ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಮಿಷ– ಗಮನಕ್ಕೆ ತನ್ನಿ: ಜಿಲ್ಲಾಧಿಕಾರಿ

ಜ್ಯುವೆಲ್ಲರಿ ಮಳಿಗೆ, ಪೆಟ್ರೋಲ್‌ ಬಂಕ್‌, ಸೀರೆ ಅಂಗಡಿ ಮೇಲೆ ಮಫ್ತಿಯಲ್ಲಿ ನಿಗಾ
Last Updated 1 ಏಪ್ರಿಲ್ 2023, 13:57 IST
ಅಕ್ಷರ ಗಾತ್ರ

ಮಂಗಳೂರು: ಮತ ಗಳಿಸುವ ಉದ್ದೇಶದಿಂದ ಯಾವುದೇ ಪಕ್ಷದ ಮುಖಂಡರು, ಅಭ್ಯರ್ಥಿಗಳು ಅಥವಾ ಕಾರ್ಯಕರ್ತರುಹಣ, ವಸ್ತು ರೂಪದ ಉಡುಗೊರೆ ಅಥವಾ ಇನ್ನಿತರ ಆಮಿಷವೊಡ್ಡಿದರೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಸಾರ್ವಜನಿಕರನ್ನು ಕೋರಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿ ಸಿ–ವಿಜಿಲ್‌ ಆ್ಯಪ್‌ ಅಥವಾ ಸಹಾಯವಾಣಿ ( 1950 ) ಮೂಲಕ ಮಾಹಿತಿ ನೀಡಬಹುದು. ಈ ದೂರುಗಳ ಬಗ್ಗೆ ಕೇಂದ್ರ ಚುನಾವಣಾ ಆಯೋಗವೇ ಪರಿಶೀಲನೆ ನಡೆಸಲಿದೆ. ಮಾಹಿತಿ ನೀಡಿದವರ ವಿವರಗಳನ್ನು ಗೋಪ್ಯವಾಗಿಡಲಾಗುತ್ತದೆ’ ಎಂದರು.

‘ರಾಜಕೀಯ ಮುಖಂಡರು, ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಟೋಕನ್‌/ ರಹಸ್ಯ ಸಂಖ್ಯೆ ಅಥವಾ ಸಂಕೇತ ನೀಡಿ ಅದರ ಆಧಾರಗಳಲ್ಲಿ, ಚಿನ್ನದ ಮೂಗಿನ ಬೊಟ್ಟು. ಕಿವಿಯೋಲೆ, ಹೊಸ ಬಟ್ಟೆ, ಪೆಟ್ರೋಲ್‌ ಖರೀದಿಗೆ ಅವಕಾಶ ಕಲ್ಪಿಸಿ ಆಮಿಷ ಒಡ್ಡುವ ಅಕ್ರಮಗಳು ಈ ಹಿಂದೆ ಕೆಲವೆಡೆ ನಡೆದಿವೆ. ನಮ್ಮ ಜಿಲ್ಲೆಯಲ್ಲಿ ಆಭರಣ ಮಳಿಗೆಗಳು, ಆಭರಣ ತಯಾರಕರು, ಪೆಟ್ರೋಲ್‌ ಬಂಕ್‌, ಪೆಟ್ರೋಲ್‌ ಬಂಕ್‌, ಸೀಮೆಎಣ್ಣೆ ಮಾರಾಟ ಮಳಿಗೆಗಳು, ವಾಹನ ಬ್ರೋಕರ್‌ಗಳು, ಲೇವಾದೇವಿದಾರರು ಅಥವಾ ಈ ರೀತಿ ಚಟುವಟಿಕೆಗಳಲ್ಲಿ ತೊಡಗಿರುವ ಇತರ ವ್ಯಕ್ತಿಗಳನ್ನು ಬಳಸಿ ಚುನಾವಣಾ ಅಕ್ರಮಗಳನ್ನು ನಡೆಸುವ ಬಗ್ಗೆಯೂ ಅಧಿಕಾರಿಗ ತಂಡ ಳು ನಿಗಾ ಇಡಲಿದೆ. ಈ ತಂಡದ ಸದಸ್ಯರು ಮಫ್ತಿಯಲ್ಲಿ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇಂತಹ ಅಕ್ರಮಗಳ ಬಗ್ಗೆಯೂ ಸಾರ್ವಜನಿಕರು ಚುನಾವಣಾಧಿಕಾರಿಯವರ ಗಮನಕ್ಕೆ ತರಬಹುದು’ ಎಂದರು.

ಯಕ್ಷಗಾನ ಮತ್ತಿತರ ಕಲಾ ಪ್ರದರ್ಶನದಲ್ಲಿ ಕಲಾವಿದರು ಪರೋಕ್ಷವಾಗಿ ನಿರ್ದಿಷ್ಟ ಪಕ್ಷದ ಅಥವಾ ರಾಜಕೀಯ ಮುಖಂಡರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುವ ಬಗ್ಗೆಯೂ ಅಧಿಕಾರಿಗಳು ನಿಗಾ ಇಡಲಿದ್ದಾರೆ.

‘ಕಲೆಯನ್ನು ಕಲಾ ಪ್ರಕಾರವಾಗಿಯೂ ಬಳಸುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಚುನಾವಣಾ ಪ್ರಚಾರಕ್ಕೆ ದುರ್ಬಳಕೆ ಮಾಡಿಕೊಂಡರೆ ಅಂತಹ ಕಲಾವಿದರು, ಕಾರ್ಯಕ್ರಮ ಸಂಘಟಕರು ಹಾಗೂ ಕಲಾತಂಡದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

‘ಧಾರ್ಮಿಕ ಅಥವಾ ಖಾಸಗಿ ಸಮಾರಂಭದಲ್ಲಿ ಪಕ್ಷ ಮುಖಂಡರು, ಅಭ್ಯರ್ಥಿ ಅಥವಾ ಕಾರ್ಯಕರ್ತರು ಮತ ಯಾಚಿಸಿದರೆ ಆ ಸಮಾರಂಭದ ಖರ್ಚನ್ನು ಅಭ್ಯರ್ಥಿಯ ವೆಚ್ಚದ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ, ಮಾಧ್ಯಮಗಳಲ್ಲಿ ಬಿತ್ತರವಾಗುವ ಎಲ್ಲ ಸುದ್ದಿಗಳ ಮೇಲೂ ನಿಗಾ ಇಡಲಿದ್ದೇವೆ. ನಿರ್ದಿಷ್ಟ ಪಕ್ಷ ಅಥವಾ ಅಭ್ಯರ್ಥಿಗೆ ನೆರವಾಗುವ ಉದ್ದೇಶದಿಂದ ಸುದ್ದಿ ಬಿತ್ತಿರಿಸಿದರೆ ಅದರ ವಿರುದ್ಧ ಮಾಧ್ಯಮ ಪ್ರಮಾಣೀಕರಣ ಮತ್ತು ಕಣ್ಗಾವಲು ಸಮಿತಿ (ಎಂಸಿಎಂಸಿ) ಶಿಫಾರಸಿನ ಆಧಾರದಲ್ಲಿ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಲಿದೆ’ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಣಾಧಿಕಾರಿ ಡಾ.ಕುಮಾರ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಕೃಷ್ಣಮೂರ್ತಿ ಹಾಗೂ ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ಸುದ್ದಿಗೋಷ್ಠಿಯಲ್ಲಿದ್ದರು.

–0–

‘ಆನ್‌ಲೈನ್‌– ಶಂಕಾಸ್ಪದ ಹಣ ವರ್ಗಾವಣೆ ಮೇಲೆ ನಿಗಾ’

‘ಆನ್‌ಲೈನ್‌ ಮೂಲಕ ಮತದಾರರ ಖಾತೆಗೆ ಹಣ ಪಾವತಿಸುವುದರ ಮೇಲೆಯೂ ನಿಗಾ ಇಡಲಿದ್ದೇವೆ. ಒಂದೇ ದಿನದಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಣ ಪಡೆದವರ ಹಾಗೂ ನಿರ್ದಿಷ್ಟ ಖಾತೆಯಿಂದ ಬೇರೆ ಬೇರೆ ಖಾತೆಗಳಿಗೆ ಸಂಶಯಾಸ್ಪದವಾಗಿ ಹಣ ವರ್ಗಾವಣೆ ನಡೆದರೆ ,ಆ ಬಗ್ಗೆಯೂ ಮಾಹಿತಿ ನೀಡಲಿವೆ’ ಎಂದು ಮಾದರಿ ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದ ನೋಡಲ್‌ ಅಧಿಕಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಣಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು.

‘ನಿರ್ದಿಷ್ಟ ಖಾತೆಯಿಂದ ಹತ್ತಿಪ್ಪತ್ತು ಮಂದಿಗೆ ಏಕಕಾಲದಲ್ಲಿ ನಿರ್ದಿಷ್ಟ ಮೊತ್ತ ಪಾವತಿಯಾದರೆ ಆ ಬಗ್ಗೆ ಬ್ಯಾಂಕ್‌ಗಳು ಆಯಾ ಕ್ಷೇತ್ರದ ಚುನಾವಣಾಧಿಕಾರಿ ಗಮನಕ್ಕೆ ತರಲಿವೆ. ಚುನಾವಣಾಧಿಕಾರಿ ಯವರು ಆ ಖಾತೆದಾರರನ್ನು ಕರೆಸಿ ವಿವರಣೆ ಪಡೆಯಲಿದ್ದಾರೆ. ಚುನಾವಣಾ ಅಕ್ರಮ ನಡೆದಿದ್ದರೆ ಅಂತಹ ಖಾತೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಅವರು ವಿವರಿಸಿದರು.

–0–

‘ದಾಖಲೆ ಒದಗಿಸಿದರೆ ಹಣ ವಾಪಾಸ್‌’

‘ದಾಖಲೆ ಪತ್ರಗಳಿಲ್ಲದೇ ಸಾಗಿಸುವ ₹ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ನಗದನ್ನು ವಶಪಡಿಸಿಕೊಂಡರೂ, 24 ಗಂಟೆಗಳ ಒಳಗೆ ಸೂಕ್ತ ದಾಖಲೆ ಒದಗಿಸಿದರೆ ಅದನ್ನು ಮರಳಿಸಲಾಗುತ್ತದೆ. ಇಲ್ಲದೇ ಹೋದರೆ ಹಣವನ್ನು ಜಿಲ್ಲಾ ಖಜಾನೆಗೆ ಜಮೆ ಮಾಡಲಾಗುತ್ತದೆ. ಆ ಬಳಿಕ ಅಕ್ರಮ ನಗದು ಸಾಗಣೆ ಕುರಿತ ಪರಿಶೀಲನಾ ಸಮಿತಿಗೆ ಸೂಕ್ತ ದಾಖಲೆ ಒದಗಿಸಿ ಹಣವನ್ನು ಮರಳಿ ಪಡೆಯಬಹುದು. ದಾಖಲೆ ಒದಗಿಸುವಲ್ಲಿ ವಿಫಲವಾದರೆವಶಪಡಿಸಿಕೊಂಡ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ’ ಎಂದು ಡಾ.ಕುಮಾರ ಮಾಹಿತಿ ನೀಡಿದರು.

ಚಿನ್ನವನ್ನು ಒಯ್ಯುವಾಗಲೂ ಪೂರಕ ದಾಖಲೆಗಳನ್ನು ಇಟ್ಟುಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

–0–

‘ಸಾಮಾಜಿಕ ಮಾಧ್ಯಮಕ್ಕೆ– ಲಕ್ಷಣರೇಖೆ’

‘ವಾಟ್ಸ್‌ ಆ್ಯಪ್‌ ಫೇಸ್‌ಬುಕ್‌, ಯೂ–ಟ್ಯೂಬ್‌, ಟ್ವಿಟರ್‌ನಂತಹ ಸಾಮಾಜಿಕ ಮಧ್ಯಮಗಳ ಮೇಲೆ ದಿನದ 24 ಗಂಟೆಯೂ ನಿಗಾ ಇಡಲಿದ್ದೇವೆ. ಇವು ಚುನಾವಣಾ ಪ್ರಚಾರಕ್ಕೆ ದುರ್ಬಳಕೆಯಾಗುತ್ತಿರುವುದು ಕಂಡು ಬಂದರೆ ಕ್ರಮಕೈಗೊಳ್ಳಲಿದ್ದೇವೆ. ಸಾಮಾಜಿಕ ಮಾಧ್ಯಮಗಳನ್ನು ಲಕ್ಷ್ಮಣ ರೇಖೆಯನ್ನು ಅರಿತು ಬಳಸಬೇಕು ’ ಎಂದು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಜೈನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT