ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರದಿಂದ ದ್ವೇಷ ಸಾಧನೆ: ಸಿದ್ದರಾಮಯ್ಯ ಆರೋಪ

ಮಂಗಳೂರು
Last Updated 31 ಆಗಸ್ಟ್ 2019, 8:14 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಸರ್ಕಾರ ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ವಿರುದ್ಧ ದ್ವೇಷ ಸಾಧಿಸುತ್ತಿದೆ. ಅದಕ್ಕಾಗಿಯೇ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಮಂಗಳೂರಿಗೆ ಬಂದಿಳಿದ ಬಳಿಕ ಪತ್ರಕರ್ತರ ಮಾತನಾಡಿದ ಅವರು, ‘ಶಿವಕುಮಾರ್‌ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸಬಹುದು. ಆದರೆ, ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ. ಕಿರುಕುಳ ನೀಡುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಬ್ಯಾಂಕ್‌ಗಳಲ್ಲಿ ಹಸ್ತಕ್ಷೇಪ:

ಆರ್ಥಿಕ ಬಲವರ್ಧನೆಯ ಹೆಸರಿನಲ್ಲಿ ದೇಶದ ಸಾರ್ವಜನಿಕ ವಲಯದ 27 ಬ್ಯಾಂಕ್‌ಗಳನ್ನು 12 ಬ್ಯಾಂಕ್‌ಗಳನ್ನಾಗಿ ವಿಲೀನ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ವಿಲೀನದಿಂದ ಬ್ಯಾಂಕ್‌ಗಳ ಶಕ್ತಿ ಹೆಚ್ಚುವುದಿಲ್ಲ. ಅನುತ್ಪಾದಕ ಆಸ್ತಿಯ ಪ್ರಮಾಣ ತಗ್ಗುವುದಿಲ್ಲ. ಸಾಲ ನೀಡುವ ಶಕ್ತಿಯೂ ಹೆಚ್ಚುವುದಿಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಬ್ಯಾಂಕ್‌ಗಳಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಹೆಚ್ಚಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನಲ್ಲೂ ಹಸ್ತಕ್ಷೇಪ ಹೆಚ್ಚಾಗಿದೆ. ಇದರಿಂದಾಗಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಟೀಕಿಸಿದರು.

ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರ ಕುಸಿದಿದೆ. ಆರು ವರ್ಷಗಳಲ್ಲಿ ಮೊದಲ ಬಾರಿಗೆ ಜಿಡಿಪಿ ಬೆಳವಣಿಗೆ ದರ ಶೇ 5ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಆದರೆ, ಅದು ಸರಿಯಾದ ಮಾಹಿತಿ ಅಲ್ಲ. ಜಿಡಿಪಿ ಬೆಳವಣಿಗೆ ದರ ಶೇ 3.7ರಿಂದ ಶೇ 4ರ ನಡುವಿನಲ್ಲೇ ಇದೆ. ಡಾ.ಮನಮೋಹನ್‌ ಸಿಂಗ್‌ ಪ್ರಧಾನಿ ಆಗಿದ್ದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 8ರಷ್ಟು ತಲುಪಿತ್ತು ಎಂದರು.

ಈಗ ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿಫಲ ಆರ್ಥಿಕ ನೀತಿಗಳೇ ಕಾರಣ. ನೋಟುಗಳ ನಿಷೇಧ, ಸರಕು ಮತ್ತು ಸೇವಾ ತೆರಿಗೆಯ ಅವೈಜ್ಞಾನಿಕ ಅನುಷ್ಠಾನ ಮತ್ತು ಹೂಡಿಕೆದಾರರ ಹಿಂದೇಟು ಈ ಪರಿಸ್ಥಿತಿಗೆ ಕಾರಣ. ಇದಕ್ಕೆ ಮೋದಿ ಸರ್ಕಾರವೇ ಹೊಣೆ ಎಂದು ಹೇಳಿದರು.

ಈಗ ದೇಶದಲ್ಲಿ ಉದ್ಯೋಗ ಕಡಿತದ ಯುಗ ಆರಂಭವಾಗಿದೆ. ವಾಹನ ತಯಾರಿಕೆ, ಬಿಡಿ ಭಾಗಗಳ ತಯಾರಿಕೆ ಮತ್ತು ಸಿದ್ಧ ಉಡುಪು ತಯಾರಿಕೆ ಉದ್ಯಮ ಸಂಕಷ್ಟದಲ್ಲಿದೆ. ಅಲ್ಲಿ ಉದ್ಯೋಗ ಕಡಿತ ಆರಂಭವಾಗಿದೆ. ಸರಿಯಾದ ಆರ್ಥಿಕ ನೀತಿ ರೂಪಿಸದಿದ್ದರೆ ದೇಶಕ್ಕೆ ಸಂಕಷ್ಟ ಕಾದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT