ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್ಲವರಿಗೆ ಸಚಿವ ಸ್ಥಾನ ನೀಡಲು ‘ನಾರಾಯಣ ಗುರು ವಿಚಾರ ವೇದಿಕೆ’ ಒತ್ತಾಯ

Published 23 ಮೇ 2023, 11:42 IST
Last Updated 23 ಮೇ 2023, 11:42 IST
ಅಕ್ಷರ ಗಾತ್ರ

ಮಂಗಳೂರು: 'ಬಿಲ್ಲವ-ಈಡಿಗ ನಾಮಧಾರಿ ಜಾತಿಗಳು ಮತ್ತು ಅವುಗಳ 26 ಪಂಗಡಗಳು ರಾಜ್ಯದ ನಾಲ್ಕನೇ ಅತಿದೊಡ್ಡ ಸಮುದಾಯ. ಆದರೂ ಈ ಸಮುದಾಯದ ಸದಸ್ಯರಿಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

‘ಆಡಳಿತ ಪಕ್ಷದ ಶಾಸಕರಾಗಿ ಈ ಸಮುದಾಯದಿಂದ ನಾಲ್ವರು ಆಯ್ಕೆಯಾಗಿದ್ದಾರೆ. ಇಬ್ಬರು ವಿಧಾನ ಪರಿಷತ್‌ ಸದಸ್ಯರಿದ್ದಾರೆ. ಅವರಲ್ಲಿ ಇಬ್ಬರಿಗೆ ಇನ್ನು ಮೂರು ತಿಂಗಳ ಒಳಗೆ ಸಚಿವ ಸ್ಥಾನ ನೀಡಬೇಕು’ ಎಂದು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಸರ್ಕಾರ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆಗೆ ಆದೇಶ ಮಾಡಿತ್ತು. ಆದರೆ, ಅದಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿರಲಿಲ್ಲ. ಯಾವುದೇ ಅನುದಾನವನ್ನೂ ನೀಡಿಲ್ಲ. ಹೊಸ ಸರ್ಕಾರ ನಿಗಮದ ಕಾರ್ಯಾಚರಣೆಗೆ ಕ್ರಮಕೈಗೊಳ್ಳಬೇಕು. ಅದಕ್ಕೆ ವಾರ್ಷಿಕ ₹ 500 ಕೋಟಿ ಅನುದಾನ ಮೀಸಲಿಡಬೇಕು’ ಎಂದರು

‘ಪಂಚಮಸಾಲಿಯಂತಹ ಮೇಲ್ವರ್ಗಗಳಿಗೆ ಮೀಸಲಾತಿ ನೀಡುವುದಾದರೆ, ಅದರಿಂದ ಇತರೆ ಹಿಂದುಳಿದ ವರ್ಗಗಳಲ್ಲಿರುವ 102 ಜಾತಿಗಳ ಶೇ 15ರಷ್ಟು ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು’ ಎಂದೂ ಅವರು ಆಗ್ರಹಿಸಿದರು.  

‘ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಕಾಂತರಾಜು ಅವರು ಅಧ್ಯಕ್ಷರಾಗಿದ್ದಾಗ ನಡೆಸಿದ್ದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಜಾರಿಮಾಡಬೇಕು. ಆ ವರದಿಯ ಪ್ರಕಾರ ಬಿಲ್ಲವ-ಈಡಿಗ  ಜಾತಿಯವರ ಸಂಖ್ಯೆ 13 ಲಕ್ಷ ಎಂದು ತಪ್ಪಾಗಿ ಉಲ್ಲೇಖವಾಗಿದೆ. ವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅಷ್ಟು ಮಂದಿ ಇದ್ದಾರೆ. ಈ ಲೋಪವನ್ನು ಸರಿಪಡಿಸಬೇಕು’ ಎಂದರು.

‘ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಕೋಟಿ–ಚನ್ನಯರ ಹೆಸರು, ಶಿವಮೊಗ್ಗ ವಿಮಾನನಿಲ್ದಾಣಕ್ಕೆ ಎಸ್.ಬಂಗಾರಪ್ಪ ಹೆಸರು ಇಡಲು ಕ್ರಮ ಕೈಗೊಳ್ಳಬೇಕು. ಸಿಗಂದೂರು ದೇವಸ್ಥಾನದ ಆಡಳಿತವನ್ನು ಧರ್ಮದರ್ಶಿಯವರ ಸಮಿತಿಯ ನಿರ್ವಹಣೆಗೆ ಮರಳಿ ಒಪ್ಪಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಜಲಾಶಯ ನಿರ್ಮಾಣಕ್ಕಾಗಿ ನೆಲೆ ಕಳೆದುಕೊಂಡ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ನನ್ನ ಹಿಂದುತ್ವ ವಿಚಾರಧಾರೆಯನ್ನು ಬೆಳ್ತಂಗಡಿ ಶಾಸಕರ ಹರೀಶ್‌ ಪೂಂಜ ಅವರು ಪ್ರಶ್ನೆ ಮಾಡಿದ್ದಾರೆ. ಅವರಿಗೆ ನಾನು ಬೆಳ್ತಂಗಡಿಯಲ್ಲೇ ಉತ್ತರ ನೀಡುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಚಾರ ವೇದಿಕೆಯ ಉಪಾಧ್ಯಕ್ಷ ಅಚ್ಚುತ ಅಮೀನ್‌ ಕಲ್ಮಾಡಿ, ರಾಜ್ಯ ಸಂಘಟನಾ ಸಹಕಾರ್ಯದರ್ಶಿ ರಾಕೇಶ್‌ ಉಡುಪಿ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ  ಜಗನ್ನಾಥ ಕೋಟೆ, ತಾಲ್ಲೂಕು ಘಟಕದ ಅಧ್ಯಕ್ಷ ನವೀನ್‌ ಕೋಟ್ಯಾನ್‌ ಬಂಟ್ವಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT