ಬುಧವಾರ, ನವೆಂಬರ್ 20, 2019
22 °C

ಅನರ್ಹರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ, ಅವರ ಬೇಡಿಕೆ ಈಡೇರಿಸುವೆವು: ಈಶ್ವರಪ್ಪ 

Published:
Updated:
Prajavani

ವಿಟ್ಲ: ‘ಅನರ್ಹ ಶಾಸಕರು ನಮ್ಮ ಅಳಿಯಂದಿರು. ಅವರಿಂದಲೇ  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರ ಬೇಡಿಕೆಗಳನ್ನು ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ’ ಎಂದು ಗಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಪೆರಾಜೆ ಗ್ರಾಮದ ಮಾಣಿ ಮತ್ತು ಇತರೆ 51 ಜನವಸತಿಗಳಿಗೆ ಬಹುಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯ ಶುದ್ಧೀಕರಣ ಘಟಕವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಅವರು ಮಾಧ್ಯಮಗಳ ಜತೆಗೆ ಮಾತನಾಡಿದರು.

‘ಟಿಪ್ಪು ಬಗ್ಗೆ ಗೊಂದಲ ಸೃಷ್ಟಿಸಿದ್ದೇ ಕಾಂಗ್ರೆಸಿಗರು ಮತ್ತು ಸಿದ್ದರಾಮಯ್ಯ. ಟಿಪ್ಪು ಜಯಂತಿಯನ್ನು ಮಾಡಿ ಎಂದು ಯಾರೂ ಕೇಳಿಲ್ಲ. ಈಗ ಇಬ್ರಾಹಿಂ ಸೇರಿ ಎಲ್ಲರೂ ಬೇಡ ಎನ್ನುತ್ತಿದ್ದಾರೆ. ಹಿಂದೂ, ಮುಸ್ಲಿಮರು ನೆಮ್ಮದಿಯಿಂದ ಜೀವನ ನಡೆಸುವುದು ಕಾಂಗ್ರೆಸ್‌ ಪಕ್ಷಕ್ಕೆ‌ ಇಷ್ಟವಿಲ್ಲ. ಹಾಗಾಗಿ ಟಿಪ್ಪು ಜಯಂತಿಗೆ ಕೈ ಹಾಕಿದ್ದಾರೆ’ ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಾಣಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಮಮತಾ ಎಸ್.ಶೆಟ್ಟಿ, ಜಿಲ್ಲಾಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ,  ಎಂಜಿನಿಯರ್ ನರೇಂದ್ರ ಬಾಬು, ಚುನಾಯಿತ ಸದಸ್ಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)