ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ಶಿಕ್ಷಕರ ಕ್ಷೇತ್ರ | ಇನ್ನು ಗಣಿ ಉದ್ಯಮಿಗಳೂ ಆಯ್ಕೆಯಾಗಬಹುದು: ಅರುಣ್

Published 19 ಮೇ 2024, 5:33 IST
Last Updated 19 ಮೇ 2024, 5:33 IST
ಅಕ್ಷರ ಗಾತ್ರ

ಮಂಗಳೂರು: ‘ವಿಧಾನ ಪರಿಷತ್ತಿನ ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಕೆಲ ವರ್ಷಗಳಿಂದ ಶಿಕ್ಷಕರಲ್ಲದವರೇ ಪ್ರತಿನಿಧಿಸುತ್ತಿದ್ದಾರೆ. ಇನ್ನು ಮುಂದೆ ಗಣಿ ಉದ್ಯಮಿಗಳೂ ಈ ಕ್ಷೇತ್ರದಿಂದ ಆಯ್ಕೆಯಾಗುವ ಸ್ಥಿತಿ ನಿರ್ಮಾಣವಾಗಬಹುದು. ಆಗ ಈ ಕ್ಷೇತ್ರ ಮತ್ತಷ್ಟು ಹದಗೆಡಲಿದೆ’ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ್ ಹೊಸಕೊಪ್ಪ ಕಳವಳ ವ್ಯಕ್ತಪಡಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಆಮಿಷ ವೊಡ್ಡಿ, ಔತಣಕೂಟ ಏರ್ಪಡಿಸಿ, ಉಡುಗೊರೆಗಳನ್ನು ನೀಡಿ ಆಯ್ಕೆಯಾಗುವ ಪರಿಪಾಠ ಇರಲಿಲ್ಲ. ಆದರೆ, 2018ರ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲೂ ಈ ಪರಿಪಾಟ ಶುರುವಾಗಿದೆ’ ಎಂದು ಆರೋಪಿಸಿದರು.

‘ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಎಸ್‌.ಎಲ್‌.ಭೋಜೇಗೌಡ ಅವರದೇ ಪಕ್ಷವು ಸಮ್ಮಿಶ್ರ ಸರ್ಕಾರದ ಭಾಗವಾಗಿ ಆಡಳಿತ ನಡೆಸಿದ್ದಾಗ, ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ಏನು ಭರವಸೆಗಳನ್ನು ನೀಡಿದ್ದರೋ ಒಂದನ್ನೂ ಈಡೇರಿಸಿಲ್ಲ. ಈ ಸಲ ಅದೇ ಭರವಸೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯ‌ರ್ಥಿ ಕಣದಲ್ಲಿದ್ದಾಗಲೂ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡುವಂತೆ ಕೇಳಿದ್ದರು. ಈಗ ಬಿಜೆಪಿ– ಜೆಎಡಿಎಸ್‌ ನಡುವೆ ಮೆಲ್ಮಟ್ಟದಲ್ಲಿ ಹೊಂದಾಣಿಕೆ ಆಗಿರಬಹುದು. ಆದರೆ, ಬಿಜೆಪಿಯ ಮತದಾರರು ಭೋಜೇಗೌಡರಿಗೆ ಬೆಂಬಲ ಕೊಡಲು ಸಿದ್ಧರಿಲ್ಲ’ ಎಂದರು.

‘ವಿಧಾನ ಪರಿಷತ್ತಿನಲ್ಲಿ ಶಿಕ್ಷಕರನ್ನು ಪ್ರತಿನಿಧಿಸಲು ಇರುವುದು ಬೆರಳೆಣಿಕೆಯಷ್ಟು ಸ್ಥಾನಗಳು ಮಾತ್ರ. ಶಿಕ್ಷಕರ ಕ್ಷೇತ್ರದ ಮತದಾರರಾಗಲು ಕನಿಷ್ಠ ಮೂರು ವರ್ಷ ಶಿಕ್ಷಕರಾಗಿರುವುದು ಕಡ್ಡಾಯ. ಆದರೆ, ಈ ಕ್ಷೇತ್ರದ  ಚುನಾವಣೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು. ಈ ಕ್ಷೇತ್ರದ ಆಗುಹೋಗುಗಳ ಬಗ್ಗೆ ಅರಿವು ಇರುವವರು ಮಾತ್ರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬಲ್ಲರು. ಹಾಗಾಗಿ ಶಿಕ್ಷಕರ ಕ್ಷೇತ್ರದಿಂದ ಶಿಕ್ಷಕರೇ ಆಯ್ಕೆ ಆಗಬೇಕು. ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಅಧ್ಯಾಪಕನಾಗಿ ದುಡಿದಿರುವ ನನ್ನನ್ನು ಮತದಾರರು ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಚುನಾವಣೆ ಪಕ್ಷಾತೀತವಾಗಿ ನಡೆಯುವಂತಹದ್ದು. ಇಲ್ಲಿ ಯಾವುದೇ ಚಿಹ್ನೆ ಬಳಕೆಯಿಲ್ಲ. ಕನಿಷ್ಠ ಒಂದು ದಿನವಾದರೂ ಪಾಠ ಮಾಡಿ ಅನುಭವ ಇರುವವರನ್ನೇ ಆರಿಸಿ’ ಎಂದು ಮತದಾರರನ್ನು ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT