ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜೇಶ್ವರ ಉಪಚುನಾವಣೆ: ಕನ್ನಡಿಗರೊಂದಿಗೆ ಸಂವಾದ, ಅಭ್ಯರ್ಥಿಗಳು ಗೈರು

Last Updated 12 ಅಕ್ಟೋಬರ್ 2019, 11:24 IST
ಅಕ್ಷರ ಗಾತ್ರ

ಬದಿಯಡ್ಕ : ಕನ್ನಡ ಭಾಷಾ ಅಲ್ಪಸಂಖ್ಯಾತರು ಬಹುಸಂಖ್ಯೆಯಲ್ಲಿರುವ ಮಂಜೇಶ್ವರ ವಿಧಾನ ಸಭಾ ಪ್ರದೇಶದಲ್ಲಿ ಇದೇ 21 ರಂದು ನಡೆಯುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಕುಂಬಳೆಯಲ್ಲಿ ಕನ್ನಡ ಹೋರಾಟ ಸಮಿತಿ ಆಯೋಜಿಸಿದ್ದ ‘ಕನ್ನಡಿಗರೊಡನೆ ಸಂವಾದ‘ ಕಾರ್ಯಕ್ರಮಕ್ಕೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಾರದೆ ಕನ್ನಡದ ಬಗೆಗಿನ ಅಸಲಿ ಕಾಳಜಿಯನ್ನು ತೋರಿಸಿದ್ದಾರೆ. ಕನ್ನಡ ಅಭ್ಯರ್ಥಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಕನ್ನಡಿಗರು ಖಂಡಿಸಿದ್ದಾರೆ.

ಈ ಬಾರಿ ರಾಜಕೀಯ ಪಕ್ಷಗಳು ಕನ್ನಡಿಗರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿದ್ದು, ಕನ್ನಡಿಗರ ಮತಗಳೇ ನಿರ್ಣಾಯಕವಾಗಿವೆ.ಈ ಹಿನ್ನೆಲೆಯಲ್ಲಿ ಕನ್ನಡ ಹೋರಾಟ ಸಮಿತಿ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ವಕೀಲ ಮುರಳೀಧರ ಬಳ್ಳುಕ್ಕುರಾಯ ಅವರ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ ಕೇರಳ ರಾಜಕೀಯ ಚರಿತ್ರೆಯಲ್ಲಿ ಅವಿರೋಧ ಆಯ್ಕೆಯ ಮೂಲಕ ಎರಡು ಬಾರಿ ಶಾಸಕರನ್ನು ಆಯ್ಕೆಗೊಳಿಸಿದ್ದ ಇತಿಹಾಸವಿರುವ ಕಾಸರಗೋಡಿನಲ್ಲಿ ಭಾಷಾ ಅಲ್ಪಸಂಖ್ಯಾತ ಕನ್ನಡಿಗರು ವೋಟ್ ಬ್ಯಾಂಕ್ ಆಗಿ ಇಂದು ಪರಿವರ್ತಿತರಾಗಬೇಕಿದೆ. ಈ ಮೂಲಕ ಕನ್ನಡಿಗರಲ್ಲದ ಅಭ್ಯರ್ಥಿಗಳನ್ನು ಚುನಾವಣೆಗೆ ಉಮೇದ್ವಾರಿಕೆಗೆ ಬಳಸದ ಸ್ಥಿತಿ ನಿರ್ಮಾಣವಾಗಬೇಕು. ಕನ್ನಡ ಅಭ್ಯರ್ಥಿಗಳೇ ವಿವಿಧ ರಾಜಕೀಯ ಪಕ್ಷಗಳಿಂದ ಸ್ಪರ್ಧಿಸಬೇಕು. ಆಗ ಇಲ್ಲಿನ ಕನ್ನಡದ ಅಸ್ಮಿತೆಯ ಅರಿವಾಗುತ್ತದೆ‘ ಎಂದರು.

ಸಭೆಯಲ್ಲಿ ಎನ್‌ಡಿಎ ಅಭ್ಯರ್ಥಿ ಪರ ವಕೀಲ ವಿ. ಬಾಲಕೃಷ್ಣ ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಜೋನ್ ಕ್ರಾಸ್ತಾ ಭಾಗವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್. ವಿ. ಭಟ್, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಗಟ್ಟಿ ಕುಂಬಳೆ ಇದ್ದರು. ಸಂವಾದದಲ್ಲಿ ವಿ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿಗಳಿಗೆ ಕನ್ನಡಿಗರ ಬಗ್ಗೆ ಕಾಳಜಿ ಇರಲಿಲ್ಲ. ಕನ್ನಡಿಗರ ಮತ ಪಡೆದು ಗೆದ್ದವರು ಪ್ರಮಾಣಿಕವಾಗಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸಿಲ್ಲ. ಕೇರಳ ರಾಜ್ಯ ಲೋಕಸೇವಾ ಆಯೋಗವು ಕನ್ನಡ ಪರೀಕ್ಷಾರ್ಥಿಗಳಿಗೆ ಮಲಯಾಳ ಪ್ರಶ್ನೆ ಪತ್ರಿಕೆಗಳನ್ನು ನೀಡಿದಾಗ ಬಿಜೆಪಿ ಪ್ರಬಲ ಹೋರಾಟ ಮಾಡಿ ಬೆಂಬಲಿಸಿತ್ತು. ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ, ಅಂಚೆ ಇಲಾಖೆ ಹಾಗೂ ಇತರ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಮತ್ತು ಸೌಲಭ್ಯಗಳಲ್ಲಿ ಗಡಿನಾಡ ಕನ್ನಡಿಗರು ಎದುರಿಸುವ ಸಮಸ್ಯೆಗೆ ಹಂತಹಂತವಾಗಿ ಪರಿಹಾರ ಕಂಡುಕೊಳ್ಳಲಾಗುತ್ತಿದೆ.’ ಎಂದು ಹೇಳಿದರು. ಪಕ್ಷೇತರ ಅಭ್ಯರ್ಥಿ ಜೋನ್ ಕ್ರಾಸ್ತಾ ಮಾತನಾಡಿ, ‘ಉಪ ಚುನಾವಣೆಯಲ್ಲಿ ನಾನು ಸೋತರೂ, ಗೆದ್ದರೂ ಕನ್ನಡಿಗರ ಪರವಾಗಿ ಸದಾ ಇರುವುದಾಗಿ ಭರವಸೆ ನೀಡಿದರು.

ಕನ್ನಡಿಗರ ಆಕ್ರೋಶ: ಕನ್ನಡ ಹೋರಾಟ ಸಮಿತಿಯು ಸಂಘಟಿಸಿದ ಕನ್ನಡಿಗರೊಂದಿಗೆ ಅಭ್ಯರ್ಥಿಗಳು ಕಾರ್ಯಕ್ರಮಕ್ಕೆ ಯುಡಿಎಫ್ ಅಭ್ಯರ್ಥಿ ಎಂ. ಸಿ. ಖಮರುದ್ದೀನ್ ಮತ್ತು ಎಲ್ ಡಿ ಎಫ್ ಅಭ್ಯರ್ಥಿ ಶಂಕರ ರೈ ಗೈರು ಹಾಜರಾದುದು ಆಕ್ರೋಶಕ್ಕೆ ಕಾರಣವಾಯಿತು. ಕನ್ನಡ ಭಾಷೆ, ಸಂಸ್ಕೃತಿ ಉಳಿವಿನ ಬಗ್ಗೆ ವೇದಿಕೆಗಳಲ್ಲಿ ಭರವಸೆ ನೀಡುವ ಪಕ್ಷಗಳು ತಮ್ಮ ನೈಜ ಕಾಳಜಿ ತೋರಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಯಿತು. ‌

ಎಲ್ ಡಿ ಎಫ್ ಪರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಮಂಜೇಶ್ವರ ಮಂಡಲ ವ್ಯಾಪ್ತಿಯ ವಿವಿಧೆಡೆ ಪರ್ಯಟನೆ ನಡೆಸಿರುವುದು ಮತ್ತು ಯುಡಿಎಫ್ ಪರ ಪ್ರಚಾರಕ್ಕೆ ಕಾಂಗ್ರೆಸ್ ಹಿರಿಯ ನೇತಾರ ಕೆ. ಸಿ. ವೇಣುಗೋಪಾಲ್ ಅವರೂ ಶನಿವಾರ ಆಗಮಿಸಿರುವುದರಿಂದ ಅಭ್ಯರ್ಥುಗಳು ಸಭೆಗೆ ಬಂದಿಲ್ಲ ಎಂಬ ಸಮಜಾಯಿಷಿ ಕೇಳಿ ಬಂದರೂ, ಅಭ್ಯರ್ಥಿಗಳ ಪ್ರತಿನಿಧಿಗಳನ್ನಾದರೂ ಕಳುಹಿಸಬಹುದಿತ್ತು ಎಂಬ ಕನ್ನಡಿಗರ ವಾದಕ್ಕೆ ನಿಖರ ಉತ್ತರ ದೊರೆಯಲೇ ಇಲ್ಲ. ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕೆ. ಸ್ವಾಗತಿಸಿ, ಸಭೆಯ ಔಚಿತ್ಯದ ಕುರಿತು ಮಾಹಿತಿ ನೀಡಿದರು. ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್ ವಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ ಮಾಸ್ತರ್ ಕೂಡ್ಲು ವಂದಿಸಿದರು. ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಎಸ್. ನವೀನಚಂದ್ರ ಮಾನ್ಯ, ಸದಸ್ಯ ಸುಂದರ ಬಾರಡ್ಕ, ಸಿರಿಗನ್ನಡ ವೇದಿಕೆ ಜಿಲ್ಲಾ

ಅಧ್ಯಕ್ಷ ವಿ. ಬಿ. ಕುಳಮರ್ವ, ನಿವೃತ್ತ ಪ್ರಾಧ್ಯಾಪಕಿ ಡಾ. ಯು. ಮಹೇಶ್ವರಿ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ವೀರೇಶ್ವರ ಕಲ್ಮರ್ಕರ್, ಹೊಸದುರ್ಗ ತಾಲೂಕು ವ್ಯಾಪ್ತಿಯ ಬಟ್ಟತ್ತೂರು ಪ್ರದೇಶದ ಕನ್ನಡ ಪ್ರಮುಖರಾದ ರಂಗನಾಥ ಮೈಲಾಟಿ, ರಾಮಚಂದ್ರ ಪಾಲೆಕ್ಕಿ, ಪ್ರಕಾಶ ಬಂಗಾಡು, ಶಂಕರ, ಬಿ. ವಾಸುದೇವ, ಎರೋಲ್ ಮಂಜುನಾಥ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಜಿಲ್ಲಾಧ್ಯಕ್ಷ ರವೀಂದ್ರನಾಥ ಕೆ. ಆರ್., ತಾರಾನಾಥ ಮಧೂರು, ಶ್ರೀಕಾಂತ್ ಕಾಸರಗೋಡು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT