ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ

ತುಳುನಾಡು ಸಂಘಟನೆಯ ಅಭಿಯಾನಕ್ಕೆ ವ್ಯಾಪಕ ಬೆಂಬಲ
Last Updated 18 ಆಗಸ್ಟ್ 2020, 6:32 IST
ಅಕ್ಷರ ಗಾತ್ರ

ಮಂಗಳೂರು: ತುಳು ಭಾಷೆಯು ಲಕ್ಷಾಂತರ ಜನರ ಮಾತೃಭಾಷೆಯಾಗಿದೆ. ಅದಾಗ್ಯೂ ಈ ಭಾಷೆಗೆ ಅರ್ಹವಾದ ಮನ್ನಣೆ ಮತ್ತು ಸ್ಥಾನಮಾನವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ತುಳುನಾಡಿನ ಮಕ್ಕಳು ತುಳು ಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಜೈ ತುಳುನಾಡು ಸಂಘಟನೆಯು ಅಭಿಯಾನವನ್ನು ಆರಂಭಿಸಿದೆ. ಇದಕ್ಕೆ ಕರಾವಳಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ತುಳು ಭಾಷೆಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು. ತುಳು ಭಾಷೆಯನ್ನು ಕೂಡ ‘ನೂತನ ಶಿಕ್ಷಣ ನೀತಿ-2020’ರಡಿಯಲ್ಲಿ ಸೇರಿಸುವಂತೆ ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು ಜೈ ತುಳುನಾಡು ಸಂಘಟನೆ ‘ಹ್ಯಾಷ್‌ಟ್ಯಾಗ್‌ ಎಜುಕೇಷನ್’ ಎನ್ನುವ ಟ್ವೀಟ್ ಅಭಿಯಾನ ಆರಂಭಿಸಿದೆ.

ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನು ಸೇರಿಸಲು ಒತ್ತಾಯಿಸಿ ಈ ಸಂಘಟನೆಯು ಈ ಹಿಂದೆ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನಡೆಸಿತ್ತು. ತುಳುವನ್ನು ಕರ್ನಾಟಕ ಮತ್ತು ಕೇರಳದಲ್ಲಿ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡುವ ಬೇಡಿಕೆಯನ್ನು ಕೂಡ ಕೇಳಿಕೊಂಡಿತ್ತು. ಇದೀಗ ಈ ಅಭಿಯಾನದಿಂದ ಜನರಿಗೆ ತುಳು ಲಿಪಿಯನ್ನು ಕಲಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.

ಕೊರೊನಾ ಸಮಸ್ಯೆ ಮುಗಿದ ಬಳಿಕ ಹೊಸ ಶಿಕ್ಷಣ ನೀತಿಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸಿದ್ದು, ಅದರ ಪ್ರಕಾರ ಐದನೇ ತರಗತಿಯವರೆಗಿನ ಮಕ್ಕಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಕಲಿಸಬೇಕಾಗಿದೆ. ಕರಾವಳಿ ಕರ್ನಾಟಕದ ಜನರು ತಮ್ಮ ಮಕ್ಕಳಿಗೂ ತುಳು ಭಾಷೆಯಲ್ಲಿ ಕಲಿಸಬೇಕೆಂದು ಬಯಸುತ್ತಾರೆ.

ತುಳು ಭಾಷೆಯನ್ನು ನೂತನ ಶಿಕ್ಷಣ ನೀತಿ-2020 ಅಡಿಯಲ್ಲಿ ಸೇರಿಸಲು ಮನವಿ ಮಾಡುವ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲು ಟ್ವೀಟ್ ಅಭಿಯಾನ ಆಯೋಜಿಸಿದೆ. ಸರ್ಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಹಲವಾರು ಮಂದಿ ಈಗಾಗಲೇ ಹ್ಯಾಷ್‌ಟ್ಯಾಗ್‌ ಎಜುಕೇಷನ್ ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ತುಳು ಭಾಷಿಕ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಅಭಿಯಾನದ ಮೂಲಕ ಒತ್ತಾಯಿಸಲಾಗುತ್ತಿದೆ.

ಜಗ್ಗೇಶ್‌ ಬೆಂಬಲ

ತುಳು ಭಾಷೆಯ ಅಭಿಯಾನಕ್ಕೆ ಕನ್ನಡದ ನವರಸ ನಾಯಕ ಜಗ್ಗೇಶ್ ಕೂಡ ಬೆಂಬಲ ನೀಡಿದ್ದು, ‘ನಾನು ಕೂಡಾ ನಿಮ್ಮೊಂದಿಗೆ ತುಳು ಭಾಷೆ ಅಭಿಯಾನಕ್ಕೆ ಬರುತ್ತೇನೆ’ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

‘ಮಲ್ಲೆ ಇಜ್ಜಿ ಯಾನ್ ಲಾ ತುಳು ಬಾಸೆಗ ನಿನ್ನೋಟ್ಟುಗು ಬರ್ಪೆ ಶುಭದಿನ (ತುಳು ಭಾಷೆಯ ಕುರಿತಾದ ನಿಮ್ಮ ಅಭಿಯಾನದಲ್ಲಿ ನಾನು ನಿಮ್ಮೊಂದಿಗೆ ಬರುತ್ತೇನೆ ಶುಭದಿನ) ಎಂದು ಹೇಳುವ ಮೂಲಕ ತುಳು ಭಾಷೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಸೇರಿಸಲು ಬೆಂಬಲ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT