ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 207 ಕಾಮಗಾರಿ: ಮಟ್ಟಾರು ರತ್ನಾಕರ ಹೆಗ್ಡೆ

₹10 ಕೋಟಿ ಮೊತ್ತದ ಕಾಮಗಾರಿಗಳಿಗೆ ಹೆಚ್ಚುವರಿ ಪ್ರಸ್ತಾವ: ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ
Last Updated 20 ಜುಲೈ 2022, 14:39 IST
ಅಕ್ಷರ ಗಾತ್ರ

ಮಂಗಳೂರು: ‘ಕರಾವಳಿ ಅಭಿವೃದ್ಧಿ ಪ್ರಾಧಿಕಾರರಿಂದ 2022–23 ಸೇ ಸಾಲಿನಲ್ಲಿ ರಾಜ್ಯದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ₹ 34.70 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 207 ಕಾಮಗಾರಿಗಳ ಕ್ರಿಯಾಯೋಜನೆಯೂ ಸಿದ್ಧವಾಗಿದೆ. ಇನ್ನೂ ₹10ಕೋಟಿ ಮೊತ್ತದ ಹೆಚ್ಚುವರಿ ಕಾಮಗಾರಿಗಳಿಗೆ ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ’2021–22ನೇ ಸಾಲಿನಲ್ಲಿ ಒಟ್ಟು 229 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ 151 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 78 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಸಾಲಿನಲ್ಲಿ ತೂಗು ಸೇತುವೆ, ಕಾಲುಸಂಕ, ಕಿರು ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಿಂದ ಕಾಲುಸಂಕಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಎಲ್ಲೆಲ್ಲಿ ಕಾಲು ಸಂಕದ ಅಗತ್ಯವಿದೆ ಎಂಬ ಬಗ್ಗೆ ಶೀಘ್ರವೇ ಅಧ್ಯಯನ ನಡೆಸಲಿದ್ದೇವೆ’ ಎಂದರು.

‘ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ಘಟಕ, ಆವರಣ ಗೋಡೆ, ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಸಂಪರ್ಕ ರಸ್ತೆ, ಪ್ರಯಾಣಿಕರ ತಂಗುದಾಣ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಸಮುದಾಯ ಭವನ, ರಂಗಮಂದಿರ, ಸ್ಮಶಾನ ಅಭಿವೃದ್ಧಿಗೂ ಅನುದಾನ ಒದಗಿಸಿದ್ದೇವೆ. ಬೈಲೂರಿನಲ್ಲಿ ಪರಶುರಾಮ ಥೀಂ ಪಾರ್ಕ್‌ ಅಭಿವೃದ್ಧಿಗೆ ₹ 1 ಕೋಟಿ ಒದಗಿಸಿದ್ದೇವೆ. ಮೂಲ್ಕಿ ತಾಲ್ಲೂಕಿನಲ್ಲಿ ಶಾಂಭವಿ ನದಿಗೆ ತೂಗು ಸೇತುವೆ, ಭಟ್ಕಳ ತಾಲ್ಲೂಕಿನ ಶಿರಾಲಿಯಲ್ಲಿ ಆಳ್ವೆ ಕೋಡಿ–ತೆಂಗಿನಗುಂಡಿ ತೂಗುಸೇತುವೆಗೆ ತಲಾ ₹ 1 ಕೋಟಿ, ಪುತ್ತೂರು ತಾಲ್ಲೂಕಿನ ಬೆಟ್ಟಂಪಾಡಿಯ ತೂಗುಸೇತುವೆಗೆ ₹ 60 ಲಕ್ಷ, ಕಡಬ ತಾಲ್ಲೂಕಿನ ಪಾಲ್ತಾಡಿಯಲ್ಲಿ ಗೌರಿಹೊಳೆಯ ತೂಗು ಸೇತುವೆಗೆ ₹ 30 ಲಕ್ಷ ಮಂಜೂರಾಗಿದೆ’ ಎಂದು ಮಾಹಿತಿ ನೀಡಿದರು.

‘ಹೆಬ್ರಿಯಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣಕ್ಕೆ ₹ 2 ಕೋಟಿ, ಬೆಳ್ತಂಗಡಿ ತಾಲ್ಲೂಕಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ₹ 1ಕೋಟಿ ಹಾಗೂ ವೇಣೂರಿನಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ₹ 1.05 ಕೋಟಿ, ಕಾರ್ಕಳ ತಾಲ್ಲೂಕಿನ ಬಜಗೋಳಿಯಲ್ಲಿ ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ₹ 1 ಕೋಟಿ, ಕಾರ್ಕಳದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಹಾಲ್‌ ಆಫ್‌ ಫೇಮ್‌ ಕಟ್ಟಡಕ್ಕೆ ₹ 50 ಲಕ್ಷ ಒದಗಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೀನುಗಾರಿಕಾ ತರಬೇತಿ ಕೇಂದ್ರಕ್ಕೆ ₹ 25 ಲಕ್ಷ, ಉರ್ವಸ್ಟೋರ್‌ನಲ್ಲಿ ತುಳುಭವನದಲ್ಲಿ ಬಯಲು ರಂಗ ಮಂದಿರ ನಿರ್ಮಾಣಕ್ಕೆ ₹30 ಲಕ್ಷ ಒದಗಿಸಲಾಗಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧಿಕಾರದ ಸದಸ್ಯೆ ಕೇಸರಿ ಯುವರಾಜ್‌, ಕಾರ್ಯದರ್ಶಿ ಪ್ರದೀಪ್‌ ಡಿಸೋಜ ಇದ್ದರು.

‘ಮತ್ಸ್ಯಸಂಪದಕ್ಕೆ ಜಾಗದ ಸಮಸ್ಯೆ’

‘ಪ್ರಧಾನಮಂತ್ರಿಯವರ ಮತ್ಸ್ಯಸಂಪದ ಯೋಜನೆಯಡಿ ಕೇಂದ್ರದಿಂದ ₹ 7.5 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹ 4.5 ಕೋಟಿ ಅನುದಾನ ಲಭ್ಯವಿದೆ. ಈ ಯೋಜನೆಯಡಿ ಸುರತ್ಕಲ್‌ ಬಳಿಯ ಸಸಿಹಿತ್ಲುವಿನಲ್ಲಿ ಮೀನು ಮಾರಾಟ ತಾಣ, ಫುಡ್‌ ಪಾರ್ಕ್‌ ಅಭಿವೃದ್ಧಿಪಡಿಸುವ ಹೊಣೆಯನ್ನು ಪ್ರಾಧಿಕಾರಕ್ಕೆ ವಹಿಸಲಾಗಿದೆ. ಆದರೆ ಇದಕ್ಕೆ ಗುರುತಿಸಿರುವ ಜಾಗವು ಅರಣ್ಯ ಇಲಾಖೆಯ ಜಂಗಲ್‌ ಲಾಡ್ಜಸ್‌ ಆ್ಯಂಡ್‌ ರೆಸಾರ್ಟ್ಸ್‌ ಸಂಸ್ಥೆಯ ಹೆಸರಿನಲ್ಲಿದೆ. ಜಾಗವನ್ನು ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸುವ ಪ್ರಯತ್ನ ಮುಂದುವರಿದಿದೆ’ ಎಂದು ರತ್ನಾಕರ ಹೆಗ್ಡೆ ತಿಳಿಸಿದರು.

‘ಸಮುದ್ರ ನೀರಿನ ಗುಣಮಟ್ಟ ತಪಾಸಣೆ’

‘ರಾಜ್ಯದ ಕರಾವಳಿಯಲ್ಲಿ 32 ತಾಣಗಳ ಮೂರು ಬಿಂದುಗಳಲ್ಲಿ ವರ್ಷದಲ್ಲಿ ಎರಡು ಸಲ ಸಮುದ್ರದ ನೀರಿನ ಗುಣಮಟ್ಟದ ಸಮೀಕ್ಷೆ ನಡೆಸಲಾಗುತ್ತದೆ.ಇದಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಈ ಪ್ರಕ್ರಿಯೆ ಸ್ವಲ್ಪ ವಿಳಂಬವಾಗಿದೆ. ಇದಕ್ಕೆ ಗೋವಾದ ಸಿಎಸ್‌ಐಆರ್‌ ಸಂಸ್ಥೆ ₹ 80.24 ಲಕ್ಷದ ದರ ಪಟ್ಟಿ ನೀಡಿದೆ’ ಎಂದು ರತ್ನಾಕರ ಹೆಗ್ಡೆ ಮಾಹಿತಿ ನೀಡಿದರು.

ಅನುದಾನ; ಯಾವುದಕ್ಕೆ ಎಷ್ಟು? (2022–23ನೇ ಸಾಲಿನಲ್ಲಿ)

ಕಾಮಗಾರಿ; ಸಂಖ್ಯೆ; ಮೊತ್ತ (₹ ಲಕ್ಷ)

ರಸ್ತೆ ನಿರ್ಮಾಣ/ ಅಭಿವೃದ್ಧಿ; 104; 934

ಕಾಲುಸಂಕ/ ಕಿರುಸೇತುವೆ; 12; 162

ತೂಗುಸೇತುವೆ; 4; 290

ಸಮುದಾಯ ಭವನ; 12; 122

ಕಟ್ಟಡ ನಿರ್ಮಾಣ/ ಅಭಿವೃದ್ಧಿ; 25; 327

ಥೀಂ ಪಾರ್ಕ್‌ ಅಭಿವೃದ್ಧಿ; 1; 100

ಮಾರುಕಟ್ಟೆ ನಿರ್ಮಾಣ;1; 50

ಶಾಲಾ ಕಟ್ಟಡ ಅಭಿವೃದ್ಧಿ; 11; 95

ಕ್ರೀಡಾಂಗಣ ನಿರ್ಮಾಣ/ ಅಭಿವೃದ್ಧಿ; 2; 42.50

ತುಳು ಬಯಲು ರಂಗ ಮಂದಿರ; 1; 30

ಪಂಚಾಯಿತಿ ಕಟ್ಟಡ ಅಭಿವೃದ್ಧಿ; 4; 40

ಇತರೆ; 30; 141

***

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಗಳು

ಅತ್ಯಾಧುನಿಕ ವಿಧಾನದಲ್ಲಿ ಒಣಮೀನು ಸಂಸ್ಕರಣೆ ತರಬೇತಿ

ಸ್ಥಳೀಯ ಉತ್ಪನ್ನ ಪ್ರೋತ್ಸಾಹಿಸಲು ವಿಶೇಷ ತರಬೇತಿ

ಸುಧಾರಿತ ಮಲ್ಲಿಗೆ ಕೃಷಿ ಕಾರ್ಯಾಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT