ಕಸ್ತೂರಿರಂಗನ್ ವರದಿ: 17ರಂದು ಸಭೆ

7
ವಸ್ತುನಿಷ್ಠ ವರದಿಗೆ ಒತ್ತಾಯ: ಶಾಸಕ ಹರೀಶ ಪೂಂಜ

ಕಸ್ತೂರಿರಂಗನ್ ವರದಿ: 17ರಂದು ಸಭೆ

Published:
Updated:
Deccan Herald

ಬೆಳ್ತಂಗಡಿ: ‘ಅರಣ್ಯದೊಳಗಿರುವ ಜನವಸತಿ ಪ್ರದೇಶವನ್ನು ಹೊರಗಿಟ್ಟು ಉಳಿದ ಜಾಗವನ್ನು ಕಸ್ತೂರಿರಂಗನ್ ವರದಿ ವ್ಯಾಪ್ತಿಗೆ ಸೇರಿಸುವಲ್ಲಿ ವಸ್ತುನಿಷ್ಠ ವರದಿಯನ್ನು ಸಲ್ಲಿಸುವಂತೆ ಸರ್ಕಾರವನ್ನು ಆಗ್ರಹಿಸಲು ಇದೇ 17ರಂದು ಬೆಳ್ತಂಗಡಿಯ ಕಿನ್ಯಮ್ಮ ಸಭಾಭವನದಲ್ಲಿ ಸಮಾಲೋಚನ ಸಭೆಯನ್ನು ಕರೆಯಲಾಗಿದೆ’ ಎಂದು ಶಾಸಕ ಹರೀಶ ಪೂಂಜ  ತಿಳಿಸಿದರು.

 ಬೆಳ್ತಂಗಡಿಯಲ್ಲಿ  ಸೋಮವಾರ ಪತ್ರಿಕಾಗೋಷ್ಠಿಯಯಲ್ಲಿ ಅವರು ಮಾತನಾಡಿ ಹೋರಾಟದ ರೂಪುರೇಷೆಗಳನ್ನು ವಿವರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿ ಒಳಗೊಂಡಿವೆ. ಅದು ಜಾರಿಯಾದರೆ ಈ ಎಲ್ಲಾ ಗ್ರಾಮಗಳು ಕಳೆದುಹೋಗಲಿವೆ. ವಸ್ತುನಿಷ್ಠ ವರದಿ ಮಾಡಬೇಕು ಎನ್ನುವ ಸುಪ್ರೀಂಕೋರ್ಟ್‍ನ ಸೂಚನೆಯಂತೆ  44 ಗ್ರಾಮ ಪಂಚಾಯಿತಿಗಳು ವಿಶೇಷ ಗ್ರಾಮಸಭೆಗಳನ್ನು ಮಾಡಿ ನಿರ್ಣಯ- ವರದಿಗಳನ್ನು ಮಾಡಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ.

ವರದಿ ರಾಜ್ಯ ಸರ್ಕಾರಕ್ಕೆ ಕಳುಹಿಸುವಲ್ಲಿ ಹಿಂದಿನ ಉಸ್ತುವಾರಿ ಸಚಿವರುಗಳು, ಶಾಸಕರುಗಳು ವಿಫಲರಾಗಿದ್ದಾರೆ. ಹೀಗಾಗಿ ಇದೇ 17 ರಂದು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಆಮಂತ್ರಿಸಿ ಸಭೆ ನಡೆಸಲಾಗುವುದು.  44 ಗ್ರಾಮಗಳ ಸಂತ್ರಸ್ತರೂ ಬರಲಿದ್ದಾರೆ. ವಸ್ತು ನಿಷ್ಠ ವರದಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಸರ್ಕಾರ ವಿಫಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಜನರಿಗೆ ಮಾರಕವಾಗುವ ಎಲ್ಲಾ ಯೋಜನೆಗಳು ದ.ಕ.ಕ್ಕೆ ಬರುತ್ತವೆ. ಸರ್ಕಾರದ ಮಾನಸಿಕತೆಯಲ್ಲಿ ನಮ್ಮ ಜಿಲ್ಲೆ ಪ್ರಯೋಗಶಾಲೆ ಆಗಿದೆ. ಕಸ್ತೂರಿ ರಂಗನ್ ವರದಿ ಜಾರಿಗೆಯಾದರೆ ದ.ಕ.ಜಿಲ್ಲೆಯ 44 ಗ್ರಾಮಗಳು ಶಾಪಗ್ರಸ್ತವಾಗುತ್ತವೆ. ಹಿಂದಿನ ಸರ್ಕಾರ, ಅರಣ್ಯ ಸಚಿವರೂ  ಅಧ್ಯಯನ ಮಾಡಲಿಲ್ಲ. ನಿರ್ಣಯಗಳೆಲ್ಲಾ ಜಿಲ್ಲಾ ಕಚೇರಿಯಲ್ಲಿ ಕೊಳೆಯುತ್ತಿವೆ ಎಂದು ಟೀಕಿಸಿದರು.

ಕೇರಳ ಮಾದರಿ ಅನುಸರಿಸಲಿ: ಸರ್ಕಾರ ಕೂಡಲೇ ಸರ್ವೆ ಮಾಡಿಸಬೇಕು. ಜನವಸತಿ ಇರುವ ಪ್ರದೇಶವನ್ನು ಬಿಟ್ಟು ಉಳಿದ ಸ್ಥಳವನ್ನು ವರದಿಯಲ್ಲಿ ಸೇರಿಸಲಿ. ಪಂಚಾಯತಿಯ ಕಾರ್ಯದರ್ಶಿಗೆ ಮಾಹಿತಿ ಇರುತ್ತದೆ. ಅವರನ್ನು ಉಪಯೋಗಿಸಿಕೊಂಡು ಮಾಹಿತಿ ತಯಾರಿಸಬೇಕು. ಕೇರಳದಲ್ಲಿ ಇದನ್ನೇ ಮಾಡಿದ್ದಾರೆ ಎಂದು ಪೂಂಜ ಹೇಳಿದರು.

ಪಶ್ಚಿಮಘಟ್ಟದಲ್ಲಿರುವ ಗಿರಿಜನರು ಈಗಾಗಲೇ  ಅಲೆಮಾರಿ ಜೀವನ ನಡೆಸುವಂತಾಗಿದೆ. ಇದೀಗ ಮತ್ತೆ 44 ಗ್ರಾಮಗಳು ಸೇರ್ಪಡೆಯಾದರೆ ಸ್ಥಿತಿ ಚಿಂತಾಜನಕವಾಗಲಿದೆ. 2013ರ ಏಪ್ರಿಲ್ 15 ರಂದು ಕಸ್ತೂರಿರಂಗನ್ ತಂಡ ಕೇಂದ್ರ ಪರಿಸರ ಮತ್ತು ಅರಣ್ಯಮಂತ್ರಾಲಯಕ್ಕೆ ವರದಿ ಸಲ್ಲಿಕೆ ಮಾಡಿತ್ತು.

ಮಲೆನಾಡು ಹಿತ ರಕ್ಷಣಾ ಸಮಿತಿ ಸಂಚಾಲಕ ಕಿಶೋರ್ ಶಿರಾಡಿ, ಸಲಹೆಗಾರ ಕೃಷ್ಣಪ್ಪ ಬೇಂಗಳ  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !