ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,821 ಕಾಯಂ ಶಿಕ್ಷಕರ ಹುದ್ದೆ ಖಾಲಿ

1,004 ಅತಿಥಿ ಶಿಕ್ಷಕರ ನೇಮಕ
Published 9 ಜೂನ್ 2023, 21:30 IST
Last Updated 9 ಜೂನ್ 2023, 21:30 IST
ಅಕ್ಷರ ಗಾತ್ರ

ಮಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಾಬಲ್ಯ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವುದೇ ದೊಡ್ಡ ಸವಾಲು. ಈ ನಡುವೆ ಇರುವ ಸರ್ಕಾರಿ ಶಾಲೆಗಳು ಕಾಯಂ ಶಿಕ್ಷಕರ ಕೊರತೆಯಿಂದ ಬಳಲುತ್ತಿದ್ದು, ಈ ವರ್ಷವೂ ಬೋಧನೆಗೆ ಅತಿಥಿ ಶಿಕ್ಷಕರನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಎದುರಾಗಿದೆ.

ಜಿಲ್ಲೆಯಲ್ಲಿ ಒಟ್ಟು 901 ಸರ್ಕಾರಿ ಪ್ರಾಥಮಿಕ ಶಾಲೆಗಳು, 170 ಸರ್ಕಾರಿ ಪ್ರೌಢಶಾಲೆಗಳು ಇವೆ. ಪ್ರಾಥಮಿಕ ಶಾಲೆಗಳಿಗೆ 4,445 ಮಂಜೂರು ಹುದ್ದೆಗಳು ಇದ್ದು, ಅವುಗಳಲ್ಲಿ 2,895 ಶಿಕ್ಷಕರ ಹುದ್ದೆಗಳು ಮಾತ್ರ ಭರ್ತಿ ಇವೆ. 1,550 ಹುದ್ದೆಗಳಿಗೆ ಕಾಯಂ ಶಿಕ್ಷಕರು ಇಲ್ಲ. ಈ ನಡುವೆ ಶೈಕ್ಷಣಿಕ ವರ್ಷದ ಆರಂಭದಲ್ಲಿ 828 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಬಂಟ್ವಾಳ ತಾಲ್ಲೂಕಿನಲ್ಲಿ ಗರಿಷ್ಠ ಅಂದರೆ 416 ಕಾಯಂ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಬೆಳ್ತಂಗಡಿ ಹಾಗೂ ಪುತ್ತೂರು ತಾಲ್ಲೂಕುಗಳಲ್ಲಿ ತಲಾ 338, ಸುಳ್ಯ ತಾಲ್ಲೂಕಿನಲ್ಲಿ 196, ಮಂಗಳೂರು ದಕ್ಷಿಣದಲ್ಲಿ 109, ಮೂಡುಬಿದಿರೆ ತಾಲ್ಲೂಕಿನಲ್ಲಿ 83, ಮಂಗಳೂರು ಉತ್ತರದಲ್ಲಿ 70 ಕಾಯಂ ಶಿಕ್ಷಕರ ಹುದ್ದೆಗಳು ಭರ್ತಿ ಆಗಬೇಕಾಗಿವೆ.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು 1,391 ಮಂಜೂರು ಹುದ್ದೆಗಳಿದ್ದು, 1,076 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 271 ಹುದ್ದೆಗಳಿಗೆ ಕಾಯಂ ಶಿಕ್ಷಕರು ಇಲ್ಲ. 176 ಅತಿಥಿ ಶಿಕ್ಷಕರು ನೇಮಕಗೊಂಡಿದ್ದಾರೆ.

‘ಬೆಂಗ್ರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 593 ವಿದ್ಯಾರ್ಥಿಗಳು ಇದ್ದು, 15 ಶಿಕ್ಷಕರ ಹುದ್ದೆಗಳು ಮಂಜೂರು ಇದ್ದರೆ, ಎಂಟು ಕಾಯಂ ಶಿಕ್ಷಕರು ಇದ್ದಾರೆ. ಕಳೆದ ಸಾಲಿನಲ್ಲಿ ಏಳು ಅತಿಥಿ ಶಿಕ್ಷಕರನ್ನು ಶಿಕ್ಷಣ ಇಲಾಖೆ ನೇಮಿಸಿತ್ತು. ಈ ಬಾರಿ ಐವರು ಅತಿಥಿ ಶಿಕ್ಷಕರ ನೇಮಕವಾಗಿದೆ. ವಿದ್ಯಾರ್ಥಿಗಳು ಹೆಚ್ಚಿರುವ ಕಾರಣ ವಿಷಯವಾರು ಪಾಠ ಮಾಡಲು ಹೆಚ್ಚುವರಿ ಅತಿಥಿ ಶಿಕ್ಷಕರನ್ನು ಒದಗಿಸಬೇಕು’ ಎಂದು ಎಸ್‌ಡಿಎಂಸಿ ಪ್ರಮುಖ ತಯ್ಯುಬ್ ಬೆಂಗ್ರೆ ಒತ್ತಾಯಿಸಿದರು.

‘ವಿಷಯವಾರು ಶಿಕ್ಷಕರು ಇದ್ದರೆ, ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತದೆ. ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಬದಲಾಗಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದು ಅನಿವಾರ್ಯವಾಗುತ್ತದೆ’ ಎಂದು ಪುತ್ತೂರಿನ ಪಾಲಕಿ ಸ್ಮಿತಾ ಅಭಿಪ್ರಾಯ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT