ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ನಿಯಂತ್ರಣಕ್ಕೆ ಮುಂದಾಗಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಭೆ
Last Updated 11 ಮೇ 2021, 5:08 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯ ನಗರ ಪ್ರದೇಶದಲ್ಲಿ ಹೆಚ್ಚು ಕೋವಿಡ್-19 ಪ್ರಕರಣಗಳು ಕಂಡು ಬರುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಂಜಾಗ್ರತಾ ಕ್ರಮ ಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಇಲ್ಲಿನ ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ ಸೋಮವಾರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹರಡುವಿಕೆಯ ನಿಯಂತ್ರಣದ ಕುರಿತು ಮಹಾನಗರ ಪಾಲಿಕೆ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ನಗರ ಪ್ರದೇಶ ವ್ಯಾಪ್ತಿಯಲ್ಲಿ ಕೋವಿಡ್–19 ಉಲ್ಬಣಗೊಳ್ಳುತ್ತಿವೆ. ಪ್ರತಿದಿನ ದೃಢಪಡುವ ಪ್ರಕರಣಗಳಲ್ಲಿ ಶೇ 75 ರಿಂದ 80 ರಷ್ಟು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇವೆ. ವಾರ್ಡ್‌ ಟಾಕ್ಸ್‌ಫೋರ್ಸ್‌ ಸಮಿತಿಗಳು ಸಕ್ರಿಯ ವಾಗಿ ಕಾರ್ಯ ನಿರ್ವಹಿಸುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟ ಬೇಕು ಎಂದು ಸೂಚನೆ ನೀಡಿದರು.

ಪಾಲಿಕೆ ಸದಸ್ಯರನ್ನು ಒಳಗೊಂಡ ವಾರ್ಡ್‌ವಾರು ಟಾಸ್ಕ್‌ಪೋರ್ಸ್ ಸಮಿತಿಗಳು ನಿತ್ಯ ಬೆಳಿಗ್ಗೆ 10 ಗಂಟೆಗೆ ಸಭೆಯನ್ನು ಸೇರಬೇಕು. ಸ್ಥಳೀಯವಾಗಿ ಕೋವಿಡ್–19 ದೃಢಪಟ್ಟು, ಹೋಂ‍ಐಸೋಲೇಷನ್‌ನಲ್ಲಿ ಇರುವ ರೋಗಿಗಳ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯಬೇಕು. ಅವರ ಆರೋಗ್ಯ ವಿಚಾರಿಸಿ, ಅಗತ್ಯ ನೆರವನ್ನು ನೀಡಬೇಕು. ಚಿಕಿತ್ಸೆಯ ಅಗತ್ಯ ಕಂಡು ಬಂದಲ್ಲಿ ಕೋವಿಡ್‌ಕೇರ್ ಸೆಂಟರ್‌ಗಳಿಗೆ ವರ್ಗಾಯಿಸಬೇಕು ಎಂದು ತಿಳಿಸಿದರು.

ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಕೋವಿಡ್ ಸೋಂಕಿತರ ಮನೆಗಳಿಗೆ ಕೋವಿಡ್ ಸ್ಟಿಕರ್‌ಗಳನ್ನು ಕಡ್ಡಾಯವಾಗಿ ಹಾಕಬೇಕು. ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕೋವಿಡ್ ಪರೀಕ್ಷೆ ಮಾಡಿಸುವಂತೆ ಆಯಾ ಪಾಲಿಕೆ ಸದಸ್ಯರು, ತಾಲ್ಲೂಕು ವೈದ್ಯಾಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ಪಾಲಿಕೆ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಶಾಲೆಗಳು, ವಿದ್ಯಾರ್ಥಿ ನಿಲಯಗಳು ಮತ್ತು ಇನ್ನಿತರ ಜಾಗಗಳನ್ನು ಬಳಸಿಕೊಂಡು ಕೋವಿಡ್‌ ಕೇರ್ ಸೆಂಟರ್‌ಗಳನ್ನಾಗಿ ಮಾರ್ಪಾಡು ಮಾಡುವ ಮೂಲಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಗರದ ಆಸ್ಪತ್ರೆಗಳು ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ನಿರೋಧಕ ಲಸಿಕೆ ಪಡೆಯುವಾಗ ಜನಸಂದಣಿ ಸೇರುವುದನ್ನು ನಿಲ್ಲಿಸಬೇಕು. ಎರಡನೇ ಡೋಸ್ ಪಡೆದುಕೊಳ್ಳುವವರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಯಾವುದೇ ವ್ಯಕ್ತಿಗಳಿಗೆ ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು. ಫಲಿತಾಂಶ ಬರುವವರೆಗೂ ಅಂತರ ಕಾಪಾಡಬೇಕು ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಉಪ ಮೇಯರ್ ಸುಮಂಗಲಾ ರಾವ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜನರಲ್ಲಿ ಜಾಗೃತಿ ಮೂಡಿಸಿ

ಪಾಲಿಕೆ ವತಿಯಿಂದ ಪ್ರತಿ ವಾರ್ಡ್‌ಗಳಲ್ಲಿ ಕೋವಿಡ್‌–19 ಸೋಂಕಿನ ಬಗ್ಗೆ ಹಾಗೂ ಲಸಿಕೆಯ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ನಡೆಯಬೇಕು. ನಗರ ವ್ಯಾಪ್ತಿಯಲ್ಲಿ ಕೋವಿಡ್‌ ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಸಲಹೆ ನೀಡಿದರು.

ಯಾರಲ್ಲಿ ಕೋವಿಡ್‌ ರೋಗ ಲಕ್ಷಣಗಳು ಕಂಡುಬರುತ್ತದೆಯೋ ಅಂಥವರನ್ನು ಪತ್ತೆಹಚ್ಚಿ, ಪರೀಕ್ಷೆಗೆ ಒಳಪಡಿಸಬೇಕು. ಅವರು ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಾರದಂತೆ ಪಾಲಿಕೆ ಸದಸ್ಯರು, ಆಶಾ ಕಾರ್ಯಕರ್ತೆಯರು ಎಚ್ಚರಿಕೆ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT