‘ಅಸತೋಮ ಸದ್ಗಮಯ’ಕ್ಕಾಗಿ ಜತೆಯಾದ ಬಾಲ್ಯ ಸ್ನೇಹಿತರು

7
ಗೆಳೆಯರ ಚೊಚ್ಚಲ ಚಿತ್ರ ಶನಿವಾರ ತೆರೆಗೆ

‘ಅಸತೋಮ ಸದ್ಗಮಯ’ಕ್ಕಾಗಿ ಜತೆಯಾದ ಬಾಲ್ಯ ಸ್ನೇಹಿತರು

Published:
Updated:
ಅಸತೋಮ ಸದ್ಗಮಯ

‘ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದಿದರೆ ಉಪಯೋಗವಿಲ್ಲ. ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆಯಲ್ಲೇ ಓದಿದರೆ ಮಾತ್ರ ಉತ್ತಮ ಶಿಕ್ಷಣ ಸಿಗುತ್ತದೆ’ ಎಂಬ ಭ್ರಮೆಯಲ್ಲಿರುವ ಈ ಸಮಾಜಕ್ಕೆ ಜ್ಞಾನೋದಯ ಮಾಡಿಸುವ ನಿಟ್ಟಿನಲ್ಲಿ ಬರುತ್ತಿರುವ ಸಿನಿಮಾ ‘ಅಸತೋಮ ಸದ್ಗಮಯ’. ಬಹುತೇಕ ಕರಾವಳಿಯ ಕಲಾವಿದರೇ ತುಂಬಿರುವ ಈ ಚಿತ್ರವು ಶನಿವಾರ ತೆರೆಕಾಣುತ್ತಿದೆ.

 ಅವರಿಬ್ಬರು ಬಾಲ್ಯ ಸ್ನೇಹಿತರು. ಬೆಳೆಯುತ್ತಾ ಒಬ್ಬರು ಉದ್ಯಮಿಯಾದರೆ, ಮತ್ತೊಬ್ಬರು ಪತ್ರಿಕೋದ್ಯಮ, ಅನಿಮೇಷನ್‌ನತ್ತ ಮುಖಮಾಡಿದರು. ಕಿರುಚಿತ್ರ ತಯಾರಿ, ವಿಡಿಯೋ ಸಂಕಲನದಲ್ಲಿ ಪರಿಣತಿ ಪಡೆದಿದ್ದ ಅವರಿಗೆ, ಸ್ವತಂತ್ರವಾಗಿ ಸಿನಿಮಾ ನಿರ್ದೇಶನ ಮಾಡುವ ಬಯಕೆ ಹೊಂದಿದ್ದರು. ಉತ್ತಮ ಕಥೆ ಕೈಯಲ್ಲಿದ್ದರೂ, ಬಂಡವಾಳ ಹಾಕುವವರನ್ನು ಎದುರು ನೋಡುತ್ತಿದ್ದರು. ಈ ಸಂದರ್ಭ ಅವರಿಗೆ ಜತೆಯಾದವರೇ ಉದ್ಯಮಿಯಾಗಿ ಬೆಳೆದಿದ್ದ ಬಾಲ್ಯಸ್ನೇಹಿತ.

ಹೌದು, ಇದೇ ಶುಕ್ರವಾರ ತೆರೆಕಾಣುತ್ತಿರುವ ಬಹುನಿರೀಕ್ಷಿತ ‘ಅಸತೋಮ ಸದ್ಗಮಯ’ ಚಿತ್ರದ ಹಿಂದೆ ಸ್ನೇಹಿತರಿಬ್ಬರ ಬಂಧವಿದೆ. ಚಿತ್ರದ ನಿರ್ಮಾಪಕ ಮೂಡುಬಿದಿರೆಯ ಅಶ್ವಿನ್‌ ಜೆ. ಪಿರೇರಾ ಮತ್ತು ನಿರ್ದೇಶಕ ರಾಜೇಶ್‌ ವೇಣೂರು ಅವರು ಬಾಲ್ಯ ಸ್ನೇಹಿತರು. ಮೂಡುಬಿದಿರೆಯ ಹೋಲಿ ರೋಜರಿ ಶಾಲೆಯಲ್ಲಿ ಕಲಿತವರು. ಅಶ್ಚಿನ್‌ ಒಂದು ತರಗತಿ ಮುಂದಿದ್ದರು. ಬಾಲ್ಯದಲ್ಲಿ ಇವರಿಬ್ಬರ ಮುಖ ಒಂದೇ ರೀತಿ ಇದ್ದುದರಿಂದ ಬಹುತೇಕ ಮಂದಿ ಇವರನ್ನು ಅಣ್ಣ– ತಮ್ಮ ಎಂದೇ ಭಾವಿಸಿದ್ದರು. ಈ ಮೂಲಕ ಪರಿಚಯಗೊಂಡ ಇವರು, ಮುಂದೆ ಸ್ನೇಹಿತರಾಗುತ್ತಾರೆ. ಈ ಗೆಳೆತನ ಮುಂದುವರಿದು, ಇಂದು ಒಬ್ಬರನ್ನು ನಿರ್ಮಾಪಕರನ್ನಾಗಿ ಮಾಡಿದರೆ, ಮತ್ತೊಬ್ಬರನ್ನು ನಿರ್ದೇಶಕರನ್ನಾಗಿ ಮಾಡಿದೆ. ಅಶ್ವಿನ್ ಕೂಡ ರಂಗಭೂಮಿ ಕಲಾವಿದರಾಗಿದ್ದು, ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಕಲೆಯ ಬಗ್ಗೆ ಪ್ರೀತಿ, ಒಲವನ್ನು ಹೊಂದಿರುವ ಅವರು ಸಿನಿಮಾ ಮಾಡುವ ಬಯಕೆಯನ್ನು ಹೊಂದಿದ್ದರು. ಅವರ ಬಯಕೆಗೆ ರಾಜೇಶ್ ಸಾಥ್‌ ನೀಡಿದ್ದಾರೆ. ಇದು ಇವರಿಬ್ಬರ ಚೊಚ್ಚಲ ಚಿತ್ರವೂ ಹೌದು.

ಐಕೇರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿದ್ಧಗೊಂಡಿರುವ ‘ಅಸತೋಮ ಸದ್ಗಮಯ’ದಲ್ಲಿ ನಿರ್ಮಾಪಕ, ನಿರ್ದೇಶಕ ಹಾಗೂ ಬಹುತೇಕ ಕರಾವಳಿಯ ಕಲಾವಿದರೇ ಒಳಗೊಂಡಿರುವುದು ಮತ್ತೊಂದು ವಿಶೇಷ. ಚಿತ್ರದ ಕೆಲ ದೃಶ್ಯಗಳನ್ನು ಕರಾವಳಿಯ ವಿವಿಧೆಡೆ ಚಿತ್ರೀಕರಿಸಲಾಗಿದೆ. ಉಡುಪಿ ಮೂಲದ ರಾಧಿಕಾ ಚೇತನ್‌ ಜತೆಗೆ ಕಿರುತೆರೆಯಲ್ಲಿ ಮಿಂಚಿದ್ದ ಕಿರಣ್‌ ರಾಜ್‌ ಹಾಗೂ ಬಿಸ್‌ಬಾಸ್‌ ಸ್ಪರ್ಧಾಳುವಾಗಿದ್ದ ಲಾಸ್ಯ ನಾಗರಾಜ್‌ ಮುಖ್ಯಭೂಮಿಕೆ ಕಾಣಿಸಿಕೊಂಡಿದ್ದಾರೆ.

‘ಈ ಚಿತ್ರದ ಮೂಲಕಥೆಯು ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ. ಇಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದೆ ಬಾಗಿಲು ಮುಚ್ಚುವ ಪರಿಸ್ಥಿತಿಯಿದೆ. ಇದಕ್ಕೆ ಕಾರಣಗಳು ನೂರಾರಿವೆ. ಅದರಲ್ಲಿ ಮುಖ್ಯವಾಗಿರುವುದು ನಮ್ಮ ಶಿಕ್ಷಣ ಪದ್ಧತಿ ಮತ್ತು ಮಕ್ಕಳ ಪೋಷಕರು ಮನಸ್ಥಿತಿ. ಇದು ಬದಲಾದರೆ ಬಹುತೇಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪೋಷಕರ-ಮಕ್ಕಳ ನಡುವಿನ ಸಂಬಂಧ, ಮುಚ್ಚುತ್ತಿರುವ ಶಾಲೆಗಳನ್ನು ಉಳಿಸುವ ಬಗ್ಗೆ ಹಾಗೂ ಮಾಫಿಯಾ ರೀತಿಯಲ್ಲಿ ಬೆಳೆಯುತ್ತಿರುವ ಖಾಸಗಿ ಶಾಲೆಗಳ ವ್ಯಾಪಾರೀಕರಣ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಈ ಮೂಲಕ ಸರ್ಕಾರದ ಮತ್ತು ಸಮಾಜದ ಕಣ್ಣುತೆರೆಸುವ ಹೆಬ್ಬಯಕೆಯಿಂದಲೇ ಈ ಚಿತ್ರಕ್ಕೆ ಬಂಡವಾಳ ಹಾಕಲು ಸಂತೋಷದಿಂದ ಒಪ್ಪಿಕೊಂಡೆ’ ಎನ್ನುತ್ತಾರೆ ಅಶ್ವಿನಿ ಪಿರೇರಾ.

‘ಕೇವಲ ಶಿಕ್ಷಣಕ್ಕೆ ಸಂಬಂಧಿಸಿದ ಸಂದೇಶವೊಂದೇ ಅಲ್ಲ, ಮನರಂಜನೆಯ ದೃಷ್ಟಿಯಿಂದಲೂ ಉತ್ತಮವಾಗಿ ಚಿತ್ರ ಮೂಡಿಬಂದಿದೆ. ಇದೊಂದು ಸಂಪೂರ್ಣ ಸಾಂಸಾರಿಕ ಚಿತ್ರವಾಗಿದೆ. ಕ್ಯಾಮೆರಾ ಕೆಲಸ, ಸಂಗೀತ, ಸಂಕಲನದ ಗುಣಮಟ್ಟದಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ. ₹ 1.50 ಕೋಟಿಗೂ ಅಧಿಕ ಬಂಡವಾಳವನ್ನು ಈ ಚಿತ್ರಕ್ಕೆ ಹಾಕಲಾಗಿದೆ. ಹಾಕಿದ ಬಂಡವಾಳ ವಾಪಸ್‌ ಪಡೆಯುವ ನಿಟ್ಟಿನಲ್ಲಿ ಸ್ವಲ್ಪ ಹಾರರ್, ಸಸ್ಪೆನ್ಸ್, ಕಾಮಿಡಿ, ರೊಮ್ಯಾನ್ಸ್ ಮುಂದಾದ ಕಮರ್ಷಿಯಲ್‌ ವಿಷಯಕ್ಕೂ ಆದ್ಯತೆ ನೀಡಲಾಗಿದೆ. ಪ್ರೇಕ್ಷಕರಿಗೆ ಎಲ್ಲೂ ನಿರಾಸೆಯಾಗುವುದಿಲ್ಲ ಎಂಬ ವಿಶ್ವಾಸ ನನ್ನದು’ ಎನ್ನುತ್ತಾರೆ ಅವರು.

‘ಸರ್ಕಾರಿ ಶಾಲೆಯಲ್ಲಿ ಕಲಿತವರು ಸಾಕಷ್ಟು ಮಂದಿ ಉನ್ನತ ಸ್ಥಾನಕ್ಕೆ ಹೋಗಿದ್ದಾರೆ. ನಾನು ಕೂಡ ಸರ್ಕಾರಿ ಶಾಲೆಯ ವಿದ್ಯಾರ್ಥಿ. ಆದರೆ, ಇಂದಿನ ಸರ್ಕಾರಿ ಶಾಲೆಗಳ ಸ್ಥಿತಿಗತಿ, ಶಿಕ್ಷಣ ಪದ್ಧತಿ ನೋಡಿದರೆ ತುಂಬಾ ಬೇಸರವಾಗುತ್ತದೆ. ಇದಕ್ಕೆ ಕಾರಣ ಯಾರು? ಪರಿಹಾರ ಏನು? ಎಂಬುದನ್ನು ನನ್ನದೇ ಆದ ಚಿಂತನೆಯಲ್ಲಿ ಈ ಚಿತ್ರದ ಮೂಲಕ ಸಮಾಜಕ್ಕೆ ತಿಳಿಸಲು ಪ್ರಯತ್ನಿಸಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ರಾಜೇಶ್‌ ವೇಣೂರು.

‘ಫಿನ್ ಲ್ಯಾಂಡ್‌ನಿಂದ ತನ್ನ ಮೂಲವನ್ನು ಹುಡುಕಿಕೊಂಡು ಯುವತಿಯೊಬ್ಬಳು ಭಾರತಕ್ಕೆ ಬರುವ ಪಾತ್ರವೊಂದಿದೆ. ಆ ಪಾತ್ರವನ್ನು ರಾಧಿಕಾ ಚೇತನ್‌ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಫಿನ್‌ಲ್ಯಾಂಡ್‌ ದೇಶವನ್ನು ಆಯ್ಕೆ ಮಾಡಲು ಒಂದು ಬಲವಾದ ಕಾರಣವಿದೆ. ಆ ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆ ಬಹಳ ಅಚ್ಚುಕಟ್ಟಾಗಿದೆ. ಅಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳೇ ಇಲ್ಲ. ಎಲ್ಲರೂ ಸರ್ಕಾರಿ ಶಾಲೆಯಲ್ಲೇ ಓದುತ್ತಾರೆ. ಅಲ್ಲಿ ಪಠ್ಯ ಆಧಾರಿತವಾಗಿ ಶಿಕ್ಷಣ ನೀಡುತ್ತಿಲ್ಲ, ಬದಲಾಗಿ ಪ್ರತಿಭೆ ಆಧಾರಿತವಾಗಿ ಶಿಕ್ಷಣ ನೀಡಲಾಗುತ್ತದೆ. ಅಲ್ಲಿ ಶಿಕ್ಷಕನಾಗುವುದೆಂದರೆ ನಮ್ಮಲ್ಲಿ ಐಎಎಸ್‌ ಪರೀಕ್ಷೆ ಮಾಡಿದಷ್ಟು ಗೌರವ. ವೈದ್ಯರಿಗಿಂತಲೂ ಹೆಚ್ಚು ವೇತನವನ್ನು ಅಲ್ಲಿನ ಶಿಕ್ಷಕರು ಪಡೆಯುತ್ತಾರೆ. ಅಲ್ಲಿ ಏಳು ವರ್ಷ ತನಕ ಮಕ್ಕಳನ್ನು ಶಾಲೆಗೆ ಸೇರಿಸುವುದಿಲ್ಲ. ಅಲ್ಲಿ ತನಕ ಮಗು ಪೋಷಕರ ಜತೆ ಇರುವುದರಿಂದ ಅವರ ನಡುವೆ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ. ನಮ್ಮಲ್ಲಿ ಇಂದು ಮುಖ್ಯವಾಗಿ ಈ ಸಂಬಂಧ ಗಟ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ಫಿನ್‌ಲ್ಯಾಂಡ್‌ ದೇಶವನ್ನು ಆಯ್ದು ಚಿತ್ರ ತಯಾರಿಸಿದ್ದೇವೆ. ಜನ ಇದನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೂ ಇದೆ’ ಎನ್ನುತ್ತಾರೆ ಅವರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !