ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ– ಪ್ರಾಣಿ ಸಂಘರ್ಷದ ಕುರಿತು ಆಗಸ್ಟ್‌ನಲ್ಲಿ ಕಾರ್ಯಾಗಾರ: ಖಂಡ್ರೆ

ವಿವಿಧ ದೇಶಗಳ ತಜ್ಞರು ಭಾಗವಹಿಸುವ ನಿರೀಕ್ಷೆ: ಸಚಿವ ಈಶ್ವರ ಖಂಡ್ರೆ
Published 2 ಜುಲೈ 2024, 14:31 IST
Last Updated 2 ಜುಲೈ 2024, 14:31 IST
ಅಕ್ಷರ ಗಾತ್ರ

ಬಂಟ್ವಾಳ (ದಕ್ಷಿಣ ಕನ್ನಡ): ಮಾನವ– ಪ್ರಾಣಿ ಸಂಘರ್ಷ ಹೆಚ್ಚುತ್ತಿದ್ದು, ಇದರಿಂದ ರಾಜ್ಯದಲ್ಲಿ ಸುಮಾರು 65 ಮಂದಿ ಮೃತಪಟ್ಟಿದ್ದಾರೆ. ಆನೆ ತುಳಿತದಿಂದಲೇ ಹೆಚ್ಚು ಸಾವು ಆಗಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಾಗಾರ ಆಯೋಜಿಸಲು ಯೋಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಪರಿಸರ ಸಂರಕ್ಷಣೆಗಾಗಿ ರಾಜ್ಯದಾದ್ಯಂತ ದಶಲಕ್ಷ ಗಿಡನಾಟಿ’ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ ಚಾಲನೆ‌ ನೀಡಿ ಅವರು ಮಾತನಾಡಿದರು.

‘ಗಣತಿ ಪ್ರಕಾರ ರಾಜ್ಯದಲ್ಲಿ 6,395 ಆನೆಗಳು ಇದ್ದು, ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ವನ್ಯಜೀವಿಗಳ ಆವಾಸ ಸ್ಥಾನ ಕಡಿಮೆಯಾಗುತ್ತಿದ್ದು, ಕಾಡುಪ್ರಾಣಿಗಳು ನಾಡಿಗೆ ಬರುತ್ತಿವೆ. ಅದರಲ್ಲೂ ವಿಶೇಷವಾಗಿ ಆನೆಗಳಿಂದ ಸಾಕಷ್ಟು ಸಮಸ್ಯೆಗಳಾಗಿವೆ. ಜನರ ಜೀವಕ್ಕೆ ಭದ್ರತೆ ಜೊತೆಗೆ ವನ್ಯಪ್ರಾಣಿಗಳ ರಕ್ಷಣೆ ಎರಡನ್ನೂ ನಿಭಾಯಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. 10–12 ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ‘ಗಿಡ‌ನಾಟಿ ಕಾರ್ಯಕ್ರಮದ‌ ಅಡಿಯಲ್ಲಿ 3 ಲಕ್ಷ ಕಾಡುಹಣ್ಣಿನ ಗಿಡಗಳು, 7 ಲಕ್ಷ ಇತರ ಸಾಮಾಜಿಕ ಅರಣ್ಯಕ್ಕೆ ಪೂರಕವಾದ ಗಿಡಗಳನ್ನು ನಾಟಿ ಮಾಡಲಾಗುತ್ತದೆ. ಯೋಜನೆಯ 257 ಕಚೇರಿ ವ್ಯಾಪ್ತಿಯಲ್ಲಿ ತಲಾ 5,000 ಗಿಡಗಳನ್ನು ನೆಡಲಾಗುವುದು. ಇದಕ್ಕೆ ₹1 ಕೋಟಿ ಅನುದಾನ ಮೀಸಲಿಡಲಾಗಿದೆ. 2021ರಲ್ಲಿ ರೂಪಿಸಿರುವ ಈ ಯೋಜನೆಯಡಿ ಈವರೆಗೆ ನೆಟ್ಟಿರುವ ಸಸಿ 7.33 ಲಕ್ಷ ದಾಟಿದೆ. ಇದಕ್ಕಾಗಿ ‘ಶೌರ್ಯ’ ತಂಡ ರಚಿಸಿದ್ದು, ರಾಜ್ಯದ 91 ತಾಲ್ಲೂಕುಗಳಲ್ಲಿ 10,300ರಷ್ಟು ಸ್ವಯಂ ಸೇವಕರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ’ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವ ರಮಾನಾಥ ರೈ, ಮಂಗಳೂರು‌ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ವಿ.‌ಕರಿಕಾಲನ್, ಡಿಸಿಎಫ್ ಆ್ಯಂಟನಿ ಮರಿಯಪ್ಪ ಇದ್ದರು.

ನೆಟ್ಟ ಸಸಿಗಳ ಆಡಿಟ್‌

ಕಳೆದ ವರ್ಷ ಸರ್ಕಾರದ ವತಿಯಿಂದ 5.43 ಕೋಟಿ ಸಸಿ ನೆಡಲಾಗಿದ್ದು, ಅವುಗಳಲ್ಲಿ ಎಷ್ಟು ಸಸಿಗಳು ಬದುಕಿವೆ ಎಂಬುದನ್ನು ತಿಳಿಯಲು ಜಿಯೊ ಟ್ಯಾಗಿಂಗ್, ಆಡಿಟ್ ಮಾಡಿ ಆಗಸ್ಟ್ ಒಳಗಾಗಿ ಸಾರ್ವಜನಿಕರಿಗೆ ವರದಿ ನೀಡಲಾಗುವುದು. ಸದ್ಯ ದೊರೆತಿರುವ ಮಾಹಿತಿ ಪ್ರಕಾರ ಶೇ 85ರಿಂದ 90ರಷ್ಟು ಸಸಿಗಳು ಬದುಕಿವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT