ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆವಿಮೆ ಯೋಜನೆ: ನೋಂದಣಿಗೆ ಸೂಚನೆ

Last Updated 20 ಮೇ 2022, 16:13 IST
ಅಕ್ಷರ ಗಾತ್ರ

ಮಂಗಳೂರು: ಪ್ರಸಕ್ತ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ಜಿಲ್ಲೆಯ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರೀತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ತೋಟಗಾರಿಕಾ ಇಲಾಖೆ ರೈತರಿಗೆ ಸಲಹೆ ನೀಡಿದೆ.

ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರುವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ, ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ರೈತರು ವಿಮಾ ಕಂತುಗಳನ್ನು ಪಾವತಿಸಲು ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್ ಅಥವಾ ಡಿಜಿಟಲ್ ಇ-ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು. ಯೋಜನೆಯಲ್ಲಿ ನೋಂದಣಿ ಮಾಡಿಸಲು ಜೂನ್ 30 ಕೊನೆಯ ದಿನವಾಗಿದೆ.

ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳನ್ನು ವಿಮಾ ಘಟಕಗಳಾಗಿ ಅಧಿಸೂಚಿಸಲಾಗಿದ್ದು, ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದು. ಅಡಿಕೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ₹ 1.28 ಲಕ್ಷ ಮೊತ್ತಕ್ಕೆ ವಿಮಾ ಕಂತು ₹ 6,400 ಹಾಗೂ ಕಾಳುಮೆಣಸು ಬೆಳೆಗೆ ವಿಮಾ ಮೊತ್ತ ₹ 47ಸಾವಿರ ಮೊತ್ತಕ್ಕೆ ವಿಮಾಕಂತು ₹ 2,350 ನಿಗದಿಪಡಿಸಲಾಗಿದೆ.

ವಿಮಾ ನಷ್ಟ ಪರಿಹಾರವು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಮುಖಾಂತರ ಆಗುವುದರಿಂದ ವಿಮಾ ಅರ್ಜಿಯಲ್ಲಿ ಸಕ್ರಿಯ ಆಧಾರ್ ಮಾಹಿತಿಯನ್ನು ನೀಡಬೇಕು. ಬೆಳೆ ಸಾಲ ಹೊಂದಿಲ್ಲದ ರೈತರು ಆಧಾರ್ ಮಾಹಿತಿಯೊಂದಿಗೆ ಜಮೀನಿನ ಪಹಣಿ ಪತ್ರಿಕೆ ಪ್ರತಿ, ಉಳಿತಾಯ ಖಾತೆ ಮಾಹಿತಿ ದಾಖಲೆ, ಸ್ವಯಂಘೋಷಣೆ ನಮೂನೆಗಳನ್ನು ವಿಮಾಕಂತಿನ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ, ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ರೈತಸಂಪರ್ಕ ಕೇಂದ್ರ, ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್.ನಾಯ್ಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT