ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಲಕ್ಷದ್ವೀಪದ ಬಳಿ ಚಂಡಮಾರುತದ ಆತಂಕ

ನಾವಿಕರಿಗೆ, ಮೀನುಗಾರರಿಗೆ ಮುನ್ನೆಚ್ಚರಿಕೆ
Published 16 ಅಕ್ಟೋಬರ್ 2023, 14:11 IST
Last Updated 16 ಅಕ್ಟೋಬರ್ 2023, 14:11 IST
ಅಕ್ಷರ ಗಾತ್ರ

ಮಂಗಳೂರು: ಲಕ್ಷದ್ವೀಪದ ಸಮೀಪ, ಅರಬ್ಬೀ ಸಮುದ್ರದ ಆಗ್ನೇಯ ಭಾಗ ಮತ್ತು ಕರಾವಳಿ ತೀರದ ಸಮೀಪ ಚಂಡಮಾರುತ ರೂಪುಗೊಂಡಿದ್ದು, ಸಮುದ್ರ ಮಟ್ಟದಿಂದ 3.1 ಕಿ.ಮೀ ವರೆಗೂ ಇದರ ತೀವ್ರತೆ ಇರಲಿದೆ. ಇದರ ಪ್ರಭಾವದಿಂದ ಅರಬ್ಬೀ ಸಮುದ್ರದ ಆಗ್ನೇಯ ಹಾಗೂ ಪೂರ್ವ–ಕೇಂದ್ರ ಪ್ರದೇಶದಲ್ಲಿ ಇದೇ 17ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಚಂಡಮಾರುತವು ಅರಬ್ಬೀಸಮುದ್ರದಲ್ಲಿ ಪಶ್ಚಿಮ ಮತ್ತು ವಾಯವ್ಯ ಪ್ರದೇಶದತ್ತ ಸಾಗಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ನಾವಿಕರು, ಮೀನುಗಾರರು ಮುನ್ನೆಚ್ಚರಿಕೆ ವಹಿಸಬೇಕು ಎಂದು ನಮಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಸೋಮವಾರ ತಿಳಿಸಿದೆ. 

ಮುನ್ಸೂಚನೆಯಂತೆ ಚಂಡಮಾರುತ ಉಂಟಾಗಿದ್ದೇ ಆದರೆ ಬಂದರಿನ ಎಲ್ಲ ಕಾರ್ಯಾಚರಣೆಗಳನ್ನೂ ಸ್ಥಗಿತಗೊಳಿಸಲಾಗುತ್ತದೆ. ಹಡಗುಗಳು ಸಾಕಷ್ಟು ಮುಂಚಿತವಾಗಿ ದಡ ಸೇರಬೇಕು. ಬಂದರಿನ ಎಲ್ಲಾ ಕಾರ್ಯಾಚರಣೆಗಳು ರದ್ದಾಗುವ ಪರಿಸ್ಥಿತಿ ಉಂಟಾದರೆ ಅದನ್ನು ಎದುರಿಸಲು ಸಿದ್ಧರಾಗಿರಬೇಕು ಎಂದು ಎನ್‌ಎಂಪಿಎ ಬಂದರಿನ ಬಳಕೆದಾರರು, ಹಡಗು ಸಂಸ್ಥೆಗಳು, ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತಿರುವ ಜಿಲ್ಲಾಡಳಿತಗಳು, ಮೀನುಗಾರಿಕಾ ಇಲಾಕೆ, ಕರಾವಳಿ ಭದ್ರತಾ ಪೊಲೀಸ್‌ ಹಾಗೂ ಕಸ್ಟಮ್ಸ್‌ ಇಲಾಖೆಗಳಿಗೆ ಮುನ್ನೆಚ್ಚರಿಕಾ ಸಂದೇಶ ರವಾನಿಸಿದೆ. 

‘ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿ ಹವಾಮಾನ ಇಲಾಖೆ ನೀಡುವ ಕಾಲಕಾಲಕ್ಕೆ ನೀಡುವ ಮುನ್ಸೂಚನೆಗಳನ್ನು ಹಾಗೂ ವರದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಡಗಿನ ಸಿಬ್ಬಂದಿಯ ಸುರಕ್ಷತೆ, ಸಮುದ್ರದಲ್ಲಿರುವವರ ಸುರಕ್ಷತೆ ಹಾಗೂ ಹಡಗುಗಳಿಂದ ಉಂಟಾಗುವ ಸಮುದ್ರ ಮಾಲಿನ್ಯ ತಡೆಯುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಅಂತರರಾಷ್ಟ್ರೀಯ ಸುರಕ್ಷತೆ ನಿರ್ವಹಣೆ ಸಂಹಿತೆಗೆ ಬದ್ಧವಾಗಿರಬೇಕು. ಸಂದೇಶ ರವಾನಿಸುವ ಉಪಕರಣಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿರಬೇಕು. ಸಮುದ್ರದಲ್ಲಿ ಹಡಗುಗಳ ನಡುವೆ ಸಂದೇಶ ರವಾನಿಸಲು ಸಾಧ್ಯವಾಗುವ ತೀವ್ರ ಕಂಪನಾಂಕದ (ವಿಎಚ್‌ಎಫ್‌) ಚಾನೆಲ್‌ಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು. ಈ ಬಗ್ಗೆ ಸಮುದ್ರದಲ್ಲಿರುವ  ಹಾಗೂ ಬಂದರಿನಲ್ಲಿ ನಿಲ್ಲಿಸಿರುವ ಹಡಗುಗಳ ಕ್ಯಾಪ್ಟನ್‌ಗಳಿಗೆ ಸೂಚನೆ ನೀಡಬೇಕು’ ಎಂದು ಹಡಗು ಮಾಲೀಕರ ಪ್ರತಿನಿಧಿಗಳಿಗೆ ಎನ್‌ಎಂಪಿಎ ಸೂಚನೆ ನೀಡಿದೆ.

‘ಹಡಗುಗಳನ್ನು ಬಳಕೆಗೆ ಸರ್ವಸನ್ನದ್ಧವಾಗಿ ಇಟ್ಟುಕೊಂಡಿರಬೇಕು. ಹಡಗುಗಳನ್ನು ನಿಲ್ಲಿಸಲು ಬಳಸುವ ಹಗ್ಗಗಳು, ತಂತಿಗಳು, ಅವುಗಳನ್ನು ಕಟ್ಟಿಹಾಕಲು ಬಳಸುವ ಯಂತ್ರಗಳು ಯಥೇಚ್ಛವಾಗಿ ಲಭ್ಯ ಇರುವಂತೆ ನೋಡಿಕೊಳ್ಳಬೇಕು.’

‘ಕಸ್ಟಮ್ಸ್‌, ಭಾರತೀಯ ಕರಾವಳಿ ರಕ್ಷಣಾ ಪಡೆ, ಸೇವಾ ಬೋಟ್‌ಗಳು, ಬಂಕರ್‌ ಬಾರ್ಜ್‌ಗಳ ದೋಣಿಗಳು ಸಮುದ್ರಕ್ಕೆ ತೆರಳಲು ಸಾಧ್ಯ ಆಗದಿದ್ದರೂ ಅವುಗಳಲ್ಲೂ ಎಲ್ಲ ಪರಿಕರಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು. ಹಡಗುಗಳಿಗೆ ಸರಕು ತುಂಬಿಸಲು ಬಳಸುವ ಪರಿಕರಗಳು, ಕ್ರೇನ್‌ಗಳು, ಕಂಟೈನರ್‌ಗಳು, ದುರಸ್ತಿ ಮತ್ತು ಸುರಕ್ಷತಾ ಸಾಧನಗಳು ಬಳಕೆಯೋಗ್ಯ ಸ್ಥಿತಿಯಲ್ಲಿರಬೇಕು’ ಎಂದು ಪ್ರಾಧಿಕಾರವು ಸಲಹೆ ನೀಡಿದೆ.

‘ಮೀನುಗಾರಿಕ ಇಲಾಖೆಯವರೂ ಈ ಎಲ್ಲ ಮುನ್ನಚ್ಚರಿಕೆಗಳನ್ನು ಮೀನುಗಾರರಿಗೆ. ತೀರದಲ್ಲಿ ನೆಲೆಸಿರುವ ಮೀನುಗಾರಿಕಾ ವಸತಿಗಳಿಗೆ ರವಾನಿಸಬೇಕು’ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT