ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕ್ಕೆ ದೇವಸ್ಥಾನವನ್ನು ಮಠಕ್ಕೆ ಬಿಟ್ಟು ಕೊಡಿ: ಪ್ರಮೋದ್ ಮುತಾಲಿಕ್ ಆಗ್ರಹ

Last Updated 31 ಆಗಸ್ಟ್ 2018, 19:39 IST
ಅಕ್ಷರ ಗಾತ್ರ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ಸಂಪುಟ ನರಸಿಂಹ ಮಠಕ್ಕೆ ಸಂಬಂಧಿಸಿದ್ದು, ಸರ್ಕಾರ ದೇವಾಲಯವನ್ನು ಮಠಕ್ಕೆ ಬಿಟ್ಟು ಕೊಡಬೇಕು ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1886 ರಿಂದ ಸ್ವಾತಂತ್ರ್ಯ ದೊರೆಯುವವರೆಗೆ ದೇವಸ್ಥಾನವು ಮಠಕ್ಕೆ ಸೇರಿತ್ತು. 1889ರಲ್ಲಿ ಮದ್ರಾಸ್‌ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿಯೂ ದೇವಸ್ಥಾನವು ಮಠಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಲಾಗಿದೆ. 1951 ರಲ್ಲಿ ಧಾರ್ಮಿಕ ದತ್ತಿ ಇಲಾಖೆಯು ದೇವಸ್ಥಾನವನ್ನು ಸುಪರ್ದಿಗೆ ತೆಗೆದುಕೊಂಡಿದೆ. ಈ ಬಗ್ಗೆ ಯಾವುದೇ ದಾಖಲೆಗಳೇ ಇಲ್ಲ ಎಂಬುದನ್ನು ಇಲಾಖೆಯವರೇ ತಿಳಿಸಿದ್ದಾರೆ ಎಂದರು.

ಮಠದ ಸ್ವಾಮೀಜಿ ಅವರಿಂದ ಮಂತ್ರಾಕ್ಷತೆ ಪಡೆದುಕೊಂಡ ನಂತರವೇ ದೇವಸ್ಥಾನದ ಅರ್ಚಕರ ನೇಮಕ ಮಾಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯವರೆಗೆ ಮಠದ ಸ್ವಾಮೀಜಿಯವರು ಸ್ನಾನ ಮಾಡದೇ ಕುಳಿತಿರುತ್ತಾರೆ. ಒಂದು ವೇಳೆ ಅರ್ಚಕರು ಪೂಜೆಗೆ ಬರುವುದು ಅಸಾಧ್ಯವಾದರೆ, ಸ್ವಾಮೀಜಿಯವರೇ ದೇವಸ್ಥಾನದಲ್ಲಿ ಪೂಜೆ ಮಾಡುತ್ತಾರೆ. ಒಂದು ವೇಳೆ ದೇವಸ್ಥಾನವು ಮಠಕ್ಕೆ ಸೇರದೇ ಇದ್ದರೆ, ಸ್ವಾಮೀಜಿಯವರು ಹೇಗೆ ಪೂಜೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ನರಸಿಂಹ ದೇವರು, ಸುಬ್ರಹ್ಮಣ್ಯ ದೇವರ ಜೋಡುಪಲ್ಲಕ್ಕಿ ಮಾಡುವಂತೆ ಮಠದ ಬೈಲಾದಲ್ಲಿ ತಿಳಿಸಲಾಗಿದೆ. ಸಂಬಂಧವೇ ಇಲ್ಲದಿದ್ದರೆ, ಜೋಡು ಪಲ್ಲಕ್ಕಿ ಮಾಡುವಂತೆ ಏಕೆ ಬರೆದಿಡಲಾಗಿತ್ತು ಎಂದು ಪ್ರಶ್ನಿಸಿದ ಅವರು, ಇದೀಗ ಜೋಡುಪಲ್ಲಕ್ಕಿಯನ್ನು ನಿಲ್ಲಿಸಲಾಗಿದೆ. ಇದರಿಂದ ಅಪಚಾರವಾಗಿದೆ ಎಂಬುದು ಅಷ್ಟಮಂಗಲ ಪ್ರಶ್ನೆ ಪಟ್ಟಿಯಲ್ಲಿ ಸ್ಪಷ್ಟವಾಗಿರುವುದನ್ನೂ ಬರೆದಿಡಲಾಗಿದೆ ಎಂದು ಹೇಳಿದರು.

ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಮಠದ ಭಕ್ತರೊಂದಿಗೆ ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಸಲ್ಲಿಸಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಮಠಕ್ಕೆ ಬಿಟ್ಟುಕೊಡುವಂತೆ ಒತ್ತಾಯಿಸಲಾಗುವುದು ಎಂದರು.

ವಾರ್ಷಿಕ ₹ 100 ಕೋಟಿಗೂ ಹೆಚ್ಚು ಆದಾಯವಿರುವ ದೇವಸ್ಥಾನದ ಮೇಲೆ ರಾಜಕೀಯ ಪಕ್ಷಗಳ ಕಣ್ಣು ಬಿದ್ದಿದೆ ಎಂದು ಆಪಾದಿಸಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳೂ ₹2 ಲಕ್ಷ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕ್ರಿಶ್ಚಿಯನ್ ಸಂಸ್ಥೆಗೆ ಹೋಗುತ್ತಿದೆ. ಭಕ್ತರು ಸಮರ್ಪಿಸಿದ ಹಣವನ್ನು ಈ ರೀತಿ ದುರುಪಯೋಗ ಮಾಡಲಾಗುತ್ತಿದೆ ಎಂದರು.

ಒಂದು ಸಂಘಟನೆಯವರು ಸ್ವಾಮೀಜಿ ವಿರುದ್ಧ ಅಶ್ಲೀಲವಾಗಿ ಮಾತನಾಡಿದ್ದಾರೆ. ಇಂತಹ ಅಧಿಕಾರವನ್ನು ಇವರಿಗೆ ಕೊಟ್ಟವರು ಯಾರು? ಹಿಂದೂ ಧರ್ಮ, ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ. ಇಂತಹ ಸಂಘಟನೆಗಳ ಜತೆಗೆ ದೊಡ್ಡ ಶಕ್ತಿಗಳು ಕೈಜೋಡಿಸಿವೆ ಎಂದು ಹೇಳಿದರು.

ಏನಿದು ವಿವಾದ:ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಸರ್ಪಸಂಸ್ಕಾರ ಮಾಡಬಾರದು, ಮಾಡಿದ್ದೇ ಆದರೆ ಅದು ದೇವರಿಗೆ ಸಲ್ಲುವುದಿಲ್ಲ, ಈಚೆಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲೂ ಇದು ಕಂಡುಬಂದಿದೆ ಎಂಬುದು ದೇವಸ್ಥಾನದ ಆಡಳಿತ ಮಂಡಳಿ ಮತ್ತು ಕೆಲವು ಭಕ್ತರ ವಾದ. ಯಾರಿಗೂ ಒತ್ತಡ ಹಾಕಿ ಇಲ್ಲಿ ಪೂಜೆ ಮಾಡಿಸುತ್ತಿಲ್ಲ. ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಅವಕಾಶ ದೊರಕದವರು ನಮ್ಮಲ್ಲಿ ಕೇಳಿಕೊಂಡು ಬಂದಾಗ ನಾವು ಪ್ರತ್ಯೇಕ ಅರ್ಚಕರಿಂದ ಪೂಜೆ ಮಾಡಿಸುತ್ತಿದ್ದೇವೆ ಎಂದು ನರಸಿಂಹ ಮಠದವರು ಹೇಳುತ್ತಿದ್ದಾರೆ. ಇದುವೇ ವಿವಾದದ ಮೂಲ. ದೇವಸ್ಥಾನ ಯಾರಿಗೆ ಸೇರಿದ್ದು ಎಂಬುದನ್ನು ಪ್ರಮೋದ್‌ ಮುತಾಲಿಕ್‌ ಇದೀಗ ಕೆದಕಿದ್ದಾರೆ. ಒಂದೇ ಪ್ರಾಂಗಣದಲ್ಲಿರುವ ಎರಡು ಪ್ರಾರ್ಥನಾ ಸ್ಥಳಗಳು ವಿವಾದದ ಕೇಂದ್ರಬಿಂದುಗಳಾಗಿವೆ.

ಹಿಂದೂ ಸಂಘಟನೆಗಳನ್ನು ಮುಗಿಸುವ ಷಡ್ಯಂತ್ರ

ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಿರುವವರು ನಿಜವಾದ ಆರೋಪಿಗಳಲ್ಲ. ಹಿಂದೂಗಳಲ್ಲಿ ಭಯೋತ್ಪಾದಕರಿಲ್ಲ. ಇದು ಕಾಂಗ್ರೆಸ್ ಸೃಷ್ಟಿ ಎಂದ ಪ್ರಮೋದ್‌ ಮುತಾಲಿಕ್‌, ಸರ್ಕಾರಕ್ಕೆ ಗೌರಿ ಲಂಕೇಶ್‌ ಹಾಗೂ ಡಾ.ಕಲಬುರ್ಗಿ ಅವರ ಹಂತಕರು ಬೇಕಾಗಿಲ್ಲ. ಹಿಂದೂ ಸಂಘಟನೆಗಳನ್ನು ಮುಗಿಸುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

‘ವಾಗ್ಮೋರೆ ನಮ್ಮ ಸಂಘಟನೆಗೆ ಸೇರಿದವನಲ್ಲ. ನನ್ನ ಜತೆ ಫೋಟೊ ತೆಗೆಸಿಕೊಂಡಿರಬಹುದು. ವಾಗ್ಮೋರೆ ನಿಜವಾಗಿ ಆರ್‌ಎಸ್‌ಎಸ್ ಕಾರ್ಯಕರ್ತ’ ಎಂದರು.

ಸನಾತನ ಸಂಸ್ಥೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕೆಲಸಕ್ಕೆ ಬಾರದ ಕೋಮುಸೌಹಾರ್ದ ವೇದಿಕೆಯಿಂದ ಯಾತ್ರೆ ಮಾಡುತ್ತಿದ್ದಾರೆ. ಇದು ಢೋಂಗಿ ಯಾತ್ರೆ. ವಿಜ್ಞಾನಿಗಳು, ಸೈನಿಕರು, ಹಿಂದೂ ಕಾರ್ಯಕರ್ತರ ಕೊಲೆ ಆಗುತ್ತಿವೆ. ಈ ಬಗ್ಗೆ ಯಾಕೆ ಈ ಢೋಂಗಿಗಳು ಧ್ವನಿ ಎತ್ತುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT