ಮಾಜಿ ಪ್ರಿಯಕರನ ಕೊಲೆ:ಇಬ್ಬರಿಗೆ ಜೀವಾವಧಿ ಶಿಕ್ಷೆ

7

ಮಾಜಿ ಪ್ರಿಯಕರನ ಕೊಲೆ:ಇಬ್ಬರಿಗೆ ಜೀವಾವಧಿ ಶಿಕ್ಷೆ

Published:
Updated:

ಮಂಗಳೂರು: ಮಾಜಿ ಪ್ರಿಯಕರನ ಬೈಕ್‌ಗೆ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂಲ್ಕಿ ಕಾರ್ನಾಡು ಪಡುಬೈಲ್ ನಿವಾಸಿ ಸುಷ್ಮಾ ಪ್ರೆಸಿಲ್ಲಾ (28) ಮತ್ತು ಆಕೆಯ ಪ್ರಿಯಕರ ತಿಪಟೂರು ಅಂಧನಕೆರೆ ಗ್ರಾಮದ ರಂಗ ಅಲಿಯಾಸ್‌ ಗವಿ ರಂಗ ಅಲಿಯಾಸ್‌ ಹರೀಶ್‌ಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 25,000 ದಂಡ ವಿಧಿಸಿ ನಗರದ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಾರ್ಕಳ ತಾಲ್ಲೂಕು ಬೋಳ ಗ್ರಾಮದ ಕೆಂದೊಟ್ಟು ಪದವು ನಿವಾಸಿ ಅವಿನಾಶ್ ಸುವರ್ಣ (21) ಮತ್ತು ಸುಷ್ಮಾ ಪ್ರೀತಿಸುತ್ತಿದ್ದರು. ನಂತರ ಅವಿನಾಶ್‌ನಿಂದ ದೂರವಾಗಿದ್ದ ಸುಷ್ಮಾ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಸಿಬ್ಬಂದಿ ಕರೆದೊಯ್ಯುತ್ತಿದ್ದ ವಾಹನದ ಚಾಲಕ ರಂಗನನ್ನು ಪ್ರೀತಿಸುತ್ತಿದ್ದಳು. ಈ ವಿಚಾರದಲ್ಲಿ ಮೂವರ ನಡುವೆ ವೈಮನಸ್ಸು ಬೆಳೆದಿತ್ತು.

ಅವಿನಾಶ್‌ ಮೋರ್ಗನ್ಸ್‌ ಗೇಟ್‌ನಲ್ಲಿರುವ ಎಂಫಸಿಸ್‌ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದ. ಬಳಿಕ ಸುಷ್ಮಾ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಮೊದಲೇ ರೂಪಿಸಿದ್ದ ಸಂಚಿನಂತೆ 2014ರ ಮಾರ್ಚ್‌ 31ರಂದು ದೂರವಾಣಿ ಕರೆ ಮಾಡಿದ್ದ ಆಕೆ, ಮರುದಿನ (ಏಪ್ರಿಲ್ 1) ಮುಕ್ಕ ಚೆಕ್‌ಪೋಸ್ಟ್ ಬಳಿ ಬರುವಂತೆ ಸೂಚಿಸಿದ್ದಳು. ಅವಳ ಮಾತು ನಂಬಿ ಬಂದ ಅವಿನಾಶ್‌ ಬೈಕ್‌ಗೆ ರಂಗ ಟಾಟಾ ಸುಮೊ ವಾಹನ ಡಿಕ್ಕಿ ಹೊಡೆಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವಿನಾಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಪ್ರಕರಣದ ತನಿಖೆ ನಡೆಸಿದ್ದ ಮೂಲ್ಕಿ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಇಬ್ಬರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗಸ್ವಾಮಿ ಅವರು, ಸುಷ್ಮಾ ಮತ್ತು ರಂಗ ಅಪರಾಧಿಗಳು ಎಂದು ಗುರುವಾರ ಪ್ರಕಟಿಸಿದ್ದರು. ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ದಂಡದ ಮೊತ್ತದಲ್ಲಿ ₹ 40,000ವನ್ನು ಮೃತನ ತಂದೆಗೆ ನೀಡಬೇಕು. ಆರೋಪಿಗಳು ದಂಡ ಪಾವತಿಗೆ ತಪ್ಪಿದರೆ ತಲಾ ಎರಡು ತಿಂಗಳ ಸಾದಾ ಜೈಲು ಶಿಕ್ಷೆ ವಿಧಿಸಬೇಕು. ಮೃತನ ತಂದೆ ಹೆಚ್ಚುವರಿ ಪರಿಹಾರ ಕೋರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !