ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

31 ರವರೆಗೆ ದಂಡ ಶುಲ್ಕವಿಲ್ಲದೇ ಪ್ರವೇಶ: ಪ್ರೊ.ಯಡಪಡಿತ್ತಾಯ

ಮಂಗಳೂರು ವಿವಿ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಪ್ರೊ.ಯಡಪಡಿತ್ತಾಯ
Last Updated 7 ಅಕ್ಟೋಬರ್ 2020, 3:37 IST
ಅಕ್ಷರ ಗಾತ್ರ

ಮುಡಿಪು: ಕೋವಿಡ್-19 ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 208 ಕಾಲೇಜುಗಳಲ್ಲಿ ಈ ವರ್ಷದ ಪ್ರವೇಶಕ್ಕೆ ಇದೇ 31 ರವರೆಗೆ ದಂಡ ಶುಲ್ಕ ರಹಿತವಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಯ ವ್ಯಾಪ್ತಿಯ 208 ಕಾಲೇಜುಗಳನ್ನು ಸಂಪೂರ್ಣವಾಗಿ ಮಾದಕ ವಸ್ತು ಮುಕ್ತ ಆವರಣವನ್ನಾಗಿ ಮಾಡಬೇಕು ಎನ್ನುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ವಿಸ್ತೃತವಾದ ಟಾಸ್ಕ್ ಫೋರ್ಸ್ ಸಮಿತಿ ರಚಿಸಲಾಗುವುದು. ಹೊಸದಾಗಿ ತರಬೇತಿ ಹಾಗೂ ನೇಮಕಾತಿ ವಿಭಾಗವನ್ನು ಪ್ರಾರಂಭಿಸಲಾಗುವುದು ಎಂದರು.

ವಿಶ್ವವಿದ್ಯಾಲಯದಲ್ಲಿ ‘ಪೀಪಲ್‌ ಮ್ಯಾನೇಜ್‌ಮೆಂಟ್’ ಎಂಬ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಕೋರ್ಸ್‌ ಆರಂಭಿಸಲು ಶೈಕ್ಷಣಿಕ ಮಂಡಳಿ ಅನುಮೋದನೆ ನೀಡಿತು. ಈ ಡಿಪ್ಲೊಮಾ ಕೋರ್ಸ್ ಎರಡು ಸೆಮಿಸ್ಟರ್ ಹೊಂದಿದ್ದು, ಪದವಿಪೂರ್ವ ಶಿಕ್ಷಣ ಪಡೆದವರು ಅಧ್ಯಯನ ಮಾಡಬಹುದಾಗಿದೆ.

ವ್ಯಾಪ್ತಿಯ 208 ಕಾಲೇಜುಗಳ ಮರು ಸಂಯೋಜನೆ ಸಂಬಂಧಿಸಿದಂತೆ ಎಲ್ಲ ಕಾಲೇಜುಗಳಿಗೆ ಭೇಟಿ ನೀಡಲು ಸಾಧ್ಯವಿಲ್ಲದ್ದರಿಂದ ಹೊಸ ಕಾಲೇಜುಗಳಿಗೆ ಮಾತ್ರ ಭೇಟಿ ನೀಡಲಾಗುವುದು. ಉಳಿದ ಕಾಲೇಜುಗಳ ಸಂಯೋಜನೆ ಯನ್ನು ಭೇಟಿ ನೀಡದೇ ಹಾಲಿ ವರ್ಷದಲ್ಲಿ ನವೀಕರಿಸಲು ತೀರ್ಮಾನಿಸಲಾಯಿತು.

ಕುಲಸಚಿವ ಡಾ.ಪಿ.ಎಲ್. ಧರ್ಮ, ಕುಲಸಚಿವ ರಾಜು ಮೊಗವೀರ, ಹಣಕಾಸು ಅಧಿಕಾರಿ ನಾರಾಯಣ ಉಪಸ್ಥಿತರಿದ್ದರು.

ವಿವಿಧ ವರ್ಗಗಳಿಗೆ ಮೀಸಲಾತಿ

ಮಾಜಿ ದೇವದಾಸಿಯರ, ಲೈಂಗಿಕ ಶೋಷಿತರ ಹೆಣ್ಣು ಮಕ್ಕಳಿಗೆ ಸ್ನಾತಕೋತ್ತರ ಕೋರ್ಸ್ ಪ್ರವೇಶಾತಿಯಲ್ಲಿ ಶೇ 1, ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿರುವ ಕಾಶ್ಮೀರಿ ವಲಸಿಗರು ಮತ್ತು ಕಾಶ್ಮೀರಿ ಪಂಡಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪ್ರವೇಶಾತಿಯಲ್ಲಿ ಶೇ 5 ಮೀಸಲಾತಿ ನೀಡಲು ನಿರ್ಧರಿಸಲಾಯಿತು.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಳಯದ ಆದೇಶದಂತೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ವರ್ಗದಡಿ ವಿದ್ಯಾರ್ಥಿ ಪರಿಮಿತಿಯನ್ನು ಶೇ 10 ರಷ್ಟು ಹೆಚ್ಚಿಸಿ, ಸೀಟು ಹಂಚಿಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ದೇಶದ ಯಾವುದೇ ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರಿಗೆ 20 ಸೀಟು ಹಂಚಿಕೆ ಮಾಡಲು ಶೈಕ್ಷಣಿಕ ಮಂಡಳಿ ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT