ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರು: ಸರ್ಕಾರಿ ವಾಹನದ ಇನ್ಶೂರೆನ್ಸ್ ಸುತ್ತ....

Published 18 ಮೇ 2024, 5:56 IST
Last Updated 18 ಮೇ 2024, 5:56 IST
ಅಕ್ಷರ ಗಾತ್ರ

ಮಂಗಳೂರು: ಇನ್ಶೂರೆನ್ಸ್‌ ಮತ್ತು ಎಮಿಷನ್‌ ಪರೀಕ್ಷೆ ಮಾಡಿಸಿರುವುದನ್ನು ಖಾತರಿಪಡಿಸಿಕೊಳ್ಳಲು ವಾಹನಗಳನ್ನು ಅಡ್ಡಹಾಕುವ ಪೊಲೀಸರೇ ಈ ಪ್ರಕ್ರಿಯೆಗಳನ್ನು ಪೂರೈಸುವುದಿಲ್ಲ ಎಂಬ ಆರೋಪದ ವಿಡಿಯೊವೊಂದು ಶುಕ್ರವಾರ ಭಾರಿ ಚರ್ಚೆಗೆ ಗ್ರಾಸವಾಯಿತು.

ಹೆದ್ದಾರಿ ಗಸ್ತು ವಾಹನವೊಂದನ್ನು ನಗರದ ಕುಂಟಿಕಾನ ಬಳಿ ಗುರುವಾರ ನಿಲ್ಲಿಸಲಾಗಿತ್ತು. ಆ ವಾಹನದ ವಿಡಿಯೊ ಮಾಡಿದ ವ್ಯಕ್ತಿಯೊಬ್ಬರು ಪೊಲೀಸ್ ವಾಹನಕ್ಕೇ ಇನ್ಶೂರೆನ್ಸ್ ಇಲ್ಲ ಎಂದು ಆರೋಪ ಮಾಡಿ ಅಲ್ಲಿದ್ದ ಎಎಸ್‌ಐ ಮತ್ತು ಕಾನ್ಸ್‌ಟೆಬಲ್ ಜೊತೆ ವಾದ ಮಾಡಿದ್ದರು. ಪೊಲೀಸರು ಅವರಿಗೆ ಉತ್ತರ ನೀಡಿದ್ದರು. ತುಳು ಭಾಷೆಯಲ್ಲಿ ಅಲ್ಲಿ ನಡೆದಿದ್ದ ವಾಗ್ವಾದದ ಚಿತ್ರೀಕರಿಸಿದ ವ್ಯಕ್ತಿ ‘ಮ್ಯಾಂಗಳೂರ್ ಮೇರಿ ಜಾನ್‌’ ಎಂಬ ಇನ್‌ಸ್ಟಾಗ್ರಾಂ ಖಾತೆಗೆ ಟ್ಯಾಗ್ ಮಾಡಿ ಶೇರ್ ಮಾಡಿದ್ದರು.

‘ನಾನು ತುರ್ತಾಗಿ ಆಸ್ಪತ್ರೆಗೆ ಹೋಗುವಾಗ ಅಡ್ಡಗಟ್ಟಿದ ಪೊಲೀಸರು ಇನ್ಶೂರೆನ್ಸ್ ನವೀಕರಣದ ದಾಖಲೆ ಕೇಳಿದ್ದಾರೆ. ಆದರೆ ಅವರ ವಾಹನದ ದಾಖಲೆಗಳ ಬಗ್ಗೆ ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಇನ್ಶೂರೆನ್ಸ್ ನವೀಕರಿಸಲಿಲ್ಲ ಎಂದು ತಿಳಿದಿದೆ’ ಎಂದು ವ್ಯಕ್ತಿ ಹೇಳಿದ್ದಾರೆ. ಅದಕ್ಕೆ ಉತ್ತರಿಸಿದ ಎಎಸ್‌ಐ ‘ನಮ್ಮ ವಾಹನದ ಇನ್ಶೂರೆನ್ಸ್‌ ಕೆಜಿ ಎಂಬ ಸೀರಿಸ್‌ನಲ್ಲಿ ಸರ್ಕಾರವೇ ಕಟ್ಟುತ್ತದೆ. ಹೆಚ್ಚಿನ ಮಾಹಿತಿ ಬೇಕಿದ್ದರೆ ಕಮಿಷನರನ್ನೇ ಕೇಳಿ’ ಎನ್ನುತ್ತಾರೆ.

‘ನಿಮ್ಮ ವಾಹನದ ಇನ್ಶೂರೆನ್ಸ್ ಸರ್ಕಾರ ಕಟ್ಟುವುದಾಗಿ ಹೇಳುತ್ತೀರಾ, ಹಾಗಾದರೆ ನನ್ನ ವಾಹನದ ಇನ್ಶೂರೆನ್ಸ್ ನನ್ನ ಮನೆಮಂದಿ ಕಟ್ಟುತ್ತಾರೆ ಎಂದು ನಾನು ಸುಮ್ಮನಿರಬಹುದೇ?’ ಎಂದು ವ್ಯಕ್ತಿ ಮರುಪ್ರಶ್ನೆ ಹಾಕುತ್ತಾರೆ.

ಈ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದಂತೆ ಶುಕ್ರವಾರ ಸಂಜೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗರವಾಲ್‌ ‘ಇಲಾಖಾ ವಾಹನದ ವಿಮೆ ಕಂತು ಪಾವತಿಸಲಿಲ್ಲ ಎಂದು ಬಿಂಬಿಸಿ ಹರಿಬಿಟ್ಟ ವಿಡಿಯೊದಲ್ಲಿ ತಪ್ಪು ಮಾಹಿತಿಗಳು ಒಳಗೊಂಡಿವೆ. ಪೊಲೀಸ್ ಇಲಾಖೆಯ ವಾಹನಗಳೂ ಕರ್ನಾಟಕ ಸರ್ಕಾರ ಇನ್ಶೂರೆನ್ಸ್‌ ವಿಭಾಗದ (ಕೆಜಿಐಡಿ) ವಿಮೆಯನ್ನು ಕಡ್ಡಾಯವಾಗಿ ಹೊಂದಿರುತ್ತವೆ. ವಿಮೆ ನವೀಕರಿಸಿಕೊಳ್ಳದ ಯಾವ ವಾಹನವನ್ನು ಕೂಡ ಬಳಸಿಕೊಳ್ಳುವುದಿಲ್ಲ’ ಎಂದು ಹೇಳಿದ್ದರು.

‘ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಕೆಎ 19 ಜಿ 1023 ವಾಹನದ ವಿಮೆ ಅವಧಿ 2025ರ ಅಕ್ಟೋಬರ್ 13ರ ವರೆಗೂ ಎಮಿಷನ್‌ ತಪಾಸಣೆ ಅವಧಿ 2025ರ ಜನವರಿ 8ರ ವರೆಗೆ ಚಾಲ್ತಿಯಲ್ಲಿರುತ್ತದೆ’ ಎಂದು ಕೂಡ ತಿಳಿಸಿದ್ದರು.

‘ವಾಹನ್’ ಆ್ಯಪ್‌ನಲ್ಲಿ ಇದರ ಮಾಹಿತಿ ಇಲ್ಲ ಎಂದು ಪತ್ರಕರ್ತರು ಹೇಳಿದಾಗ ‘ಈ ಕುರಿತು ಪರಿಶೀಲಿಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT