ಗುರುವಾರ , ಜೂನ್ 24, 2021
28 °C

ರಸಗೊಬ್ಬರ ಪೂರೈಸದ ಸರ್ಕಾರ: ರಾಜ್ಯ ಸರ್ಕಾರದ ವಿರುದ್ಧ ಹರೀಶ್‌ಕುಮಾರ್ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಗುಪ್ತಚರ ಮಾಹಿತಿಯ ಹೊರತಾಗಿಯೂ ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿ ನಡೆಯುವುದನ್ನು ತಡೆಯಲು ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್ ದೂರಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುವ ಸಂದರ್ಭದಲ್ಲಿ ರೈತರಿಗೆ ನಿರೀಕ್ಷಿತ ಪ್ರಮಾಣದ ರಸಗೊಬ್ಬರ ಪೂರೈಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ರೈತರು ಬೆಳಿಗ್ಗೆಯಿಂದ ಸರದಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಪಾದಿಸಿದರು.

ಪಿಎಂ ಕೇರ್ಸ್‌ ದುರುಪಯೋಗ: ಕೋವಿಡ್‌–19 ಸಂದರ್ಭದಲ್ಲಿ ಸಂಗ್ರಹಿಸಿರುವ ಪಿಎಂ ಕೇರ್ಸ್ ನಿಧಿಯನ್ನು ಯಾವ ರೀತಿಯಲ್ಲಿ ವಿನಿಯೋಗಿಸಲಾಗಿದೆ ಎಂಬ ಬಗ್ಗೆ ತಿಳಿಸುವಲ್ಲಿ ಹಿಂದೇಟು ಹಾಕಲಾಗುತ್ತಿದ್ದು, ಪ್ರಧಾನಿ ಕಾರ್ಯಾಲಯ ಕರ್ತವ್ಯ ಲೋಪ ಎಸಗಿದೆ ಎಂದು ಕೆ.ಹರೀಶ್‌ಕುಮಾರ್ ಆರೋಪಿಸಿದರು.

ಕೋವಿಡ್ ಹೆಸರಿನಲ್ಲಿ ಆರಂಭಿಸಿದ ನಿಧಿಯಲ್ಲಿ ಕೋಟ್ಯಂತರ ಹಣ ಸಂಗ್ರಹವಾಗಿದೆ. ಅದನ್ನು ಕೋವಿಡ್ ನಿರ್ವಹಣೆಗೆ ಖರ್ಚು ಮಾಡಬೇಕು. ಆದರೆ ಅದನ್ನು ಬಿಜೆಪಿ ತನ್ನ ಪಕ್ಷದ ಖರ್ಚು–ವೆಚ್ಚಗಳಿಗೆ, ಚುನಾವಣಾ ವೆಚ್ಚಗಳಿಗೆ ಉಪಯೋಗಿಸುತ್ತಿರುವ ಗುಮಾನಿ ಇದೆ. ಈ ಕುರಿತು ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ, ಪ್ರಧಾನಿ ಕಾರ್ಯಾಲಯ ಅದನ್ನು ತಿರಸ್ಕರಿಸಿದೆ. ಸರಿಯಾಗಿ ಉಪಯೋಗವಾಗಿದ್ದಲ್ಲಿ ಅದನ್ನು ಸಾರ್ವಜನಿಕರ ಮುಂದಿಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಹಣ ವಸೂಲಿಗೆ ಅಧಿಕಾರಿಗಳ ಬಳಕೆ: ರಾಜ್ಯದ ನಗರಾಭಿವೃದ್ಧಿ ಸಚಿವರಿಂದ ಹಿರಿಯ ಅಧಿಕಾರಿಗಳಿಗೆ ದೌರ್ಜನ್ಯ, ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಮಾತುಗಳು ಸಾಮಾಜಿಕ ವಲಯದಲ್ಲಿ ತೀವ್ರವಾಗಿದ್ದು, ಈ ಕುರಿತಂತೆ ಸತ್ಯಾಂಶವನ್ನು ತಿಳಿಯಲು ಸಚಿವರ ಆಪ್ತರ ಒಂದು ತಿಂಗಳ ಕಾಲ್ ಡೀಟೇಲ್ಸ್ ಮಾಹಿತಿಯನ್ನು ಜನಸಾಮಾನ್ಯರಿಗೆ ಒದಗಿಸಬೇಕು ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ ಒತ್ತಾಯಿಸಿದರು.

ಗುತ್ತಿಗೆದಾರರು, ಬಿಲ್ಡರ್‌ಗಳಿಂದ ಹಣ ವಸೂಲಿ ಮಾಡಲು ಹಿರಿಯ ಅಧಿಕಾರಿಗಳನ್ನು ಬಳಸಲಾಗುತ್ತಿದ್ದು, ಅದಕ್ಕಾಗಿ ಅವರು ಸ್ವಯಂಪ್ರೇರಿತವಾಗಿ ವರ್ಗಾವಣೆಗೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸತ್ಯಾಂಶವನ್ನು ತಿಳಿಸಬೇಕು. ನಗರಾಭಿವೃದ್ಧಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ನೋಂದಾಯಿತ ಗಣೇಶೋತ್ಸವ ಸಮಿತಿಗಳಿಗೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿಗೆ ಮನವಿ ಮಾಡಲಾಗಿದೆ. ಗಣೇಶೋತ್ಸವ ಸಮಿತಿಗಳು ಮಾಸ್ಕ್‌, ಸ್ಯಾನಿಟೈಸರ್‌, ಸುರಕ್ಷಿತ ಅಂತರ ಪಾಲನೆಯೊಂದಿಗೆ 50 ಜನರೊಂದಿಗೆ ಹಬ್ಬವನ್ನು ಆಚರಿಸಲು ಅವಕಾಶ ನೀಡುವಂತೆ ಕೋರಲಾಗಿದೆ ಎಂದು ಹೇಳಿದರು. ಟಿ.ಕೆ.ಸುಧೀರ್, ಎ.ಸಿ. ವಿನಯ್‌ರಾಜ್, ನೀರಜ್‌ಪಾಲ್ ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.