ಶನಿವಾರ, ಸೆಪ್ಟೆಂಬರ್ 25, 2021
23 °C
ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಚಾತುರ್ಮಾಸ್ಯ ವ್ರತಾಚರಣೆ

ಉಜಿರೆ: ‘ಭಗವಂತನ ಸೇವೆಯಿಂದ ಮಾನಸಿಕ ನೆಮ್ಮದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಜಿರೆ: ಬದುಕು ಮತ್ತು ಬೋಧನೆ ಒಂದೇ ರೀತಿಯಾಗಿರಬೇಕು. ಎಲ್ಲರೂ ನುಡಿದಂತೆ ನಡೆಯಬೇಕು. ಸಂಸ್ಕಾರಯುತ ಶಿಕ್ಷಣದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಚಾತುರ್ಮಾಸ್ಯದ ಅಂಗವಾಗಿ ಶನಿವಾರ ಗುರುದೇವ ಮಠದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಿತ್ಯವೂ ಭಕ್ತಿಯಿಂದ ಭಗವಂತನ ಸೇವೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ. ಇದಕ್ಕಾಗಿ ಕಾಮ, ಕ್ರೋಧ, ಲೋಭ ಮೊದಲಾದ ಅರಿಷಡ್ವರ್ಗಗಳನ್ನು ತ್ಯಜಿಸಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರವಿಶಂಕರ ಮಿಜಾರು, ಜಯಂತ ಕೋಟ್ಯಾನ್, ಪೀತಾಂಬರ ಹೇರಾಜೆ  ಉಪಸ್ಥಿತರಿದ್ದರು. ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಸದಾನಂದ ಪೂಜಾರಿ ವಂದಿಸಿದರು. ಪ್ರೊ. ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

‘ಜ್ಞಾನ ಸಂಪಾದನೆ ಬೋಧಕರ ಆದ್ಯತೆ’
ಪುತ್ತೂರು:
ಗುರುವಾಗಬೇಕೆಂದು ಬಯಸುವವರು ಕೆಲವು ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಜ್ಞಾನ ಸಂಪಾದನೆ ಬೋಧಿಸುವವರ ಮೊದಲ ಆದ್ಯತೆಯಾಗಬೇಕು ಎಂದು ನಿವೃತ್ತ ಉಪನ್ಯಾಸಕ, ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ ಹೇಳಿದರು.

ಪುತ್ತೂರಿನ ಅಂಬಿಕಾ ಸಿಬಿಎಸ್ಇ ವಿದ್ಯಾಲಯ ಮತ್ತು ಅಂಬಿಕಾ ಪದವಿ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಗುರುಪೂರ್ಣಿಮಾ ಆಚರಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳಿಗೆ ಜ್ಞಾನವನ್ನು ನೀಡಬೇಕಾದರೆ ಅವರಿಗಿಂತ ಹೆಚ್ಚಿನ ಜ್ಞಾನ ನಮ್ಮಲ್ಲಿರಬೇಕೆಂಬ ಭಾವನೆ ಇರಬೇಕು. ಆಗ ಮಾತ್ರ ಉತ್ತಮ ಗುರುವೊಬ್ಬ ರೂಪುಗೊಳ್ಳುವುದಕ್ಕೆ ಸಾಧ್ಯ. ಹಾಗಾಗಿ ಜ್ಞಾನ ಹಾಗೂ ಅನುಭವದ ಹಾದಿಯಲ್ಲಿ ಕ್ರಮಿಸುವುದು ಶಿಕ್ಷಕರ ಅಗತ್ಯ’ ಎಂದರು.

ನಟ್ಟೋಜ ಫೌಂಡೇಷನ್ ಟ್ರಸ್ಟ್‌ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಮಾತನಾಡಿ, ‘ತರಗತಿಯಲ್ಲಿ ಓದುವ ವಿಷಯಗಳೆಲ್ಲ ಪ್ರಾಪಂಚಿಕ ಜ್ಞಾನದಡಿ ಹೊಂದಿಕೆಯಾದರೆ, ಧಾರ್ಮಿಕ ಜ್ಞಾನ ನಮ್ಮ ಪರಂಪರೆ, ಆಚರಣೆ, ಚಿಂತನೆ, ಅಲೋಚನೆಗಳಿಂದ ಮೂಡುತ್ತದೆ. ಇವೆರಡೂ ಇದ್ದರೆ ಬದುಕಿನ ಬಂಡಿ ಸುಸೂತ್ರವಾಗಿ ಸಾಗುತ್ತದೆ’ ಎಂದರು.

ಪ್ರೊ.ವಿ.ಬಿ.ಅರ್ತಿಕಜೆ ಅವರಿಗೆ ಸುಬ್ರಹ್ಮಣ್ಯ ನಟ್ಟೋಜ ಹಾಗೂ ರಾಜಶ್ರೀ ನಟ್ಟೋಜ ದಂಪತಿ ಗುರುವಂದನೆ ಕಾರ್ಯಕ್ರಮ ನಡೆಸಿಕೊಟ್ಟರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ, ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶಂಕರನಾರಾಯಣ ಭಟ್, ಅಂಬಿಕಾ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ ಇದ್ದರು.

ಅಂಬಿಕಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ವಿನಾಯಕ ಭಟ್ ಗಾಳಿಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ್ ಇರ್ದೆ ಸ್ವಾಗತಿಸಿದರು. ಗಣಿತ ವಿಭಾಗದ ಮುಖ್ಯಸ್ಥ ಅಕ್ಷಯ್ ಹೆಗಡೆ ವಂದಿಸಿದರು. ಅಭಿಷೇಕ್ ಎನ್ ನಿರೂಪಿಸಿದರು.

‘ಅರಿವೇ ತಿಳಿವಳಿಕೆ, ಜ್ಞಾನವೇ ಗುರು’
ಉಳ್ಳಾಲ:
ಅರಿವೇ ತಿಳಿವಳಿಕೆ, ಜ್ಞಾನವೇ ಗುರು ಆಗಿದೆ. ಇಂತಹ ಗುರು ಪರಂಪರೆಯನ್ನು ಗೌರವಿಸುವ ಕಾರ್ಯ ಭಗತ್ ಸಿಂಗ್ ಪ್ರತಿಷ್ಠಾನದಿಂದ ಆಗಿದೆ ಎಂದು ಉಳ್ಳಾಲದ ಭಾರತ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ವಾಸುದೇವ ರಾವ್ ಅಭಿಪ್ರಾಯಪಟ್ಟರು.

ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ಉಳ್ಳಾಲದಲ್ಲಿ ಆಯೋಜಿಸಿದ್ದ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು. ‘ವ್ಯಾಸರು ನಾಲ್ಕು ವೇದಗಳನ್ನು ಬರೆದು ಪೂರ್ಣಗೊಳಿಸಿದ ದಿನವೇ ಗುರುಪೂರ್ಣಿಮೆ ದಿನ. ಸಾವಿರಾರು ವರ್ಷಗಳಿಂದ ಗುರು ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿರುವುದು ಇದಕ್ಕೆ ಸಾಕ್ಷಿ. ಪ್ರಕೃತಿಯೂ ಗುರು ಸಮಾನ, ನಿಸರ್ಗದಿಂದ ಹಲವು ವಿಚಾರಗಳನ್ನು ಕಲಿಯುತ್ತೇವೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ಕೆರೆಬೈಲು ಮಾತನಾಡಿ, ಶಿಕ್ಷಕ ವಾಸುದೇವರಾವ್ ಅವರ ಸೇವಾ ಸಾಧನೆಗಳು ಕಿರಿಯರಿಗೆ ಮಾದರಿ. ಸರಳ ವ್ಯಕ್ತಿತ್ವದ ಗುರುಗಳಾಗಿದ್ದು, ಪ್ರತಿದಿನ ಹೊಸತನವನ್ನು ವಿದ್ಯಾರ್ಥಿಗಳಿಗೆ ನೀಡಿ ಶಾಲೆಗೆ ಬರಲು ಉತ್ಸಾಹ ತುಂಬಿದವರು ಎಂದರು.

ಉಳ್ಳಾಲದ ಚೀರುಂಭ ಭಗವತಿ ಕ್ಷೇತ್ರದ ಕಾರ್ಣವರ್ ಬಾಲು, ಸುಂದರಿಭಾಗ್ ವೀರಾಂಜನೇಯ ವ್ಯಾಯಾಮ ಶಾಲೆ ಅಧ್ಯಕ್ಷ ಪುಷ್ಪರಾಜ್ ಉಳ್ಳಾಲ್, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಬೈಪಾಸ್, ಉಳ್ಳಾಲ ನಗರಸಭೆಯ ಪರಿಸರ ರಾಯಭಾರಿ ಮಾಧವ ಉಳ್ಳಾಲ್, ಪುರಸಭೆ ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಹರೀಶ್ ಅಂಬ್ಲಮೊಗರು, ಗೋಪಿನಾಥ್ ಬಗಂಬಿಲ, ಶಿವಾಜಿ, ದಾಮೋದರ್, ನಾರಾಯಣ್ ಬಿ., ಲಕ್ಷ್ಮೀ ನಾರಾಯಣ್, ಗಂಗಾಧರ್, ಭಾರತ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿನಯ ಕುಮಾರಿ, ನಿವೃತ್ತ ಶಿಕ್ಷಕಿ ಜಾನಕಿ ಪುತ್ರನ್, ವೀರಾಂಜನೇಯ ವ್ಯಾಯಾಮ ಶಾಲೆಯ ಶಿಕ್ಷಕ ವಿಜಯ ಅಮೀನ್ ಹಾಗೂ ಸುಧಾಕರ್ ಬಜಾಲ್ ಇದ್ದರು.

ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಗೌರವ ಸಲಹೆಗಾರ ಆನಂದ ಅಸೈಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಕಾಪಿಕಾಡ್ ಸ್ವಾಗತಿಸಿದರು. ಕಿರಣ್ ಕೊಲ್ಯ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.