿ ಹೆಚ್ಚುವರಿಯಾಗಿ 30ರಷ್ಟು ಗೃಹಕರಕ್ಷರ ನಿಯೋಜನೆಗೆ ಅನುಮತಿ ಕೋರಲಾಗಿದೆ ಎಂದರು.

ಸೋಂಕಿತರಿಗೆ ಚಿಕಿತ್ಸೆ, ಐಸೋಲೇಶನ್‌ಗೆ ಅಗತ್ಯ ಸೌಲಭ್ಯ
11 ಪಿಎಚ್‌ಸಿಗಳಲ್ಲಿ ಖಾಲಿ ವೈದ್ಯರ ಭರ್ತಿಗೆ ಪ್ರಸ್ತಾವ
51 ಮಂದಿ ಲ್ಯಾಬ್ ಟೆಕ್ನಿಶಿಯನ್‌ಗಳ ಗುತ್ತಿಗೆ ಅವಧಿ ವಿಸ್ತರಣೆ

***
ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದದಲ್ಲಿ ಗೃಹರಕ್ಷಕರ ಜೊತೆಗೆ ಆರೋಗ್ಯ ಅಧಿಕಾರಿಗಳು, ಪೊಲೀಸರು, ಜಿಲ್ಲಾಧಿಕಾರಿಯಿಂದ ಹಿಡಿದು ಹಿರಿಯ ಅಧಿಕಾರಿಗಳು ಇದೇ 19ರಿಂದಲೇ ತೊಡಗಿಕೊಳ್ಳಲಿದ್ದಾರೆ.

- ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT