ಗುಡ್ಡ ಕುಸಿತ: ಮಡಿಕೇರಿ ಹೆದ್ದಾರಿ ಬಂದ್

7
ಬಿಸಿಲೆ, ಶಿರಾಡಿ ಘಾಟಿ ಹೆದ್ಧಾರಿಯಲ್ಲಿ ಬದಲಿ ಸಂಚಾರ

ಗುಡ್ಡ ಕುಸಿತ: ಮಡಿಕೇರಿ ಹೆದ್ದಾರಿ ಬಂದ್

Published:
Updated:
Deccan Herald

ಸುಳ್ಯ: ಮಡಿಕೇರಿ ಸಂಪರ್ಕಿಸುವ ಇಲ್ಲಿಯ ರಾಜ್ಯ ಹೆದ್ದಾರಿಯಲ್ಲಿ ಎರಡು ಬಾರಿ ಗುಡ್ಡ ಕುಸಿದ ಪರಿಣಾಮ ಸೋಮವಾರ ವಾಹನ ಸಂಚಾರ ಸ್ಥಗಿತಕೊಂಡಿದೆ.

ಮಡಿಕೇರಿ ಸಮೀಪದ ಮದೆನಾಡು ಎಂಬಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯ ಸಂದರ್ಭ ರಸ್ತೆ ಬದಿಯ ಗುಡ್ಡ ಕುಸಿದಿದೆ.  ಇದರಿಂದಾಗಿ ರಾತ್ರಿ ಸಂಚರಿಸುತ್ತಿದ್ದ ಬೆಂಗಳೂರು, ತಮಿಳುನಾಡು ಮತ್ತು ಮೈಸೂರು ಕಡೆಯಿಂದ ಬರುವ ಬಸ್‌ಗಳು ಅನಿವಾರ್ಯವಾಗಿ ಕುಶಾಲನಗರದಿಂದ ಬಿಸಿಲೆ, ಶಿರಾಡಿ ಘಾಟ್ ಮೂಲಕ ಬಂದಿವೆ.  ಆಕಡೆಗೆ ಹೋಗುವ ವಾಹನಗಳು ಕೂಡಾ ಮಾರ್ಗ ಬದಲಾಯಿಸಿವೆ.

ಮತ್ತೆ ಕುಸಿತ: ಬೆಳಿಗ್ಗೆಯೇ ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗುಡ್ಡ ಕುಸಿತದ ಮಣ್ಣನ್ನು ರಸ್ತೆಯಿಂದ ತೆರವು ಮಾಡುವ ಕೆಲಸ ಆರಂಭಿಸಲಾಯಿತು. ಎರಡು ಜೆಸಿಬಿ ಬಳಸಿ ಕೆಲಸ ಚುರುಕುಗೊಳ್ಳುತ್ತಿದ್ದಂತೆ ಮತ್ತೆ ಅದೇ ಜಾಗದಲ್ಲಿ ಜಾರಿ ನಿಂತಿದ್ದ ಗುಡ್ಡ ಮತ್ತೆ ಕುಸಿದಿದೆ.  ಸಂಜೆ ವರೆಗೂ ಕೆಲಸ ಮುಂದುವರಿದಿದೆ.

‘ರಸ್ತೆಯಿಂದ ಮಣ್ಣು ತೆರವು ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಆದರೆ ನಿರಂತರ ಸುರಿಯುವ ಮಳೆ ಅಡ್ಡಿ ಆಗುತ್ತಿದೆ. ರಾತ್ರಿಯವರೆಗೂ ಈ ಕಾರ್ಯಾಚರಣೆ ನಡೆಯಬಹುದು’ ಎಂದು ಮಡಿಕೇರಿ ಲೋಕೋಪಯೋಗಿ ಎಂಜಿನಿಯರ್ ಸುನಿಲ್ ತಿಳಿಸಿದ್ದಾರೆ.

 ಶಿರಾಡಿ ಘಾಟಿ ಹೆದ್ದಾರಿಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಸಾರ್ವಜನಿಕರಿಗೆ ಎದುರಾಗಬಹುದಾದ ದೊಡ್ಡ ತೊಂದರೆ ತಪ್ಪಿ ಹೋಗಿದೆ. ಶಿರಾಡಿ ಘಾಟಿ ಹೆದ್ದಾರಿ ಬಂದ್ ಆಗಿರುವಾಗ ಈ ಮಡಿಕೇರಿ ಘಾಟಿ ಮೂಲಕವೇ ಮಂಗಳೂರು, ಪುತ್ತೂರು, ಸುಳ್ಯ ಭಾಗದ ಬಸ್, ಲಾರಿ ಸಹಿತ ಘನ, ಲಘು ವಾಹನಗಳು ಸಾಗುತ್ತಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !