ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ನಿಯಮಗಳಿಗೆ ಮಿಶ್ರ ಪ್ರತಿಕ್ರಿಯೆ

Last Updated 27 ಫೆಬ್ರುವರಿ 2018, 19:17 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಜಾರಿಗೆ ತರಲು ಉದ್ದೇಶಿಸಿರುವ ನೂತನ ನಿಯಮಗಳಿಗೆ ಬ್ಯಾಡ್ಮಿಂಟನ್‌ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಂದ್ಯದ ವೇಳೆ ಕೋಚ್‌ಗಳು ಆಟಗಾರರಿಗೆ ಸಲಹೆ ನೀಡುವುದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಬಿಡಬ್ಲ್ಯುಎಫ್‌, ‍ಪ್ರಸ್ತುತ ಬಳಕೆಯಲ್ಲಿರುವ 21 ಪಾಯಿಂಟ್ಸ್‌ಗಳ ಮೂರು ಗೇಮ್‌ಗಳ ಪದ್ದತಿಯ ಬದಲು 11 ಪಾಯಿಂಟ್ಸ್‌ಗಳ 5 ಗೇಮ್‌ಗಳ ನಿಯಮ ಅನುಷ್ಠಾನಗೊಳಿಸಲು ಮುಂದಾಗಿದೆ. ಮೇ ತಿಂಗಳಿನಲ್ಲಿ ಬ್ಯಾಂಕಾಕ್‌ನಲ್ಲಿ ನಡೆಯುವ ವಾರ್ಷಿಕ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ.

ಬಿಡಬ್ಲ್ಯುಎಫ್‌ನ ಈ ನಿಯಮಗಳ ಕುರಿತು ಭಾರತದ ರಾಷ್ಟ್ರೀಯ ಕೋಚ್‌ ಪುಲ್ಲೇಲಾ ಗೋಪಿಚಂದ್‌ ಮತ್ತು ಡೆನ್ಮಾರ್ಕ್‌ ತಂಡದ ಮುಖ್ಯ ಕೋಚ್‌ ಕೆನೆತ್‌ ಜೊನಾಸೆನ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಂದ್ಯದ ವೇಳೆ ಕೋಚ್‌ಗಳು ಆಟಗಾರರಿಗೆ ಸಲಹೆ ನೀಡುವುದಕ್ಕೆ ಕಡಿವಾಣ ಹಾಕಲು ಬಿಡಬ್ಲ್ಯುಎಫ್‌ ಮುಂದಾಗಿರುವುದು ಏಕೆ ಎಂದು ತಿಳಿಯುತ್ತಿಲ್ಲ. ಮೊದಲು ಈ ಪದ್ದತಿ ಜಾರಿಯಲ್ಲಿರಲಿಲ್ಲ. ಕ್ರಮೇಣ ಇದನ್ನು ಬಳಕೆಗೆ ತಂದರು. ಈಗ ತೆಗೆದು ಹಾಕಲು ಮುಂದಾಗುತ್ತಿದ್ದಾರೆ. ಫೆಡರೇಷನ್‌ನ ಈ ನಿರ್ಧಾರದ ಹಿಂದಿನ ಮರ್ಮ ಏನು ಎಂಬುದು ನನಗಂತೂ ಗೊತ್ತಿಲ್ಲ’ ಎಂದು ಗೋಪಿಚಂದ್‌ ಹೇಳಿದ್ದಾರೆ.

‘ಹೊಸ ಪಾಯಿಂಟ್ಸ್‌ ಪದ್ದತಿ ಕೆಲವೊಬ್ಬರಿಗೆ ಅನುಕೂಲವಾಗಬಹುದು. ಇನ್ನು ಕೆಲವರು ಇದನ್ನು ಕಷ್ಟ ಎಂದು ಭಾವಿಸಬಹುದು. ಈಗಿ ರುವ 21 ಪಾಯಿಂಟ್ಸ್‌ಗಳ ಪದ್ದತಿ ಯಶಸ್ವಿಯಾಗಿದೆ. ಹಲವು ದೇಶಗಳಲ್ಲಿ ಇದು ಜನಪ್ರಿಯವೂ ಆಗಿದೆ. ಇದನ್ನು ಬದಲಿಸುವ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿದ್ದಾರೆ.

‘ಪಂದ್ಯದ ವೇಳೆ ಕೋಚ್‌ಗಳು ನೀಡುವ ಸಲಹೆಗಳಿಂದ ಆಟಗಾರರಿಗೆ ಅನುಕೂಲವಾಗುತ್ತದೆ. ಈ ಕಾರಣದಿಂದಾಗಿಯೇ ಬ್ಯಾಡ್ಮಿಂಟನ್‌ ಇತರ ಕ್ರೀಡೆಗಳಿಗಿಂತ ಭಿನ್ನ ಅನಿಸಿ ಕೊಂಡಿದೆ. ಬಿಡಬ್ಲ್ಯುಎಫ್‌ ಏನು ಬೇಕಾದರೂ ಬದಲಾವಣೆಗಳನ್ನು ಮಾಡಬಹುದು. ಇದನ್ನು ಯಾರೂ ಪ್ರಶ್ನಿಸುವಂತಿಲ್ಲ. ಫೆಡರೇಷನ್‌ನ ನಿರ್ಧಾರಗಳು ಆಟಗಾರರ ಹಿತ ಕಾಯುವಂತಿರಬೇಕು’ ಎಂದು ಕೆನೆತ್‌ ಹೇಳಿದ್ದಾರೆ.

ಭಾರತದ ಹಿರಿಯ ಕೋಚ್‌ ಯು.ವಿಮಲ್‌ ಕುಮಾರ್‌ ಮತ್ತು ಸೈಯದ್‌ ಮಹಮ್ಮದ್‌ ಆರೀಫ್‌ ಅವರು ಬಿಡಬ್ಲ್ಯುಎಫ್‌ ತೀರ್ಮಾನವನ್ನು ಬೆಂಬಲಿಸಿದ್ದಾರೆ.

‘ಪಂದ್ಯ ನಡೆಯುತ್ತಿರುವ ಸಮಯದಲ್ಲಿ ಕೋಚ್‌ಗಳು ಆಟಗಾರರಿಗೆ ಸಲಹೆ ನೀಡುವುದನ್ನು ನಿಯಂತ್ರಿಸಲು ಮುಂದಾಗಿರುವ ಬಿಡಬ್ಲ್ಯುಎಫ್‌ನ ನಿರ್ಧಾರ ಸ್ವಾಗತಾರ್ಹವಾದುದು. ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ಆಡಬೇಕು ಎಂಬುದನ್ನು ಕಲಿಯಲು ಆಟಗಾರರಿಗೆ ಇದರಿಂದ ಅನುಕೂಲವಾಗುತ್ತದೆ. ಆಲೋಚನಾ ಮನೋಭಾವ ಬೆಳೆಯುತ್ತದೆ. ವಿರಾಮದ ವೇಳೆಯಲ್ಲಿ ಆಟಗಾರರ ಜೊತೆ ಮಾತನಾಡಲು ಕೋಚ್‌ಗಳಿಗೆ ಅವಕಾಶ ನೀಡಬಹುದು’ ಎಂದು ವಿಮಲ್‌ ನುಡಿದಿದ್ದಾರೆ.

‘ಹೊಸ ‍ಪಾಯಿಂಟ್ಸ್‌ ಪದ್ದತಿಗೆ ನನ್ನ ವಿರೋಧವಿದೆ. ಈ ಆಲೋಚನೆ ಮೂರ್ಖತನದಿಂದ ಕೂಡಿದೆ. ಕ್ರೀಡಾ ವಾಹಿನಿಗಳ ಒತ್ತಡಕ್ಕೆ ಮಣಿದು ಫೆಡರೇಷನ್‌ ಈ ನಿಯಮ ಜಾರಿಗೆ ತರಲು ಹೊರಟಿರಬಹುದು’ ಎಂದಿದ್ದಾರೆ.

‘ಈಗ ಆಟಗಾರರು ಎಲ್ಲಾ ವಿಚಾರಕ್ಕೂ ಕೋಚ್‌ಗಳನ್ನೇ ಹೆಚ್ಚು ಅವಲಂಬಿಸುವಂತಾಗಿದೆ. ಇದರಿಂದ ಸ್ವಂತಿಕೆ ಹೊರಟು ಹೋಗಿದೆ. ಕೋಚ್‌ಗಳು ಸಲಹೆ ನೀಡುವುದಕ್ಕೆ ಕಡಿವಾಣ ಹಾಕುವುದರಿಂದ ಆಟಗಾರರಲ್ಲಿ ಸ್ವಯಂ ತೀರ್ಮಾನ ತೆಗೆದುಕೊಳ್ಳುವ ಗುಣ ಬೆಳೆಯುತ್ತದೆ’ ಎಂದು ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕೋಚ್‌ ಆರೀಫ್‌ ಅಭಿಪ್ರಾಯಪಟ್ಟಿದ್ದಾರೆ.

11 ಪಾಯಿಂಟ್ಸ್‌ಗಳ ನಂತರ ಮತ್ತು ಗೇಮ್‌ ಮುಗಿದ ನಂತರ ಕೋಚ್‌ಗಳು ಆಟಗಾರರ ಜೊತೆ ಚರ್ಚಿಸುವುದರಿಂದ ಪಂದ್ಯದ ಅವಧಿ ಹೆಚ್ಚುತ್ತದೆ ಎಂಬ ಕಾರಣದಿಂದ ಬಿಡಬ್ಲ್ಯುಎಫ್‌ ಹೊಸ ನಿಯಮ ಜಾರಿಗೊಳಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT