ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ: ಡಾ.ರಾಜೇಂದ್ರ ಭರವಸೆ

ಮುಖಂಡರ ಜೊತೆಗಿನ ಸಭೆಯಲ್ಲಿ ಜಿಲ್ಲಾಧಿಕಾರಿ
Last Updated 11 ಮೇ 2022, 16:25 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತದಿಂದ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ರೈತರಿಗೆ ಭರವಸೆ ನೀಡಿದರು.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ರೈತರ ಅಹವಾಲುಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂಗಾರು ಹತ್ತಿರವಿದೆ. ರೈತ ಸಂಪರ್ಕ ಕೇಂದ್ರದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲಾಗುವುದು. ಅಲ್ಲಿ ಕೊರತೆ ಆಗದಂತೆ ಎಚ್ಚರ ವಹಿಸಲಾಗಿದೆ. ಡಿಎಪಿ, ಯೂರಿಯಾ ಗೊಬ್ಬರದ ಸಮಸ್ಯೆ ಕಂಡುಬಂದಲ್ಲಿ ರೈತರು ಹಾಗೂ ರೈತ ಸಂಘಟನೆಗಳು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರಿಗೆ ನೇರವಾಗಿ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದರು.

ರಸಗೊಬ್ಬರ ದಾಸ್ತಾನು ಮಾಡುವ ಸಂದರ್ಭದಲ್ಲಿ ಚೀಲಕ್ಕೆ ಕೊಕ್ಕೆ ಹಾಕದಂತೆ ಎಚ್ಚರ ವಹಿಸಬೇಕು, 50 ಕೆ.ಜಿ. ರಸಗೊಬ್ಬರದ ಚೀಲಕ್ಕೆ ಕಬ್ಬಿಣದ ಸಲಾಕೆಯ ಕೊಕ್ಕೆ ಹಾಕಿದಲ್ಲಿ ರಂಧ್ರದಿಂದ ಗೊಬ್ಬರ ಪೋಲಾಗುವ ಸಾಧ್ಯತೆ ಇರಲಿದೆ. ಇಂತಹ ವಿಷಯಗಳಲ್ಲಿ ಕೃಷಿ ಇಲಾಖೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಬೆಳೆ ವಿಮೆ ಹಾಗೂ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಚರ್ಚೆಯಲ್ಲಿ ಬೆಳೆ ವಿಮೆಗೆ ನಿಗದಿ ಪಡಿಸಲಾದ ಬೆಳೆಗಳಿಗೆ ಬ್ಯಾಂಕ್ ಖಾತೆಗಳಿರುವ ಬ್ಯಾಂಕುಗಳೇ ಬೆಳೆ ವಿಮೆ ಮಾಡಿಕೊಡುತ್ತವೆ. ಸಾಲ ಪಡೆಯದ ರೈತರು ಕೂಡ ನಿಗದಿತ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಅರ್ಹರಿರುತ್ತಾರೆ. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಬೆಳೆ ಸಮೀಕ್ಷೆ ಗೊಂದಲ ಪರಿಹಾರ:

ವಿವಿಧ ರೀತಿಯ ಬೆಳೆ ಇದ್ದರೂ, ಬೆಳೆ ಸಮೀಕ್ಷೆ ವೇಳೆ ಕೇವಲ ಒಂದು ಬೆಳೆಯನ್ನು ಮಾತ್ರ ಆರ್‌ಟಿಸಿಯಲ್ಲಿ ನಮೂದಿಸಲಾಗುತ್ತಿದೆ. ಇದು ರೈತರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಕೃಷಿ ಇಲಾಖೆ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ರೈತರು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ರೈತರು ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ಬೆಳೆ ಬೆಳೆದಾಗಲೂ ಆರ್‌ಟಿಸಿಯಲ್ಲಿ ಅವುಗಳನ್ನು ಸೂಕ್ತವಾಗಿ ದಾಖಲಿಸಬೇಕು. ಈ ಸಮಸ್ಯೆಯ ಬಗ್ಗೆ ಕೃಷಿ ಇಲಾಖೆ ಕೂಡಲೇ ಪರಿಹಾರ ಒದಗಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯಕ್, ಕೃಷಿ, ಪಶುಸಂಗೋಪನಾ ಇಲಾಖೆ, ಅರಣ್ಯ ಇಲಾಖೆ, ಮೆಸ್ಕಾಂನ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ರೂಪೇಶ್ ರೈ, ಸಂಪತ್, ಆಲ್ವಿನ್, ಧನಕೀರ್ತಿ ಬಳಿಪ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ರೈತ ಮುಖಂಡರು ಭಾಗವಹಿಸಿದ್ದರು.

‘ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಪಡೆಯಿರಿ’

ಜಿಲ್ಲೆಯ ಎಲ್ಲ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವಂತೆ ಸಲಹೆ ನೀಡಿದ ಜಿಲ್ಲಾಧಿಕಾರಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಡ್ ಪಡೆಯಲು ಕಷ್ಟವಾದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ನೆರವು ಪಡೆಯುವಂತೆ ತಿಳಿಸಿದರು.

ಕೆಲ ಸಮಸ್ಯೆಗಳಿಂದಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯದ ರೈತರ ಪಟ್ಟಿ ನೀಡಿದರೆ, ಅದನ್ನು ಸರಿಪಡಿಸಲಾಗುವುದು. ಈ ಬಗ್ಗೆ ಜಾಗೃತಿ ಮೂಡಿಸಲು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು, ರೈತರು ಕೂಡ ಉದ್ಯೋಗ ಖಾತ್ರಿ, ಪಿಎಂ. ಕಿಸಾನ್, ವಿದ್ಯಾನಿಧಿ ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಪ್ರಚಾರ ಮಾಡುವಂತೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT