ಶನಿವಾರ, ಡಿಸೆಂಬರ್ 14, 2019
24 °C
ಸ್ವಂತ ಖರ್ಚಿನಲ್ಲೇ ರಸ್ತೆ ಗುಂಡಿಗೆ ತೇಪೆ ಹಾಕಿದ ಗಿಲ್ಬರ್ಟ್ ಡಿಸೋಜ ತಂಡ

ಜನ ಮೆಚ್ಚುಗೆ ಪಡೆದ ಗುಂಡಿ ಮುಚ್ಚುವ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ನಿರಂತರ ಮಳೆ, ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಗರದ ಬಹುತೇಕ ರಸ್ತೆಗಳು ಹೊಂಡಮಯವಾಗಿವೆ. ಗುಂಡಿಗಳಿಂದ ತುಂಬಿರುವ ರಸ್ತೆಗೆ ತೇಪೆ ಹಾಕುವ ಕಾರ್ಯಕ್ಕೆ ಪಾಲಿಕೆಯೂ ಮುಂದಾಗುತ್ತಿಲ್ಲ. ಇದರಿಂದ ಬೇಸತ್ತ ನಗರದ ನಾಗರಿಕರ ತಂಡವೊಂದು ತಮ್ಮದೇ ಸ್ವಂತ ಖರ್ಚಿನಲ್ಲಿ ರಸ್ತೆಯ ಹೊಂಡ, ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡುತ್ತಿದೆ.

ತಂಡದ ಸದಸ್ಯರಾದ ಅರ್ಜುನ್ ಮಸ್ಕರೇನಸ್, ನಸೀರ್ ಮತ್ತು ಜಾಯ್ ಗೊನ್ಸಾಲ್ವಿಸ್ ಸಹಕಾರದಲ್ಲಿ ಸೋಜ ಎಂಟರ್‌ಪ್ರೈಸಸ್‌ನ ಮಾಲೀಕ, 72 ವರ್ಷದ ಗಿಲ್ಬರ್ಟ್ ಡಿಸೋಜ ಈ ಕಾರ್ಯವನ್ನು ಆರಂಭಿಸಿದ್ದಾರೆ.

ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 1991ರಲ್ಲಿ ಇಂಡಿಯನ್ ಸರ್ವಿಸ್ ಕ್ಲಬ್ ಆರಂಭಿಸಿದ್ದರು. ಬಳಿಕ ಈ ಕ್ಲಬ್ ಮೂಲಕ ಸ್ವಚ್ಛ ನಗರ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ವಾಸ್‌ಲೇನ್‌ ಅನ್ನು ಸ್ವಚ್ಛಗೊಳಿಸುವ ಅಭಿಯಾನ ನಡೆದಿತ್ತು. ಬಳಿಕ ಆರ್ಯ ಸಮಾಜ ರಸ್ತೆಯನ್ನು ಸ್ವಚ್ಛಗೊಳಿಸಲು ಮುಂದಾದಾಗ ಪ್ರೋತ್ಸಾಹ ಸಿಗದ ಕಾರಣ ಕ್ಲಬ್‌ ಅನ್ನು ವಿಸರ್ಜಿಸಬೇಕಾಯಿತು.

ಇದೀಗ ಕಂಕನಾಡಿಯಿಂದ ಪಂಪ್‌ವೆಲ್‌ವರೆಗಿನ ಗುಂಡಿಗಳನ್ನು ಮುಚ್ಚಲು ಕಾಂಕ್ರೀಟ್‌ ಮಿಕ್ಸ್ ಬಳಸಲಾಗಿದೆ. ಮುಂದೆ ಇಂಟರ್‌ಲಾಕ್‌ಗಳನ್ನು ಮುಚ್ಚಿ ಸರಿಪಡಿಸಲಾಗುವುದು. ಹೆಚ್ಚಿನ ಯುವಜನತೆ ಈ ಕಾರ್ಯಕ್ಕೆ ಮುಂದೆ ಬಂದು ಸಹಕರಿಸಬೇಕು ಎಂಬುದು ಗಿಲ್ಬರ್ಟ್‌ ಡಿಸೋಜ ಅವರ ಆಶಯ.

ಜನರಿಂದ ತೆರಿಗೆಯನ್ನು ಪಡೆಯುತ್ತಿರುವ ಮಹಾನಗರ ಪಾಲಿಕೆ ಜನರಿಗೆ ಯೋಗ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕಾಗಿದೆ. ಆದರೆ, ಮಳೆಯ ಕಾರಣವನ್ನು ಇಟ್ಟುಕೊಂಡು, ಗುಂಡಿ ಮುಚ್ಚುವುದೂ ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ಈ ತಂಡದ ಕಾರ್ಯಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸ್ವಂತ ಖರ್ಚಿನಲ್ಲಿ ಜೆಸಿಬಿ, ಟಿಪ್ಪರ್ ಲಾರಿ, ಮರಳು ಮತ್ತು ಇಂಟರ್‌ಲಾಕ್‌ಗಳ ವ್ಯವಸ್ಥೆ ಮಾಡಿದ್ದಾರೆ. ಈ ಕಾರ್ಯಕ್ಕೆ ಪ್ರೋತ್ಸಾಹಿಸಿದ ಸಂಚಾರ ಪೊಲೀಸರು ಮತ್ತು ಟ್ರಾಫಿಕ್ ವಾರ್ಡನ್‌ಗಳು ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವಾಗ ಸಂಚಾರವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಿದ್ದಾರೆ. ಈ ಕಾರ್ಯದಲ್ಲಿ ಸಿವಿಕ್ ಗ್ರೂಪ್‌ನ ಸದಸ್ಯರು ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಜತೆ ಸೇರಿಕೊಂಡು ನಗರದ ರಸ್ತೆಗಳ ಸುವ್ಯವಸ್ಥೆಗಾಗಿ ಗಿಲ್ಬರ್ಟ್ ಅವರು ತೆಗೆದುಕೊಂಡ ಕ್ರಮವನ್ನು ಪ್ರೋತ್ಸಾಹಿಸಿದರು.

ಈ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್. ಹರ್ಷ, ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಗಿಲ್ಬರ್ಟ್‌ರ ನಾಯಕತ್ವದ ತಂಡವನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಈ ತಂಡಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.

‘ಕಳೆದ ಕೆಲವು ದಿನಗಳಿಂದ ನಾವು ನಗರದ ಹಲವು ಕಡೆ ರಸ್ತೆಗಳ ಗುಂಡಿಗಳನ್ನು ಮುಚ್ಚಿದ್ದೇವೆ. ನಮ್ಮ ಈ ಕಾರ್ಯವನ್ನು ನೋಡಿದ ಸಮಾಜದ ಕಾಳಜಿಯುಳ್ಳ ಅನೇಕರು ಸ್ವಯಂಪ್ರೇರಣೆಯಿಂದ ಕೈಜೋಡಿಸಿದ್ದಾರೆ. ಹಾಗಾಗಿ ಇಂದು ನಾವೆಲ್ಲರೂ ಒಗ್ಗೂಡಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭ ಮಾಡಿದ್ದೇವೆ’ ಎಂದು ಗಿಲ್ಬರ್ಟ್ ಡಿಸೋಜ ಹೇಳಿದ್ದಾರೆ.

ಈ ತಂಡದಲ್ಲಿ ಸ್ಟ್ಯಾನಿ ಸುವರಿಸ್, ಲ್ಯಾನ್ಸಿ ಮೆನೆಜೆಸ್, ಅರ್ಜುನ್, ಅಲೋಶಿಯಸ್ ಅಲ್ಬುಕರ್ಕ್, ವಿನ್ಸೆಂಟ್ ಡಿಸಿಲ್ವ, ಇತರರು ಇದ್ದರು. 

ಪ್ರತಿಕ್ರಿಯಿಸಿ (+)