ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಂಘರ್ಷದಿಂದ ದೇಶದ ಪ್ರಗತಿ ಕುಂಠಿತ

ಕೇಮಾರು ಸಾಂದೀಪಿನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ
Last Updated 20 ಫೆಬ್ರುವರಿ 2021, 11:52 IST
ಅಕ್ಷರ ಗಾತ್ರ

ಬಂಟ್ವಾಳ: ‘ಕನ್ನಡ ಮತ್ತು ತುಳು ನಮ್ಮ ಉಸಿರಾಗಬೇಕು. ಭಾಷೆಯಿಂದ ಸಂಸ್ಕೃತಿ ಉಳಿಯುತ್ತದೆ. ಜಾತಿ ಮತ್ತು ಭಾಷೆಗಾಗಿ ಸಂಘರ್ಷ ಉಂಟಾದರೆ ದೇಶದ ಪ್ರಗತಿ ಕುಂಠಿತವಾಗುತ್ತದೆ. ಸ್ವದೇಶ, ಸ್ವಧರ್ಮ ಪಾಲನೆ ಜೊತೆಗೆ ಪ್ರೀತಿಯಿಂದ ಶ್ರಮಿಕ ವರ್ಗದವರಲ್ಲಿ ದೇವರನ್ನು ಕಾಣಬೇಕು’ ಎಂದು ಕೇಮಾರು ಸಾಂದೀಪಿನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಇಲ್ಲಿನ ಬಿ.ಸಿ.ರೋಡು ಕೈಕುಂಜೆಯಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ರಂಗಮಂದಿರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಕನ್ನಡ ಭವನವನ್ನು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು. ‘ಕನ್ನಡ ಮತ್ತು ತುಳು ಭಾಷೆಗಳು ಈ ಜಿಲ್ಲೆಯ ಜನತೆಗೆ ಇಬ್ಬರು ತಾಯಿಯರಿದ್ದ ಹಾಗೆ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಜೊತೆಗೆ ರಾಜ್ಯ ಭಾಷೆಯಾಗಿ, ಯಕ್ಷಗಾನವು ರಾಜ್ಯ ಕಲೆಯಾಗಿ ಘೋಷಣೆಯಾಗಬೇಕು’ ಎಂದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಅನಾವರಣಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ಅವರು, ಪ್ರತಿ ಊರಿಗೊಂದು ಕನ್ನಡ ಭವನ ಅಗತ್ಯವಿದೆ ಎಂದರು.

ಕ್ಯಾಂಪ್ಕೊ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಅವರು ಪಂಜೆ, ಬಿ.ವಿ.ಕಾರಂತ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ನೀರ್ಪಾಜೆ, ಭೀಮಭಟ್ಟೆ ಭಾವಚಿತ್ರ ಅನಾವರಣಗೊಳಿಸಿದರು. ಯಕ್ಷಕಲಾವಿದ, ದಶಾವತಾರಿ ಗೋವಿಂದ ಭಟ್, ಸಾಹಿತ್ಯ ಪರಿಷತ್ ಪದಾಧಿಕಾರಿಗಳ ನಾಮಫಲಕ ಮತ್ತು ಯಕ್ಷಗಾನ ವೇಷದ ಭಾವಚಿತ್ರ ಅನಾವರಣಗೊಳಿಸಿದರು. ಮಹಮ್ಮದ್ ಯಾಸೀರ್ ಕಲ್ಲಡ್ಕ ಇವರ ನಾಣ್ಯ ಸಂಗ್ರಹ ಮತ್ತು ಪ್ರದರ್ಶನಕ್ಕೆ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಮನು ಬಳಿಗಾರ್ ಗೈರು ಹಾಜರಿ ಬಗ್ಗೆ ಧರ್ಮದರ್ಶಿ ಕೆ.ಹರಿಕೃಷ್ಣ ಪುನರೂರು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯಮಿ ಬಿ.ರಘುನಾಥ ಸೋಮಯಾಜಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪತ್ರಕರ್ತ ಹರೀಶ್ ಮಾಂಬಾಡಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಬಸ್ತಿ ವಾಮನ ಶೆಣೈ, ಅಧ್ಯಕ್ಷ ಐತಪ್ಪ ಆಳ್ವ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಕಸಾಪ ಗೌರವ ಕಾರ್ಯದರ್ಶಿ ಡಾ.ನಾಗವೇಣಿ ಮಂಚಿ, ರವೀಂದ್ರ ಕುಕ್ಕಾಜೆ, ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಸಂಚಾಲಕ ಕೊಳಕೆ ಗಂಗಾಧರ ಭಟ್, ಭುವನಭಿರಾಮ ಉಡುಪ, ಸುದರ್ಶನ್ ಜೈನ್, ಎನ್.ಶಿವಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಮತ್ತಿತರರು ಇದ್ದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಸ್ವಾಗತಿಸಿದರು. ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಕೆ.ಮೋಹನ್‌ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಮತ್ತು ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

‘ಭಾಷೆ ವಿಷಯದಲ್ಲಿ ಗೊಂದಲ ಇಲ್ಲ’

ರಾಜ್ಯದಲ್ಲಿ ಕಾವೇರಿ ನದಿ ನೀರಿನ ವಿವಾದ ಮತ್ತು ಬೆಳಗಾವಿ ಗಡಿ ವಿಚಾರ ಹೊರತುಪಡಿಸಿ ಭಾಷೆ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲದೆ, ಎಲ್ಲರೂ ಸೌಹಾರ್ದದಿಂದ ಜೀವಿಸುತ್ತಿದ್ದಾರೆ. ಕಳೆದ 20 ವರ್ಷಗಳ ಪರಿಶ್ರಮದಿಂದ ಸುಸಜ್ಜಿತ ಕನ್ನಡ ಭವನ ಇಲ್ಲಿ ನಿರ್ಮಾಣಗೊಂಡಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

‘ಪಂಜೆ ಮಂಗೇಶರಾಯರ ಹುಟ್ಟೂರು ಬಂಟ್ವಾಳದಲ್ಲಿ ನನ್ನ ಅವಧಿಯಲ್ಲಿ ಆರಂಭಗೊಂಡ ₹ 8 ಕೋಟಿ ವೆಚ್ಚದ ಮೂರು ಮಹಡಿಗಳ ಸಮುದಾಯ ಭವನ ಮತ್ತು ಸಂಶೋಧನಾ ಕೇಂದ್ರ ನಿರ್ಮಾಣ ಕಾಮಗಾರಿ ಭಾಗಶಃ ನಡೆದು, ಅರ್ಧಕ್ಕೆ ನಿಂತಿದೆ. ಬಿ.ಸಿ.ರೋಡಿನಲ್ಲಿ ₹ 8 ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT