ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ದತ್ತಮಾಲಾ ಅಭಿಯಾನ

ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಿ: ಸುನಿಲ್‌
Last Updated 19 ಡಿಸೆಂಬರ್ 2020, 3:35 IST
ಅಕ್ಷರ ಗಾತ್ರ

ಮಂಗಳೂರು: ಚಿಕ್ಕಮಗಳೂರಿನ ದತ್ತಪೀಠದಲ್ಲಿ ದತ್ತ ಜಯಂತಿಯ ಅಂಗವಾಗಿ ದತ್ತಮಾಲಾ ಅಭಿಯಾನವು ಇದೇ 19ರಿಂದ 29ರವರೆಗೆ ನಡೆಯಲಿದ್ದು, 29 ರಂದು ದತ್ತಪೀಠಕ್ಕೆ ತೆರಳಿ ದತ್ತಪೀಠ, ದತ್ತಪಾದುಕೆ ದರ್ಶನದ ಮೂಲಕ ಈ ಅಭಿಯಾನ ಕೊನೆಗೊಳ್ಳಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕರು ಸುನಿಲ್ ಕೆ.ಆರ್. ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 28 ರಂದು ದತ್ತಪೀಠದಲ್ಲಿ ಅನುಸೂಯ ದೇವಿ ಪೂಜೆ, ಗಣಪತಿ ಹೋಮ ಮತ್ತು ದುರ್ಗಾಹೋಮ ನಡೆಯಲಿವೆ. 29 ರಂದು ದತ್ತಜಯಂತಿ ಇದ್ದು, ಗಣಪತಿಹೋಮ, ದತ್ತಹೋಮ ಹಾಗೂ ದತ್ತಪೀಠ, ದತ್ತಪಾದುಕೆ ದರ್ಶನ ನಡೆಯಲಿದೆ ಎಂದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ದತ್ತಮಾಲೆಯನ್ನು ಧರಿಸಿ, ಅತೀ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ. ಮಂಗಳೂರಿನಿಂದ 5ಸಾವಿ ಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ, ಶನಿವಾರ ನಗರದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಭಕ್ತರು ದತ್ತಮಾಲಾ ಧಾರಣೆ ಮಾಡಲಿದ್ದಾರೆ ಎಂದು ತಿಳಿಸಿದರು.

ದತ್ತಪೀಠದ ಗುಹಾಂತರ ದೇವಾಲಯದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ತ್ರಿಕಾಲ ಪೂಜೆ ನಡೆಯಬೇಕು. ದತ್ತಪೀಠಕ್ಕೆ ಒಬ್ಬ ಶಾಶ್ವತ ಹಿಂದೂ ಕಾರ್ಯನಿರ್ವಹಣಾಧಿಕಾರಿ ನೇಮಿಸಬೇಕು. ದತ್ತಪೀಠದಲ್ಲಿ ಯಾವುದೇ ಇಸ್ಲಾಂನ ಚಟುವಟಿಕೆಗೆ ಅವಕಾಶ ನೀಡಬಾರದು. ಇಸ್ಲಾಂ ವಿಧಾನಗಳು ಮತ್ತು ಗೋರಿಗಳನ್ನು ನಾಗೇನಹಳ್ಳಿಯಲ್ಲಿರುವ ಮೂಲ ಬಾಬಾಬುಡನ್ ದರ್ಗಾಕ್ಕೆ ವರ್ಗಾಯಿಸಬೇಕು. ಶ್ರೀಗುರು ದತ್ತಾತ್ರೇಯ ಪೀಠ ಮತ್ತು ಪರಿಸರವನ್ನು ಹಿಂದೂಗಳ ಪುಣ್ಯಕ್ಷೇತ್ರವೆಂದು ಘೋಷಿಸಬೇಕು. ಅದರ ಸಂಪೂರ್ಣ ರಕ್ಷಣೆ ಆಗಬೇಕು ಎಂದು ಆಗ್ರಹಿಸಿದರು.

ದತ್ತಪೀಠದಲ್ಲಿದ್ದ ಅಮೂಲ್ಯ ವಿಗ್ರಹಗಳ ಅತಿಕ್ರಮಣ, ಕಾಣೆಯಾಗಿರುವ ಕಾಣಿಕೆ ವಸ್ತುಗಳು ಮತ್ತು ಆಸ್ತಿಪಾಸ್ತಿ ಅಕ್ರಮ ಹಸ್ತಾಂತರ ಹಾಗೂ ಮಾರಾಟವಾಗಿದ್ದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ದತ್ತಪೀಠಕ್ಕೆ ಬರುವ ಹಿಂದೂ ಭಕ್ತಾದಿಗಳಿಗೆ, ಸ್ವಾಮೀಜಿಗಳಿಗೆ ಪೂಜೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ ಇದ್ದರು.

‘ಗೋಡೆಬರಹ: ಎನ್‌ಐಎಗೆ ವಹಿಸಿ’

ಗೋಡೆಬರಹ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸುವಂತೆ ಆಗ್ರಹಿಸಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ ಕೊಲೆ ಯತ್ನವನ್ನು ಖಂಡಿಸಿ ಇದೇ 23 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಹೇಳಿದರು.

ಗೋಡೆ ಬರಹದ ಮೂಲಕ ಇಲ್ಲಿ ಭಯೋತ್ಪಾದಕ ಚಟುವಟಿಕೆ ಪ್ರಾರಂಭಿಸಲು ಯತ್ನಿಸುತ್ತಿರುವುದು ಆತಂಕಕಾರಿ. ಇದರ ಹಿಂದೆ ಭಯೋತ್ಪಾದಕರ ನಂಟಿರುವ ಸಾಧ್ಯತೆ ಇದೆ. ಈ ಪ್ರಕರಣವನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಬೇರೂರಿರುವ ಸಂಶಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.

ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌ ಗಣೇಶ್ ಕಾಮತ್ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಕಳೆದ ವರ್ಷ ಎನ್‌ಆರ್‌ಸಿ ಪ್ರತಿಭಟನೆ ಹೆಸರಿನಲ್ಲಿ ನಡೆಸಿದ ಕೃತ್ಯವನ್ನೇ ಪುನರಾವರ್ತಿಸಲು ಸಂಚು ರೂಪಿಸಲಾಗುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT