ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪುತ್ತೂರು | ಕುಡಿಯುವ ನೀರಿನ ಸಮಸ್ಯೆ ಸರಿಪಡಿಸದಿದ್ದರೆ ಹೋರಾಟ: ಎಚ್ಚರಿಕೆ

ಜಲಸಿರಿ ಯೋಜನೆಯಿಂದ ಜನರ ಜೀವನದೊಂದಿಗೆ ಚೆಲ್ಲಾಟ: ಆರೋಪ
Published 30 ಮಾರ್ಚ್ 2024, 14:12 IST
Last Updated 30 ಮಾರ್ಚ್ 2024, 14:12 IST
ಅಕ್ಷರ ಗಾತ್ರ

ಪುತ್ತೂರು: ನಗರಸಭೆ ವ್ಯಾಪ್ತಿಯ ಪ್ರತಿ ಮನೆಗಳಿಗೆ ದಿನದ 24 ಗಂಟೆಯೂ ಕುಡಿಯುವ ನೀರು ಒದಗಿಸುತ್ತೇವೆ ಎಂದು ಭರವಸೆ ನೀಡಿ ಆರಂಭಿಸಲಾಗಿದ್ದ ಜಲಸಿರಿ ಯೋಜನೆಯಿಂದ ಇದೀಗ ಜನರಿಗೆ ಸರಿಯಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಈ ಹಿಂದೆ ಇದ್ದ ಕೊಳವೆಬಾವಿ ನೀರು ಪೂರೈಕೆ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ನೀರಿನ ಸಮಸ್ಯೆಯನ್ನು 15 ದಿನಗಳ ಒಳಗೆ ಸರಿಪಡಿಸದಿದ್ದರೆ ನಾಗರಿಕ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಗರಸಭೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ನಾಗರಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಗೋಳಿಕಟ್ಟೆ ಎಚ್ಚರಿಕೆ ನೀಡಿದರು.

ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಲಸಿರಿ ಯೋಜನೆ ಅನುಷ್ಠಾನದ ಆರಂಭದಲ್ಲಿ ಯೋಜನೆಯಡಿ 24X7 ಕುಡಿಯುವ ನೀರು ಪೂರೈಸುವ ಆಶ್ವಾಸನೆ ನೀಡಲಾಗಿತ್ತು. ಇದೀಗ ವಾರಕ್ಕೆ ಮೂರು ದಿನ ಕೇವಲ 2 ಗಂಟೆ ಮಾತ್ರ ನೀರು ಒದಗಿಸಲಾಗುತ್ತಿದೆ. ಉಪ್ಪಿನಂಗಡಿ ಅಣೆಕಟ್ಟೆಯಲ್ಲಿ ಬೇಕಾದಷ್ಟು ನೀರು ಇದ್ದರೂ ಪೂರೈಕೆ ಮಾಡದೆ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಜಲರಿಸಿ ಯೋಜನೆ ನಗರದ ಜನರಿಗೆ ನೀರು ಒದಗಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಈ ಹಿಂದೆ ಇದ್ದ ಮೀಟರ್‌ಗಳನ್ನು ತೆರವುಗೊಳಿಸಿ ಹೊಸ ಮೀಟರ್‌ ಅಳವಡಿಸಲಾಗಿದೆ. ಈ ಮೀಟರ್ ಮೂಲಕ ಈ ಹಿಂದಿನ ನೀರಿನ ಶುಲ್ಕದಿಂದ 5 ಪಟ್ಟು ಹೆಚ್ಚಿನ ಶುಲ್ಕವನ್ನು ವಸೂಲು ಮಾಡಲಾಗುತ್ತಿದೆ. ಈ ಹಿಂದೆ ನಾವು ಖರೀದಿಸಿ ಅಳವಡಿಸಿದ್ದ ಹಿತ್ತಾಳೆಯ ಮೀಟರ್‌ಗಳನ್ನು ಯಾವುದೇ ಸೂಚನೆ ನೀಡದೆ ತೆರವುಗೊಳಿಸಿ ಅದನ್ನು ನಮಗೆ ನೀಡಿಲ್ಲ. ನಗರದಲ್ಲಿ 11 ಸಾವಿರ ಮನೆಗಳಿದ್ದು, ಸಂಗ್ರಹಿಸಿದ ಹಳೆಯ ಮೀಟರ್ ಸಂಗ್ರಹದ ಹಿಂದೆ ದೊಡ್ಡ ದಂದೆ ಇದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ ಎಂದು ಅವರು ತಿಳಿಸಿದರು.

2 ವರ್ಷದಲ್ಲಿ 9 ಸಾವಿರ ಮನೆಗಳಿಗೆ ಮಾತ್ರ ನೀರಿನ ಸಂಪರ್ಕ ಆಗಿದೆ. ಹಲವು ಕಡೆ ಹಳೆಯ ಪಿವಿಸಿ ಪೈಪ್‌ಗೆ ಜಲಸಿರಿ ಪೈಪ್ ಜೋಡಿಸಿದ್ದು. ಅಲ್ಲಲ್ಲಿ ಸೋರಿಕೆಯಾಗುತ್ತಿದೆ. ಪುತ್ತೂರು ನಗರದಲ್ಲಿ 174 ಕೊಳವೆಬಾವಿಗಳಿದ್ದು, ಈ ಪೈಕಿ 34 ಕೊಳವೆಬಾವಿ ಕೆಟ್ಟು ಹೋಗಿವೆ. ಉಳಿದ ಕೊಳವೆ ಬಾವಿಗಳು ಸುಸ್ಥಿತಿಯಲ್ಲಿವೆ. ಇವೆಲ್ಲವನ್ನೂ ಜಿಲ್ಲಾಧಿಕಾರಿ ಗಮನಿಸಿ ನೀರಿನ ಸಮಸ್ಯೆ ಪರಿಹರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT