ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 1ರವರೆಗೆ ಖರೀದಿಗೆ ಅವಕಾಶ

ಲಾಕ್‌ಡೌನ್ ನಿಯಮದಲ್ಲಿ ಇಂದಿನಿಂದ ಸಡಿಲಿಕೆ
Last Updated 20 ಜೂನ್ 2021, 15:54 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಇಂದಿನಿಂದ (ಜೂನ್‌ 21) ಲಾಕ್‌ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಈ ಸಂಬಂಧ ಅವರು ಬುಧವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಆಹಾರ, ದಿನಸಿ, ಹಣ್ಣು ಮತ್ತು ತರಕಾರಿಗಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು, ಬೀದಿಬದಿ ವ್ಯಾಪಾರ, ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಅಂಗಡಿಗಳು, ಪ್ರಾಣಿಗಳ ಮೇವು ಮಾರಾಟ ಮಾಡುವ ಅಂಗಡಿಗಳನ್ನು ಈ ನಿಗದಿತ ಸಮಯದಲ್ಲಿ ತೆರೆಯಲು ಅನುಮತಿ ನೀಡಲಾಗಿದೆ. ಈ ಅವಧಿಯ ನಂತರ ಲಾಕ್‌ಡೌನ್ ಮುಂದುವರಿಯುತ್ತದೆ.

ಸಿಮೆಂಟ್, ಸ್ಟೀಲ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿ ಅಂಗಡಿಗಳು, ಕಟ್ಟಡ ನಿರ್ಮಾಣ ಚಟುವಟಿಕೆಗಳು, ದುರಸ್ತಿ ಕಾರ್ಯಗಳನ್ನು ಕೋವಿಡ್ ನಿಯಮ ಪಾಲನೆಯೊಂದಿಗೆ ನಡೆಸಬಹುದು. ಟ್ಯಾಕ್ಸಿ ಮತ್ತು ಆಟೊರಿಕ್ಷಾಗಳಲ್ಲಿ ಗರಿಷ್ಠ ಇಬ್ಬರು ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡಲಾಗಿದೆ. ಈಗಾಗಲೇ ಕಾರ್ಯನಿರ್ವಹಿಸುವ ಕಚೇರಿಗಳ ಜೊತೆಗೆ ಕೃಷಿ ಸಂಬಂಧಿತ ಇಲಾಖೆಗಳು, ಲೋಕೋಪಯೋಗಿ ಇಲಾಖೆ, ವಸತಿ, ಪ್ರಾದೇಶಿಕ ಸಾರಿಗೆ ಕಚೇರಿ, ಸಹಕಾರ ಮತ್ತು ನಬಾರ್ಡ್, ಕೇಂದ್ರ ಸರ್ಕಾರದ ಕಂದಾಯ ಇಲಾಖೆ ಕಚೇರಿಗಳು ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರಾತ್ರಿ ಕರ್ಫ್ಯೂ ಮುಂದುವರಿಕೆ

ಅವಶ್ಯ ಚಟುವಟಿಕೆ ಹೊರತುಪಡಿಸಿ, ರಾತ್ರಿ 7ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಜನಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ತುರ್ತು ಸಂದರ್ಭದಲ್ಲಿ ರೋಗಿಗಳು, ಅವರ ಜೊತೆಗಿದ್ದವರು ಹೋಗಬಹುದು.

* ರಾತ್ರಿ ಕಾರ್ಯಾಚರಿಸುರುವ ಎಲ್ಲ ಕೈಗಾರಿಕೆಗಳು, ಕಂಪನಿಗಳಿಗೆ ಕಾರ್ಯನಿರ್ವಹಿಸಬಹುದು. ಈ ಸಂಸ್ಥೆಗಳ ನೌಕರರು, ತಮ್ಮ ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು.

* ಟೆಲಿಕಾಂ ಮತ್ತು ಇಂಟರ್‌ನೆಟ್‌ ಸೇವೆಯ ನೌಕರರು, ವಾಹನಗಳಿಗೆ ಆಯಾ ಸಂಸ್ಥೆ ನೀಡುವ ಗುರುತಿನ ಚೀಟಿಯನ್ನು ತೋರಿಸಿ ಸಂಚರಿಸಬಹುದು. ಐಟಿ ಮತ್ತು ಐಟಿಇಎಸ್ ಕಂಪನಿಗಳು, ಸಂಸ್ಥೆಯ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಯಿಂದ ಕಾರ್ಯನಿರ್ವಹಿಸಿ, ಉಳಿದವರು ಮನೆಯಿಂದ ಕಾರ್ಯನಿರ್ವಹಿಸಬಹುದು.

* ಔಷಧಾಲಯಗಳು, ವೈದ್ಯಕೀಯ ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಗ್ಯಾರೇಜ್, ಕನ್ನಡಕದ ಅಂಗಡಿಗಳು ಕಾರ್ಯನಿರ್ವಹಿಸಬಹುದು.

* ಟ್ರಕ್‌ಗಳು, ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ಇಲ್ಲ. ವಸ್ತುಗಳ ಹೋಂ ಡೆಲಿವರಿ ಸೇವೆ ಮತ್ತು ಇ-ಕಾಮರ್ಸ್ ಕಂಪನಿಗಳ ಕಾರ್ಯಾಚರಣೆಗೆ ಅನುಮತಿ ಇದೆ.

* ರೈಲುಗಳು ಮತ್ತು ವಿಮಾನ ಪ್ರಯಾಣಕ್ಕೆ ಅನುಮತಿ ಇದೆ. ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಇತ್ಯಾದಿಗಳಿಗೆ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳು ಪ್ರಯಾಣದ ದಾಖಲೆ ತೋರಿಸಿ, ಸಂಚರಿಸಬಹುದು. ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ ತರಬೇತಿ ನಡೆಸಬಹುದು. ಈ ಆದೇಶವು ಜುಲೈ 5ರ ಬೆಳಿಗ್ಗೆ 5 ಗಂಟೆವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ವಾರಾಂತ್ಯದಲ್ಲಿ ಎರಡು ದಿನ ಕರ್ಫ್ಯೂ

ಶುಕ್ರವಾರ ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಈಗಾಗಲೇ ನಿಗದಿಯಾಗಿರುವ ವಿವಾಹಗಳನ್ನು ಆಯಾ ಮನೆಯಲ್ಲಿ ಗರಿಷ್ಠ 25 ಜನರ ಉಪಸ್ಥಿತಿಯನ್ನು ನಡೆಸಬಹುದು. ಕೋವಿಡ್ ನಿಯಮ ಪಾಲಿಸಿ, ಗರಿಷ್ಠ ಐದು ಜನರ ಮಿತಿಯಲ್ಲಿ ಶವಸಂಸ್ಕಾರ ನಡೆಸಬಹುದು.

ಸಾರ್ವಜನಿಕರು ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಲು ಎಲ್ಲ ವಸ್ತುಗಳ 24X7 ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದೆ.
ಡಾ. ರಾಜೇಂದ್ರ ಕೆ.ವಿ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT