ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಕುಲಶೇಖರ ಕೊರ್ಡೆಲ್‌ ಹೋಲಿಕ್ರಾಸ್‌ ಚರ್ಚ್‌ಗೆ 150ರ ಸಡಗರ

ಇದೇ 14, 17 ರಂದು ಸಂಭ್ರಮಾಚರಣೆ
Published 13 ಸೆಪ್ಟೆಂಬರ್ 2023, 6:21 IST
Last Updated 13 ಸೆಪ್ಟೆಂಬರ್ 2023, 6:21 IST
ಅಕ್ಷರ ಗಾತ್ರ

ಮ೦ಗಳೂರು: ಕುಲಶೇಖರ ಕೊರ್ಡೆಲ್‌ ಹೋಲಿಕ್ರಾಸ್‌ ಚರ್ಚ್‌ಗೆ ಇದೇ 14ರಂದು 150 ವರ್ಷಗಳು ತುಂಬಲಿವೆ. ಈ ಪ್ರಯುಕ್ತ ಚರ್ಚ್‌ನಲ್ಲಿ ಇದೇ 14ರಂದು ಮತ್ತು 17ರಂದು ಕೃತಜ್ಞತಾ ಬಲಿಪೂಜೆ ಹಮ್ಮಿಕೊಳ್ಳಲಾಗಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಕ್ಲಿಫರ್ಡ್‌ ಫರ್ನಾಂಡಿಸ್‌, ‘ಚರ್ಚ್‌ನ 150 ವರ್ಷಾಚರಣೆ ಸಲುವಾಗಿ ಇದೇ 14 ರ೦ದು ಸ೦ಜೆ 5.30ಕ್ಕೆ ಫಾ. ಮ್ಯಾಕ್ಸಿಮ್‌ ನೊರೊನ್ಹ ಕೃತಜ್ಞತಾ ಬಲಿಪೂಜೆ ಅರ್ಪಿಸುವರು.  ಚರ್ಚ್‌ನ ಅಭಿವೃದ್ಧಿ ರೂವಾರಿಗಳ, ಕಾರ್ಯದರ್ಶಿಗಳ, ವಾರ್ಡ್‌ ಮುಖ್ಯಸ್ಥರ, ದಾನಿಗಳ ಹಾಗೂ ಸಂಸ್ಥಾಪಕರ ದಿನಗಳನ್ನು ಆಚರಿಸಲಿದ್ದೇವೆ. ಇದೇ 17 ರಂದು ಸ೦ಜೆ 5 .30 ಕ್ಕೆ ಮ೦ಗಳೂರು ಧರ್ಮಪ್ರಾ೦ತ್ಯದ ಧರ್ಮಾಧ್ಯಕ್ಷ  ವಂ.ಪೀಟರ್‌ ಪಾವ್ಲ್‌ ಸಲ್ದಾನಾ ಕೃತಜ್ಞತಾ ಬಲಿಪೂಜೆ ಅರ್ಪಿಸಲಿದ್ದಾರೆ. ಬಳಿಕ ಯುವಜನರ ದಿನ, ದ೦ಪತಿಗಳ ದಿನ, ಶಿಕ್ಷಕರ ದಿನ, ಆರೋಗ್ಯ ಕಾರ್ಯಕರ್ತರ ದಿನಗಳನ್ನೂ ಆಚರಿಸಲಿದ್ದೇವೆ’ ಎಂದರು.

‘ಕುಲಶೇಖರದಿಂದ 1.5 ಕಿ.ಮೀ ದೂರದಲ್ಲಿರುವ ಕೋರ್ಡೆಲ್‌ ಕಾಡಿನಲ್ಲಿ ಸ್ಥಳೀಯರು ಶಿಲುಬೆಯನ್ನು ನೆಟ್ಟು ಪ್ರಾರ್ಥನೆ ಸಲ್ಲಿಸುತ್ತಿದ್ದರು. ‘ಕುಲ್ಯಾರ್ದ್ ಅಜ್ಜೆರ್‌’ ಎಂದೇ ಖ್ಯಾತವಾಗಿದ್ದ ಮಿಲಾಗ್ರಿಸ್‌ ಚರ್ಚ್‌ನ ಧರ್ಮಗುರು ಪ್ರಾದ್‌ ಸ್ವಾಮಿ ಜನರ ಭಕ್ತಿಯನ್ನು ಕಂಡು ಪುಳಕಿತರಾಗಿದ್ದರು. ಅವರು ಆ ಶಿಲುಬೆಯನ್ನು ತಂದು  1873ರ ಸೆ. 14ರಂದು ಇಲ್ಲಿ ನೆಟ್ಟು, ಚರ್ಚನ್ನು ಪವಿತ್ರ ಶಿಲುಬೆಗೆ ಸಮರ್ಪಿಸಿದರು. ಇದಕ್ಕೆ ಕೊರ್ಡೆಲ್‌ ಎಂದು ನಾಮಕರಣ ಮಾಡಿದ್ದರು. ಈ 150 ವರ್ಷಗಳಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಈ ಚರ್ಚ್‌ನಿಂದ ಇಷ್ಟಾರ್ಥ ಸಿದ್ಧಿ ಪಡೆದಿದ್ದಾರೆ.’

‘ಕಾಲರಾ ಪೀಡಿತರ ಶುಶ್ರೂಷೆ ಮಾಡುತ್ತಿದ್ದ ಪ್ರಾದ್‌ ಸ್ವಾಮಿ 1877ರ ಡಿ 11ರಂದು ಅದೇ ರೋಗಕ್ಕೆ ತುತ್ತಾದರು. ಅವರ ಸಮಾಧಿಗೆ ಜನ ಈಗಲೂ ಭೇಟಿ ನೀಡುವ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಸಮಾಧಿಯ ಮಣ್ಣನ್ನು ಒಯ್ಯುತ್ತಾರೆ. ಡಿ 11ರಂದು ಪ್ರಾದ್‌ ಸ್ವಾಮಿ ಅವರ ಪುಣ್ಯಸ್ಮರಣೆ ಆಚರಿಸಲಿದ್ದೇವೆ. ಅಂದು ಅನ್ನ ಸಂತರ್ಪಣೆಯೂ ಇರಲಿದ್ದು 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.’ 

‘ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲೇ ಅತ್ಯಂತ ಹೆಚ್ಚು ಕುಟುಂಬಗಳನ್ನು ಹೊಂದಿದ್ದ ಈ ಚರ್ಚ್‌ನ ಕೆಲವು ಕುಟುಂಬಗಳು 2003ರಿಂದ ಆರಂಭವಾದ ಶಕ್ತಿನಗರ ಚರ್ಚ್‌ಗೆ ಹಂಚಿಕೆ ಆಗಿವೆ. ಇನ್ನು ಕೆಲವು ಕುಟುಂಬಗಳು ಪಾಲ್ದನೆಯಲ್ಲಿ 2006ರಲ್ಲಿ ಆರಂಭವಾದ ಚರ್ಚ್‌ಗೆ ಹಂಚಿಕೆಯಾಗಿವೆ. 1972ರಿಂದ  ಪಾಲನಾ ಮಂಡಳಿ ಚರ್ಚ್‌ನ ಆಡಳಿತವನ್ನು ನಿರ್ವಹಿಸುತ್ತಿದೆ. ಅದರಲ್ಲಿ 140 ಸದಸ್ಯರಿದ್ದಾರೆ.’

‘ಫ್ರಾದ್ ಸ್ವಾಮಿ ಆರಂಭಿಸಿದ್ದ ಚರ್ಚ್‌ ಸಂತ ಜೋಸಫರ ಪ್ರಾಥಮಿಕ ಶಾಲೆಯ (ಕನ್ನಡ ಮಾಧ್ಯಮ) ಜೊತೆಗೆ ಇಂಗ್ಲಿಷ್‌ ಮಾಧ್ಯಮದ ಪ್ರೌಢಶಾಲೆಯನ್ನೂ ನಡೆಸಲಾಗುತ್ತಿದೆ. ಬಡವರಿಗಾಗಿ  ವಸತಿ ನಿರ್ಮಾಣ (ಆವರ್ತ ನಿಧಿ), ವಿದ್ಯಾನಿಧಿ, ಆರೋಗ್ಯ ನಿಧಿ, ಫ್ರಾದ್ ಸ್ವಾಮಿ ನಿಧಿ ಯೋಜನೆಗಳನ್ನು ಚರ್ಚ್‌ ನಿರ್ವಹಿಸುತ್ತಿದೆ. ಸೇಂಟ್‌ ವಿನ್ಸೆ೦ಟ್‌ ಪಾವ್ಲ್‌ ಸಭೆಯೂ ಬಡವರ ಏಳಿಗೆಗಾಗಿ ಶ್ರಮಿಸುತ್ತಿದೆ. ವಸತಿ ನಿರ್ಮಾಣ ಸಮಿತಿ ಮತ್ತು ‘ಪ್ರಕಾಸ್’ ಯೋಜನೆ ಮೂಲಕವೂ ಬಡಜನರಿಗೆ ವಸತಿ ಒದಗಿಸಲಾಗುತ್ತದೆ’ ಎ೦ದರು.

ಸುದ್ದಿಗೋಷ್ಠಿಯಲ್ಲಿ ಪಾಲನಾ ಮಂಡಳಿ ಉಪಾಧ್ಯಕ್ಷೆ ರೂತ್‌ ಕ್ಯಾಸ್ತಲಿನೊ, ಕಾರ್ಯದರ್ಶಿ ಅನಿಲ್‌ ಡೆಸಾ, ಪ್ರಚಾರ ಸಮಿತಿ ಸಂಚಾಲಕಿ ಲವಿನಾ ಡಿಮೆಲ್ಲೊ, ಸಂಯೊಜಕ ಎಲಿಯಾಸ್‌ ಫರ್ನಾಂಡಿಸ್‌ ಮತ್ತಿತರರು ಇದ್ದರು.

1873ರ ಸೆ.14ರಂದು ಫ್ರಾದ್ ಸ್ವಾಮಿ ಅವರಿಂದ ಶಿಲುಬೆ ಸ್ಥಾಪನೆ ಸ್ಥಳಕ್ಕೆ ಕೋರ್ಡೆಲ್‌ ಎಂದು ನಾಮಕರಣ ಚರ್ಚ್‌ನ 150ರ ಸಂಭ್ರಮಾಚರಣೆಗೆ ಕೃತಜ್ಞತಾ ಬಲಿಪೂಜೆ

‘ಪ್ರೇಕ್ಷಣೀಯ ತಾಣ’

‘ಯೇಸುಕ್ರಿಸ್ತರ ಯಾತನೆಯ ಶಿಲುಬೆಯ ಹಾದಿ ಧ್ಯಾನ ಕೇಂದ್ರ ಬೆಟ್ಟದ ಶಿಲುಬೆ ಆರಾಧನಾ ಮಂದಿರ ಪವಿತ್ರ ಶಿಲುಬೆಯ ರೆಲಿಕ್‌ ವೆಲಾಂಕಣಿ ಮಾತೆಯ ಪ್ರಾರ್ಥನಾ ಮಂದಿರ ರಾಜ್ಯದ ಮೊದಲ ರೋಸರಿ ಪಾರ್ಕ್‌ ಸಿನಾಯ್‌ ಬೆಟ್ಟ 10 ಆಜ್ಞೆಗಳನ್ನು ಸಾಂಕೇತಿಸುವ ಚಿತ್ರಣಗಳು ಈ ಚರ್ಚನ್ನು ಪ್ರೇಕ್ಷಣೀಯ ತಾಣವನ್ನಾಗಿಸಿವೆ’ ಎಂದು ಫಾ.ಫಾ.ಕ್ಲಿಫರ್ಡ್‌ ಫರ್ನಾಂಡಿಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT