ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ಧರ್ಮಸ್ಥಳದ ಸೇವಾ ಕಾರ್ಯಗಳು ಅನುಕರಣೀಯ: ವಿಶ್ವೇಶ್ವರ ಹೆಗಡೆ ಕಾಗೇರಿ
Last Updated 24 ಅಕ್ಟೋಬರ್ 2022, 15:14 IST
ಅಕ್ಷರ ಗಾತ್ರ

ಉಜಿರೆ: ‘ಸತ್ಯ, ಧರ್ಮ, ನ್ಯಾಯ- ನೀತಿಯ ನೆಲೆಯಲ್ಲಿ ಸನಾತನ ಸಂಸ್ಕೃತಿಯ ಸಂರಕ್ಷಣೆಯೊಂದಿಗೆ ಮನಪರಿವರ್ತನೆ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸೇವಾ ಕಾರ್ಯಗಳು ಹಾಗೂ ಕ್ರಾಂತಿಕಾರಿ ಪರಿವರ್ತನೆ ಸಾರ್ವಕಾಲಿಕ ಮೌಲ್ಯ ಹೊಂದಿದ್ದು, ಆದರ್ಶ ಹಾಗೂ ಅನುಕರಣೀಯ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ 55ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಸಮಾರಂಭದಲ್ಲಿ ಸೋಮವಾರ ಅವರು ಅಭಿನಂದನಾ ಭಾಷಣ ಮಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಹೆಗ್ಗಡೆಯವರ ಸೇವೆ, ಸಾಧನೆಯನ್ನು ಮನ್ನಿಸಿಯೇ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ. ಧಾರ್ಮಿಕ, ಸಾಮಾಜಿಕ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಕೃಷಿ, ಪ್ರಕೃತಿ-ಪರಿಸರ ಸಂರಕ್ಷಣೆ ಮೊದಲಾದ ಕ್ಷೇತ್ರಗಳಲ್ಲಿ ಹೊಸತನದ ಚಿಂತನೆಯೊಂದಿಗೆ ಕ್ರಾಂತಿಕಾರಿ ಪರಿವರ್ತನೆ ಮಾಡಿ, ಭವಿಷ್ಯದ ಬಗ್ಗೆ ಹೆಗ್ಗಡೆಯವರು ಹೊಸ ಭರವಸೆಯನ್ನು ಮೂಡಿಸಿದ್ದಾರೆ’ ಎಂದು ಕಾಗೇರಿ ಅಭಿಪ್ರಾಯಪಟ್ಟರು.

‘ಇಂದು ಶಿಕ್ಷಣ ಹಣ ಗಳಿಸುವ ಉದ್ಯಮವಾಗಿದೆ. ನೈತಿಕ ಮೌಲ್ಯಗಳು ಕುಸಿದಿವೆ. ಪ್ರತಿಭೆ ಕಮರಿ ಹೋಗುತ್ತಿದೆ. ಮನೆಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕಾರಯುತ ನೈತಿಕ ಶಿಕ್ಷಣ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಬೇಕು’ ಎಂದು ಅವರು ಹೇಳಿದರು.

ಜೈನಧರ್ಮದ ತೀರ್ಥಂಕರರಾದ ಆದಿನಾಥ, ಪಾರ್ಶ್ವನಾಥ, ಮಹಾವೀರರಂತೆ ಹೆಗ್ಗಡೆ ಅವರು ಕೂಡಾ ಸತ್ಯ, ಅಹಿಂಸೆ, ಅಪರಿಗ್ರಹ, ತ್ಯಾಗ, ಬ್ರಹ್ಮಚರ್ಯ ಮೊದಲಾದ ಅಣುವೃತಗಳನ್ನು ಹೆಗ್ಗಡೆಯವರು ಪಾಲನೆ ಮಾಡಿ, ಸಮಾಜಕ್ಕೂ ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹಾಗೂ ಹೆಗ್ಗಡೆಯವರ ಸೇವಾ ಕಾರ್ಯಗಳ ಕಾರ್ಯವೈಖರಿ ಮತ್ತು ಸಾಧನೆಯ ಫಲವಾಗಿ ಭವಿಷ್ಯದಲ್ಲಿ ಭಾರತ ವಿಶ್ವಗುರು ಮಾನ್ಯತೆಯನ್ನು ಹೊಂದಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೊಸ ಯೋಜನೆಗಳನ್ನು ಪ್ರಕಟಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಬೆಳ್ತಂಗಡಿ ಶಾಸಕ ಕೆ. ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಧರ್ಮಸ್ಥಳದ ಹೇಮಾವತಿ ಡಿ. ಹೆಗ್ಗಡೆ, ಡಿ.ಸುರೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್, ಡಿ.ರಾಜೇಂದ್ರ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮತ್ತು ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಸ್ವಾಗತಿಸಿದರು. ಉಪನ್ಯಾಸ ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT