ದೇವಸ್ಥಾನಗಳಿಗೆ ಹೋಗಿ ನಾಡಿನ ಒಳಿತಿಗೆ ಪ್ರಾರ್ಥಿಸಿ: ಜಮೀರ್ ಅಹ್ಮದ್

ಮಂಗಳೂರು: ಜೋಡುಪಾಲದಲ್ಲಿ ನೆರೆ ಹಾವಳಿಯಲ್ಲಿ ಸಿಲುಕಿದ್ದ 200 ಜನರ ಪ್ರಾಣ ರಕ್ಷಣೆ ಮಾಡಿದ 16 ಜನರ ತಂಡದಲ್ಲಿದ್ದ ನಾಲ್ವರು ಹಿಂದೂ ಯುವಕರಿಗೆ ತಲಾ ₹1 ಲಕ್ಷ ನೀಡುವ ಮೂಲಕ ಆಹಾರ ಸಚಿವ ಜಮೀರ್ ಅಹ್ಮದ್ ಹೃದಯ ವೈಶಾಲ್ಯತೆಯನ್ನು ಮೆರೆದರು.
ಜಾತಿ ಭೇದ ಮರೆತು 16 ಜನರ ತಂಡದಲ್ಲಿದ್ದ 12 ಮಂದಿ ಮುಸ್ಲಿಂ ಯುವಕರಿಗೆ ಸಚಿವ ಜಮೀರ್ ಅಹಮದ್ ಅವರು ಮಡಿಕೇರಿಗೆ ಭೇಟಿ ನೀಡಿದ್ದ ಸಂದರ್ಭ ಉಮ್ರಾ ಯಾತ್ರೆಯ ತೆರಳಲು ನೆರವಿನ ಭರವಸೆ ನೀಡಿದ್ದರು. ಇದೀಗ ಅದೇ ಮಾದರಿಯಲ್ಲಿ ಆ ತಂಡದಲ್ಲಿದ್ದ ನಾಲ್ವರು ಹಿಂದೂ ಯುವಕರಿಗೆ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಲು ಗುರುವಾರ ತಲಾ ₹1 ಲಕ್ಷ ನೀಡಿದರು.
ಕುಡುಪು ಬಳಿಯ ಕರ್ನಾಟಕ ಹೌಸಿಂಗ್ ಬೋರ್ಡ್ ಜಾಗದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖಾ ಕಚೇರಿಗಳ ಸಂಕೀರ್ಣ ಮಾಪನ ಭವನದ ಶಿಲಾನ್ಯಾಸ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್, ‘ಮಡಿಕೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯುವಕರು ಮಾಡಿದ ಕಾರ್ಯದ ಬಗ್ಗೆ ತಿಳಿದಿದ್ದೆ. ಆಗಲೇ 12 ಜನರಿಗೆ ಉಮ್ರಾ ಯಾತ್ರೆಗೆ ತೆರಳಲು ಸಹಾಯ ಒದಗಿಸುವ ಭರವಸೆ ನೀಡಿದ್ದೆ. ಅದರಲ್ಲಿ ಇನ್ನು ನಾಲ್ವರು ಹಿಂದೂ ಯುವಕರು ಇರುವ ವಿಷಯ ನನಗೆ ತಿಳಿದಿರಲಿಲ್ಲ. ಈ ವಿಷಯ ತಿಳಿದ ನಂತರ ಅವರನ್ನು ಕರೆದು ಸನ್ಮಾನಿಸಲಾಗಿದೆ. ಇದೀಗ ಅವರು ತಮ್ಮ ಕುಟುಂಬದೊಂದಿಗೆ ದೇವಸ್ಥಾನಗಳಿಗೆ ತೆರಳಲು ತಲಾ ₹1 ಲಕ್ಷ ನೀಡುತ್ತಿದ್ದೇನೆ’ ಎಂದು ತಿಳಿಸಿದರು.
‘ಜೀವದ ಹಂಗು ತೊರೆದು ಪ್ರಾಣರಕ್ಷಣೆ ಮಾಡಿದ ಈ ತಂಡದಲ್ಲಿದ್ದ ಯುವಕರೆಲ್ಲರೂ ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದಾರೆ. ಇವರೆಲ್ಲರೂ ತಮ್ಮ ಪ್ರಾಣ ಲೆಕ್ಕಿಸಿದೇ ಹಲವರ ಜೀವ ರಕ್ಷಣೆ ಮಾಡಿದ್ದಾರೆ. ಈ ತಂಡದಲ್ಲಿ ವಿಜಯ ನಿಡಿಂಜಿ, ಬಿಪಿನ್ ಕಲ್ಲುಗುಂಡಿ, ದಿನೇಶ್ ಕುಲ್ಲುಗುಂಡಿ, ಮನೋಹರ ಕಲಿವೆ ಅವರೂ ಇದ್ದರು. ಇವರು ಬಜರಂಗದಳ ಸದಸ್ಯರಾಗಿದ್ದಾರೆ. ಆದರೆ, ಇದ್ಯಾವುದೂ ನನಗೆ ಮುಖ್ಯವಲ್ಲ. ಜಾತಿ– ಧರ್ಮಕ್ಕಿಂತ ಮಾನವೀಯತೆಯ ಧರ್ಮ ದೊಡ್ಡದು. ಹೀಗಾಗಿ ಈ ಯುವಕರಿಗೆ ದೇವಸ್ಥಾನಕ್ಕೆ ಹೋಗಲು ಉಡುಗೊರೆಯನ್ನು ನೀಡುತ್ತಿದ್ದೇನೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.