ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಅರ್ಜಿ ಆದ್ಯತೆ ಮೇರೆಗೆ ವಿಲೇವಾರಿ: ಜಿಲ್ಲಾ ಪಂಚಾಯಿತಿ ಸಿಇಒ

ಬ್ಯಾಂಕ್‌ಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕಟ್ಟುನಿಟ್ಟಿನ ಸೂಚನೆ
Published 12 ಮಾರ್ಚ್ 2024, 2:44 IST
Last Updated 12 ಮಾರ್ಚ್ 2024, 2:44 IST
ಅಕ್ಷರ ಗಾತ್ರ

ಮಂಗಳೂರು: ವಿವಿಧ ಸಾಲ ಯೋಜನೆಗಳ ಅಡಿ ಸಲ್ಲಿಕೆಯಾದ ಅರ್ಜಿಗಳು ತಿಂಗಳಾನುಗಟ್ಟಲೆ ಬಾಕಿ ಇರುವುದು ಒಳ್ಳೆಯದಲ್ಲ. ಇಂತಹ ಅರ್ಜಿಗಳನ್ನು ಬ್ಯಾಂಕ್‌ಗಳು ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು ಎಂದು ದಕ್ಷಿಣ‌ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ. ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಸಮಾಲೋಚನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಸಾಲ ಪಡೆಯಲು ಸಲ್ಲಿಕೆಯಾದ ಅರ್ಜಿಗಳನ್ನು ಬ್ಯಾಂಕ್‌ಗಳು ತಿರಸ್ಕರಿಸಿದ್ದಕ್ಕೆ  ಅಸಮಾಧಾನ ವ್ಯಕ್ತಪಡಿಸಿದ ಆನಂದ್‌, ‘ ಇದು ಸರಿಯಲ್ಲ. ಈ ಯೋಜನೆಯಡಿ ಇದುವರೆಗೆ ತಿರಸ್ಕೃತವಾದ ಎಲ್ಲ ಅರ್ಜಿಗಳನ್ನೂ ಮರುಪರಿಶೀಲಿಸಬೇಕು. ಮುಂದಿನ ಸಭೆಗೆ ಇದರ ಸಮಗ್ರ ಮಾಹಿತಿಯೊಂದಿಗೆ ಬರಬೇಕು. ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ಸಾಲ ಅರ್ಜಿಗಳನ್ನು ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣವನ್ನೂ ಬ್ಯಾಂಕ್‌ಗಳು ನೀಡಬೇಕು ಎಂದು ಸೂಚಿಸಿದರು’ ಎಂದು ಸೂಚಿಸಿದರು.

ಪ್ರಧಾನಮಂತ್ರಿ ಜನಧನ್‌ ಖಾತೆ ಆರಂಭಿಸಲು ಬ್ಯಾಂಕ್‌ಗಳು ಆಸಕ್ತಿ ವಹಿಸದ್ದಕ್ಕೆ ಸಿಇಒ ಸಿಟ್ಟಾದರು. ‘ಜನಧನ್‌ ಖಾತೆ ತೆರೆಯಲು ಇರುವ ಸಮಸ್ಯೆಯಾದರೂ ಏನು. ಕೇವಲ ಶೇ.6.9 ಗುರಿ ಸಾಧನೆ ಆಗಿದೆ. ಇಷ್ಟೊಂದು ಕಳಪೆ ನಿರ್ವಹಣೆಗೆ ಕಾರಣವಾದರೂ ಏನು’ ಎಂದು ತರಾಟೆಗೆ ತೆಗೆದುಕೊಂಡರು.

‘ಸ್ವಸಹಾಯ ಸಂಘಗಳ ಸದಸ್ಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಾರೆ. ಅವರ ಯಾವುದೇ ಸಾಲಗಳ ಮರುಪಾವತಿ ಬಾಕಿ ಉಳಿಯುವುದಿಲ್ಲ.  ಸ್ವಸಹಾಯ ಸಂಘಗಳ ಸದಸ್ಯರು ಸಾಲಕ್ಕೆ ಅರ್ಜಿ ಸಲ್ಲಿಸಿದರೆ ತ್ವರಿತವಾಗಿ ಮಂಜೂರು ಮಾಡಬೇಕು’ ಎಂದು  ಸಲಹೆ ನೀಡಿದರು.  

ರುಡ್‌ ಸೆಟ್ ಸಂಸ್ಥೆ ಬಗ್ಗೆ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಮಾಹಿತಿ ಇಲ್ಲದ ಬಗ್ಗೆಯೂ ಸಿಇಒ ಬೇಸರ ವ್ಯಕ್ತಪಡಿಸಿದರು. ‘ಬ್ಯಾಂಕ್‌ಗಳು ಮೊದಲು ಸಮಾಜಿಕ ಹೊಣೆಗಾರಿಕೆಯನ್ನಿ ನಿರ್ವಹಿಸಬೇಕು. ಉದ್ಯಮ ಆರಂಭಿಸಲು ಸಾಲ ಕೋರಿ ಬ್ಯಾಂಕ್‌ಗೆ ಬರುವ ನಿರುದ್ಯೋಗಿ ಯುವಕರನ್ನು ಉಜಿರೆಯ ರುಡ್‌ಸೆಟ್‌ ಸಂಸ್ಥೆಯ ವಸತಿಯುಕ್ತ ತರಬೇತಿಗಾಗಿ ಅಧಿಕಾರಿಗಳು ಕಳುಹಿಸಿಕೊಡಬೇಕು’ ಎಂದರು. 

ಅಟಲ್‌ ಪಿಂಚಣಿ ಯೋಜನೆಯಡಿ ಗುರಿಯನ್ನು ಮೀರಿ ಸಾಧನೆ ಮಾಡಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. 

ನಬಾರ್ಡ್‌ ಡಿಡಿಎಂ ಸಂಗೀತಾ ಎಸ್‌ ಕರ್ತ ಹಾಗೂ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ಕವಿತಾಎನ್‌.ಶೆಟ್ಟಿ ಭಾಗವಹಿಸಿದ್ದರು.

ಜಿಲ್ಲೆಯ ವಹಿವಾಟು ಶೇ 15.73ರಷ್ಟು ಹೆಚ್ಚಳ

‘ಜಿಲ್ಲೆಯಲ್ಲಿ 2023ರ ಡಿ. 31ರವರೆಗೆ ಒಟ್ಟು 115793.81 ಕೋಟಿ ಬ್ಯಾಂಕಿಂಗ್‌ ವಹಿವಾಟು ನಡೆದಿದೆ.  ಈ ವಹಿವಾಟು ವರ್ಷದಿಂದ ವರ್ಷಕ್ಕೆ ಶೇ 15.73ರಷ್ಟು ಹೆಚ್ಚಳವಾಗುತ್ತಿದೆ.   ಬ್ಯಾಂಕ್‌ಗಳಲ್ಲಿ ₹67523.90 ಕೋಟಿ ಠೇವಣಿ ಇದ್ದು ಇದರ ಬೆಳವಣಿಗೆ ದರ ಶೇ 11.32ರಷ್ಟಿದೆ.  ₹ 48269.91 ಕೋಟಿ ಸಾಲ ನೀಡಲಾಗಿದ್ದು ವಾರ್ಷಿಕ ಶೇ 22.50ರಷ್ಟು ಬೆಳವಣಿಗೆ ಕಂಡಿದೆ. ಸಾಲ–ಠೇವಣಿ ಅನುಪಾತ ಶೇ 71.49ರಷ್ಟಇದ್ದು ಇದು ನಿಗದಿತ ಮಿತಿಗಿಂತ ಜಾಸ್ತಿ ಇದೆ’ ಎಂದು ಲೀಡ್‌ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ಆಂಟೊನಿ ರಾಜ್ ವಿ ಮಾಹಿತಿ ನೀಡಿದರು.  ಕೃಷಿ ವಲಯದಲ್ಲಿ ಡಿಸೆಂಬರ್‌ ತ್ರೈಮಾಸಿಕದವರೆಗೆ ₹ 11474.72 ಕೋಟಿ ಸಾಲ ನೀಡಲಾಗಿದ್ದು   ವಾರ್ಷಿಕ ಗುರಿಗಿಂತ (₹ 8690 ಕೋಟಿ)  ಹೆಚ್ಚು (ಶೇ 132.05) ಸಾಧನೆ ಮಾಡಲಾಗಿದೆ. ಅತಿಸಣ್ಣ ಸಣ್ಣ ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ₹ 5361.74 ಕೋಟಿ ಸಾಲ ನೀಡಲಾಗಿದ್ದು ಶೇ 90.98ರಷ್ಟು ಗುರಿಸಾಧನೆಯಾಗಿದೆ. ಇವುಗಳಿಗೆ ₹ 5693 ಕೋಟಿ ಸಾಲ ನೀಡುವ ಗುರಿ ಇದೆ ಎಂದರು. ಯಾವುದೇ ಕಾರಣಕ್ಕೂ ಗುರಿ ಸಾಧನೆಯಿಂದ ಹಿಂದೆ ಸರಿಯುವಂತಿಲ್ಲ ಎಂದು ಸಿಇಒ ಸೂಚಿಸಿದರು.

‘ಆನ್‌ಲೈನ್‌ ವಂಚನೆ ಜಾಗೃತಿ ಮೂಡಿಸಿ’

‘ಆನ್‌ಲೈನ್‌ ವಂಚನೆ ಒಟಿಪಿ ಹಂಚಿಕೊಳ್ಳುವಂತೆ ಹೇಳಿ ವಂಚಿಸುವ ಪ್ರಕರಣಗಳು ಹೆಚ್ಚುತ್ತಿವೆ. ಸುರಕ್ಷಿತ ವಹಿವಾಟು  ಕುರಿತು ಗ್ರಾಹಕರಿಗೆ ಜಾಗೃತಿ ಮೂಡಿಸುವುದು ಬ್ಯಾಂಕ್‌ಗಳ ಕರ್ತವ್ಯ. ಇದಕ್ಕಾಗಿ ಹಣಕಾಸು ಸಾಕ್ಷರತೆ ಮೂಡಿಸಲೆಂದೇ ಇರುವ ಸೆಂಟರ್‌ ಫಾರ್‌ ಫೈನಾನ್ಷಿಯಲ್‌  ಲಿಟರಸಿ (ಸಿಎಫ್‌ಎಲ್‌) ಹಾಗೂ ಹಣಕಾಸು ಲಿಟರಸಿ ಸೆಂಟರ್‌ಗಳ (ಎಫ್‌ಎಲ್‌ಸಿ) ನೆರವನ್ನು ಪಡೆದುಕೊಳ್ಳಬಹುದು. ಬ್ಯಾಂಕ್‌ಗಳು ತಮ್ಮ ಸೇವೆಯನ್ನು ಶೇ 100ರಷ್ಟು ಡಿಜಿಟಲೀಕರಣಗೊಳಿಸಬೇಕು’ ಎಂದು ಸಿಇಒ ಹೇಳಿದರು. ‘ಬ್ಯಾಂಕ್‌ಗಳ ಎಲ್ಲ ಶಾಖೆಗಳಲ್ಲಿ  ಗ್ರಾಹಕರ ಸಭೆಯನ್ನು ನಿಯಮಿತವಾಗಿ ನಡೆಸಬೇಕೆಂಬ ನಿಯಮ ಇದೆ. ಆದರೆ ಈ ಸಭೆಗಳು ನಡೆಯುತ್ತಿಲ್ಲ. ಪ್ರತಿ ಶುಕ್ರವಾರ ಗ್ರಾಹಕರ ಸಭೆ ನಡೆಸಬೇಕು. ಗ್ರಾಹಕರು ಹರಿದ ನೋಟುಗಳನ್ನು ನೀಡಿದರೆ ಅದನ್ನು ಸ್ವೀಕರಿಸಲು ಬ್ಯಾಂಕ್‌ಗಳಿ ನಿರಾಕರಿಸಬಾರದು’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವ್ಯವಸ್ಥಾಪಕಿ ತನು ನಂಜಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT