ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನ ಕಲೆಗೆ ಅಧ್ಯಾತ್ಮ ಸ್ಮರ್ಶದ ಸೆಲೆ

‘ಅನುಗ್ರಹದಿಂದ ಕೂಡಿದ ಸರಳ ಜೀವನ’ ಕುರಿತು ಶಿವಾನಿ ಪ್ರವಚನ
Published 12 ಫೆಬ್ರುವರಿ 2024, 5:37 IST
Last Updated 12 ಫೆಬ್ರುವರಿ 2024, 5:37 IST
ಅಕ್ಷರ ಗಾತ್ರ

ಮಂಗಳೂರು: ಪ್ರಶಾಂತವಾಗಿ ಹರಿಯುವ ನದಿಯಂತೆ ಸೌಮ್ಯವಾದ ಮಾತಿನ ಓಘ, ಸರಳ ಶ್ವೇತವಸ್ತ್ರಧಾರಿಯಾಗಿ ಉದ್ವೇಗವಿಲ್ಲದೆ ವಿರಳ ವಿಷಯಗಳ ಮಂಥನ, ಸುಂದರ ಜೀವನ ನಡೆಸುವ ಕಲೆಗೆ ಅಧ್ಯಾತ್ಮದ ಸ್ಪರ್ಶ ನೀಡುವ ಕುರಿತು ಗುರುವಿನ ರೂಪದಲ್ಲಿ ಪಾಠ...

ರಾಜಯೋಗ ಶಿಕ್ಷಕಿ, ಬಿ.ಕೆ.ಶಿವಾನಿ ಅವರು ಭಾನುವಾರ ನಡೆಸಿಕೊಟ್ಟ ಪ್ರವಚನ ಕಾರ್ಯಕ್ರಮವು ನಗರದ ಟಿಎಂಎ ಪೈ ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ್ದವರಿಗೆ ನೆಮ್ಮದಿಯ ನೆಲೆ ಕಂಡುಕೊಳ್ಳುವ ದಾರಿದೀಪವಾಯಿತು.

‘ಅನುಗ್ರಹದಿಂದ ಕೂಡಿದ ಸರಳ ಜೀವನ’ ಕುರಿತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮಂಗಳೂರು ವಲಯ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಂದೂವರೆ ತಾಸು ಪ್ರವಚನ ನೀಡಿದ ಶಿವಾನಿ, ಋಣಾತ್ಮಕ ಚಿಂತನೆಗಳನ್ನು ಧನಾತ್ಮಕವಾಗಿ ಪರಿವರ್ತಿಸಿದರೆ ಸಮಾಜದಿಂದ ಸಮಸ್ಯೆಗಳನ್ನು ತೊಡೆದುಹಾಕಬಹುದು ಎಂದು ಅಭಿಪ್ರಾಯಪಟ್ಟರು.

‘ಪಡೆದುಕೊಳ್ಳುವುದರಿಂದ ಯಾವುದಕ್ಕೂ ಮಹತ್ವವಿಲ್ಲ. ಕೊಡುವುದರಿಂದ ಎಲ್ಲದಕ್ಕೂ ದಿವ್ಯಸ್ಥಾನ ಸಿಗುತ್ತದೆ. ದಿನ, ವರ್ಷ ಮತ್ತು ಋತುಗಳ ಹಾಗೆ ಸೃಷ್ಟಿಯೂ ಒಂದು ವೃತ್ತದಲ್ಲಿ ಸಾಗುತ್ತದೆ. ಅದರ ಪ್ರಕಾರ ಈಗ ಕಲಿಯುಗ. ಆದರೆ ಮನುಷ್ಯ ತನ್ನ ದುಷ್ಕೃತ್ಯಗಳ ಮೂಲಕ ಕಲಿಯುಗವನ್ನು ಘೋರ ಕಲಿಯುಗವನ್ನಾಗಿ ಮಾಡಿದ್ದಾನೆ. ಈ ಸ್ಥಿತಿ ಹೀಗೆಯೇ ಮುಂದುವರಿದರೆ ಜಗತ್ತಿನ ಭವಿಷ್ಯ ಕರಾಳ ಆಗಲಿದೆ. ಹಾಗಾಗದೇ ಇರಲು ಕೇಡು ನಾಶವಾಗಿ ಬೆಳಕು ಮೂಡಬೇಕು’ ಎಂದು ಅವರು ಹೇಳಿದರು.

‘ಮನೆಯನ್ನು ಸ್ವರ್ಗ ಅಥವಾ ನರಕವನ್ನಾಗಿ ಮಾಡುವುದು ಕಟ್ಟಡವಾಗಲಿ ಅದರ ಒಳಗಿರುವ ವಸ್ತುಗಳಾಗಲಿ‌ ಅಲ್ಲ. ಅಲ್ಲಿ ವಾಸಿಸುವ ಮನಸ್ಸುಗಳು. ಆದ್ದರಿಂದ ಕಲಿಯುಗಕ್ಕೆ ನಮ್ಮ ಕೊಡುಗೆಯೂ ಇದೆ. ನಮಗದನ್ನು ಸರಿ ಮಾಡುವ ಸಾಮರ್ಥ್ಯವೂ ಇದೆ. ಯಾವ ಸ್ಥಿತಿಯಲ್ಲಿ ಬದುಕಬೇಕು ಎಂಬುದನ್ನು ನಾವೇ ನಿರ್ಧರಿಸಬೇಕು. ಕಲಿಯುಗದಲ್ಲಿ ಯೋಚನೆಗಳ ಮೂಲಕ ನಮ್ಮ ಮೇಲೆ ನಾವೇ ದಾಳಿ ಮಾಡುತ್ತಿದ್ದೇವೆ. ಹಾಗೆ ಮಾಡಿಯೂ ಬೇರೆಯವರ ಮೇಲೆ ಆರೋಪ‌ ಮಾಡುವ ಚಾಳಿ ಮುಂದುವರಿದಿದೆ’ ಎಂದರು.

‘ಆಲೋಚನೆ, ಮಾತು ಮತ್ತು ವರ್ತನೆಯಿಂದ ಸಮಸ್ಯೆಗಳು ಉಂಟಾಗುತ್ತವೆ. ಕ್ಷಮೆಯಿಂದ ಅದನ್ನು ನೀಗಿಸಬಹುದು.‌ ಮನಸ್ಸು ಶುದ್ಧವಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ‌. ಕ್ಷಮೆಗೂ‌ ಮಿಗಿಲಾದದ್ದು‌ ಧನಾತ್ಮಕತೆ. ಋಣಾತ್ಮಕ ಕ್ರಿಯೆಗೆ ಧನಾತ್ಮಕ ಪ್ರತಿಕ್ರಿಯೆ ನೀಡಿದರೆ ಆಶೀರ್ವಾದವಾಗಿ ಪರಿವರ್ತನೆ ಆಗುತ್ತದೆ. ಎರಡೂ ಕಡೆಯಿಂದ ಋಣಾತ್ಮಕ ಆಲೋಚನೆಗಳು ಉತ್ಪತ್ತಿಯಾದರೆ ಅದೇ ಹೆಚ್ಚಾಗಿ ಜಗತ್ತಿಗೆ ಕಂಟಕ ಉಂಟಾಗುತ್ತದೆ. ಆದ್ದರಿಂದ ಋಣಾತ್ಮಕ ಸಮಾಲೋಚನೆಗಳಿಂದ ದೂರ ಉಳಿಯುವುದರ ಜೊತೆಗೆ ಬೇರೆಯವರಲ್ಲೂ ಅಂಥ ಭಾವ ಮೂಡುವಂತೆ ಮಾಡಬೇಕು. ಧನಾತ್ಮಕತೆಯೇ ನಮ್ಮ ಮಂತ್ರವಾಗಬೇಕು. ಆಗ ಋಣಾತ್ಮಕ ಶಕ್ತಿ ಬಳಿಗೆ ಬರುವುದಿಲ್ಲ. ಅದರಿಂದ ಕಲಿಯುಗವು ಸತ್ಯಯುಗದತ್ತ ವಾಲುತ್ತದೆ’ ಎಂದು ಅವರು ಹೇಳಿದರು.

ರಾಜಯೋಗ ಶಿಕ್ಷಕಿ ಬಿ.ಕೆ.ನಿರ್ಮಲಾ, ಬ್ರಹ್ಮಕುಮಾರಿಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆ ಬಿ.ಕೆ. ವಿಶ್ವೇಶ್ವರಿ ಇದ್ದರು. ಬಿ.ಕೆ.ಅಂಬಿಕಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT