ಗುರುವಾರ , ಮಾರ್ಚ್ 23, 2023
22 °C
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 85ರಷ್ಟು ಮಕ್ಕಳ ಹಾಜರಾತಿ

ಮಂಗಳೂರು ವಿವಿ: 209 ಕಾಲೇಜುಗಳಲ್ಲಿ ಎನ್‌ಇಪಿ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ 209 ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ರೂಪಿಸಿರುವ ಪಠ್ಯಕ್ರಮ ಬೋಧನೆ ಸೋಮವಾರದಿಂದ ಅನುಷ್ಠಾನಗೊಂಡಿದೆ.

ಶೈಕ್ಷಣಿಕ ವರ್ಷ ಆರಂಭದ ಮೊದಲ ದಿನ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಲ್ಲಿ ಶೇ 85ರಷ್ಟು, ಉಡುಪಿ ಜಿಲ್ಲೆಯಲ್ಲಿ ಶೇ 75ರಷ್ಟು ಹಾಗೂ ಕೊಡಗು ಜಿಲ್ಲೆಯಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು. ಎನ್‌ಇಪಿ ಹೊಸದಾಗಿ ಅನುಷ್ಠಾನಗೊಂಡಿರುವ ಕಾರಣ ಕಾಲೇಜುಗಳ ಪ್ರಮುಖರಿಗೆ ಅನುಮಾನಗಳಿದ್ದಲ್ಲಿ ಬಗೆಹರಿಸಲು, ಇಬ್ಬರು ಪ್ರಾಧ್ಯಾಪಕರನ್ನು ಇದಕ್ಕಾಗಿ ನಿಯೋಜಿಸಲಾಗಿದೆ ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕಿಶೋರ್‌ಕುಮಾರ್ ತಿಳಿಸಿದರು.

‘ಎನ್‌ಇಪಿ ಅನುಷ್ಠಾನ, ಹೆಚ್ಚುವರಿ ಪ್ರಾಧ್ಯಾಪಕರ ಅವಶ್ಯತೆ ಇನ್ನಿತರ ಸಂಗತಿಗಳು ಬರುವ ದಿನಗಳಲ್ಲಿ ಗೊತ್ತಾಗಲಿದ್ದು, ಈ ಸಂಬಂಧ ಯಾವುದೇ ಸಮಸ್ಯೆ ಇದ್ದಲ್ಲಿ ಬಗೆಹರಿಸಲಾಗುವುದು’ ಎಂದು ತಿಳಿಸಿದರು.

‘ಅಕಾಡೆಮಿಕ್ ಕೌನ್ಸಿಲ್ ಸಭೆಯಲ್ಲಿ ತಿಳಿಸಿದಂತೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಎನ್‌ಇಪಿ ಜಾರಿಗೊಳಿಸಲಾಗಿದೆ. ಅಧ್ಯಯನ ಮಂಡಳಿಯಿಂದ (ಬೋರ್ಡ್ ಆಫ್ ಸ್ಟಡೀಸ್‌) ಶೇ 98ರಷ್ಟು ಪಠ್ಯಕ್ರಮಗಳು ಸಿದ್ಧಗೊಂಡಿವೆ. ಅವುಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪಠ್ಯಕ್ರಮ ಸಿದ್ಧಪಡಿಸಲು ವಿಳಂಬವಾಗಿರುವ ಕಾಲೇಜುಗಳಲ್ಲಿ ರಾಜ್ಯ ಪಠ್ಯಕ್ರಮ ಅಳವಡಿಸಲಾಗಿದೆ. ಕನ್ನಡ ಭಾಷೆಯ ಪುಸ್ತಕಗಳು ಬರಲು ವಿಳಂಬವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಳೆದ ವರ್ಷ ರೂಪಿಸಿರುವ ಕನ್ನಡ ಭಾಷೆಯ ‍ಪ‍ಠ್ಯವನ್ನು ಬೋರ್ಡ್‌ ಆಫ್ ಸ್ಟಡೀಸ್ ಮೂಲಕ ಜಾರಿಗೊಳಿಸಿರುವುದರಿಂದ ಪುಸ್ತಕಗಳು ಈಗಾಗಲೇ ಸಿದ್ಧವಾಗಿವೆ’ ಎಂದು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ತಿಳಿಸಿದರು.

‘ಪಿಜಿ ತರಗತಿ 23ರಿಂದ ಆರಂಭ’
‘ಪಠ್ಯಕ್ರಮ ಸಿದ್ಧಪಡಿಸಲು ವಿಳಂಬವಾಗಿರುವ ಕೆಲವೇ ಕಾಲೇಜುಗಳ ಮೊದಲ ಎರಡು ಸೆಮಿಸ್ಟರ್‌ಗಳಿಗೆ ರಾಜ್ಯ ಪಠ್ಯಕ್ರಮ ಜಾರಿಗೊಳಿಸಲಾಗಿದೆ. ಬಿಬಿಎ ಮತ್ತು ಬಿ.ಕಾಂ. ಹೊರತುಪಡಿಸಿ, ಉಳಿದೆಲ್ಲ ತರಗತಿಗಳು ಪ್ರಾರಂಭಗೊಂಡಿವೆ. ಇವೆರಡು ಪದವಿಗಳ ಆರನೇ ಸೆಮಿಸ್ಟರ್ ಮೌಲ್ಯಮಾಪನ ನಡೆಯುತ್ತಿದೆ. ಇದು ನ.11ಕ್ಕೆ ಮುಗಿಯಲಿದ್ದು, 12ರಿಂದ ತರಗತಿಗಳು ಪ್ರಾರಂಭವಾಗುತ್ತವೆ. ಸ್ನಾತಕೋತ್ತರ ತರಗತಿಗಳು ನ.23ರಿಂದ ಪ್ರಾರಂಭವಾಗುತ್ತವೆ’ ಎಂದು ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಪ್ರತಿಕ್ರಿಯಿಸಿದರು.

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅಕ್ಟೋಬರ್‌ನಲ್ಲಿ ತರಗತಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಕೋವಿಡ್ ಕಾರಣಕ್ಕೆ ಪರೀಕ್ಷೆಗಳು ಮುಂದೂಡಿಕೆಯಾಗಿದ್ದವು. ಈಗ ನವೆಂಬರ್‌ನಲ್ಲಿ ಕಾಲೇಜುಗಳು ಪ್ರಾರಂಭವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು