ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಉದ್ದೇಶಿತ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಡಾ.ಭರತ್ ಶೆಟ್ಟಿ

ಕಾವೂರಿನಲ್ಲಿ ವಿವಿ ಪ್ರಾದೇಶಿಕ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್: ಮಂಗಳೂರು ಹೊರವಲಯದ ಕಾವೂರಿನಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಬುಧವಾರ ಗುದ್ದಲಿ ಪೂಜೆ ನೆರವೇರಿತು. ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಈ ಹಿಂದೆ ಮಂಗಳೂರಿನಲ್ಲಿ ಪ್ರಾದೇಶಿಕ ಕೇಂದ್ರ ರಚನೆಗೆ ಪ್ರಯತ್ನ ನಡೆದಿದ್ದು ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ಅವರು ಪ್ರಾದೇಶಿಕ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿ ಸಹಕಾರ ನೀಡಿದ್ದಾರೆ. ಮೇರಿಹಿಲ್‌ನಲ್ಲಿ ಇದಕ್ಕೆ ಜಾಗ ದೊರೆತಿದೆ. ಪ್ರಾದೇಶಿಕ ಕೇಂದ್ರದಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ವೈದ್ಯಕೀಯ, ಅರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ’ ಎಂದರು.

ಸುಮಾರು 2 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಸಿಮ್ಯುಲೇಷನ್ ಸೆಂಟರ್, ಆನ್‌ಲೈನ್‌ ಲೈಬ್ರರಿ, ಡಿಜಿಟಲ್ ಮೌಲ್ಯಮಾಪನ, ಡೆಂಟಲ್ ರಿಸರ್ಚ್ ಸೆಂಟರ್, ಪಿಸಿಯೋಥೆರಪಿ ರಿಹ್ಯಾಬಿಲಿಟೇಷನ್ ಸೆಂಟರ್ ಮತ್ತಿತರ ವ್ಯವಸ್ಥೆಗಳು ಇರಲಿವೆ. ಸುಸಜ್ಜಿತ ಸಭಾಂಗಣ, ಆಟದ ಮೈದಾನ, ಬಾಸ್ಕೆಟ್ ಬಾಲ್, ವಾಲಿಬಾಲ್, ಟೇಬಲ್ ಟೆನ್ನಿಸ್ ಮತ್ತಿತರ ಕ್ರೀಡೆಗೆ ಒಳಾಂಗಣ ಕ್ರೀಡಾಂಗಣ, ದೈಹಿಕ ಕಸರತ್ತಿಗೆ ಜಿಮ್, ಈಜುಕೊಳ ಸೌಲಭ್ಯಗಳು ಇರಲಿವೆ. ಈ ಕ್ರೀಡಾಂಗದಲ್ಲಿ ಸ್ಥಳೀಯರಿಗೆ ಕಡಿಮೆ ಶುಲ್ಕದಲ್ಲಿ ಸೌಲಭ್ಯ ಬಳಕೆಗೆ ಅನುಮತಿ ನೀಡಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಶಿವಚರಣ್ ಶೆಟ್ಟಿ ಮಾತನಾಡಿ, ‘ಬೋಧಕ ವರ್ಗಕ್ಕೆ ತರಬೇತಿ ನೀಡುವ ವ್ಯವಸ್ಥೆಯೂ ಇರಲಿದೆ. ಕೇಂದ್ರದ ಸ್ಥಾಪನೆಯಿಂದ ವಿದ್ಯಾರ್ಥಿಗಳು ಮಂಗಳೂರಿನಲ್ಲೇ ಸೌಲಭ್ಯ ಪಡೆಯಬಹುದು’ ಎಂದರು. 

ಕಾರ್ಯಕ್ರಮದಲ್ಲಿ ಸ್ಥಳೀಯ ಕಾರ್ಪೊರೇಟರ್ ಗಾಯತ್ರಿ ಆರ್. ರಾವ್, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಯು.ಟಿ ಇಫ್ತಿಕರ್ ಅಲಿ, ಡಾ.ದೀಪ್ತಿ ಬಾವಾ, ಡಾ.ರವಿಶಂಕರ್ ಶೆಟ್ಟಿ, ಸೆನೆಟ್ ಸದಸ್ಯರಾದ ಡಾ. ಶರಣ್ ಜೆ.ಶೆಟ್ಟಿ, ಡಾ. ರಾಜೇಶ್ ಶೆಣೈ, ಭಾಸ್ಕರ್ ಶೆಟ್ಟಿ, ರಣದೀಪ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು