ಬುಧವಾರ, ಜೂನ್ 23, 2021
24 °C

ಎಸ್ಸೆಸ್ಸೆಲ್ಸಿ: ದಕ್ಷಿಣ ಕನ್ನಡಕ್ಕೆ ‘ಬಿ’ ಶ್ರೇಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: 2019–20ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ‘ಬಿ’ ಶ್ರೇಣಿ ದೊರಕಿದೆ. ಜಿಲ್ಲಾವಾರು ಫಲಿತಾಂಶದ ಪಟ್ಟಿಯಲ್ಲಿ ಜಿಲ್ಲೆಗೆ 12ನೇ ಸ್ಥಾನ ಲಭಿಸಿದೆ.

ಹೊಸ ಪದ್ಧತಿಯಂತೆ ಈ ಬಾರಿ ಶೇಕಡಾವಾರು ಫಲಿತಾಂಶದ ವಿವರಗಳನ್ನು ಪ್ರಕಟಿಸಿಲ್ಲ. ಉತ್ತೀರ್ಣರಾದವರ ಸಂಖ್ಯೆ, ಅತಿಹೆಚ್ಚು ಅಂಕ ಪಡೆದಿರುವುದು ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಶಾಲೆಗಳಿಗೆ ಶ್ರೇಣಿ ನೀಡಲಾಗಿದೆ. ಜಿಲ್ಲೆಯಲ್ಲಿ 510 ಪ್ರೌಢ ಶಾಲೆಗಳಿವೆ. ಅವುಗಳಲ್ಲಿ 213 ಶಾಲೆಗಳು ‘ಎ’ ಶ್ರೇಣಿ, 176 ಶಾಲೆಗಳು ‘ಬಿ’ ಶ್ರೇಣಿ ಮತ್ತು 121 ಶಾಲೆಗಳು ‘ಸಿ’ ಶ್ರೇಣಿ ಪಡೆದಿವೆ.

ಜಿಲ್ಲೆಯಲ್ಲಿ ಈ ಬಾರಿ 30,835 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದರು. ಅವರಲ್ಲಿ ಕೆಲವರು ಪರೀಕ್ಷೆಗೆ ಗೈರಾಗಿದ್ದರು. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಉತ್ತೀರ್ಣರಾಗಿದ್ದಾರೆ ಮತ್ತು ಜಿಲ್ಲೆಗೆ ಶೇಕಡಾವಾರು ಎಷ್ಟು ಫಲಿತಾಂಶ ದೊರಕಿದೆ ಎಂಬುದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿಲ್ಲ.

ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳಿಗೆ ಮಂಗಳವಾರ ಫಲಿತಾಂಶದ ಸಮಗ್ರ ವಿವರ ಲಭಿಸಲಿದೆ. ಆ ಮಾಹಿತಿಯನ್ನು ಕ್ರೋಢೀಕರಿಸಿ, ವಿಶ್ಲೇಷಣೆ ಮಾಡಿದ ಬಳಿಕವೇ ಶೇಕಡಾವಾರು ಫಲಿತಾಂಶ ಲಭಿಸಲಿದೆ. ಎರಡರಿಂದ ಮೂರು ದಿನಗಳಲ್ಲಿ ಈ ವಿವರ ಲಭ್ಯವಾಗಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

2016–17ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ 2ನೇ ಸ್ಥಾನ (ಶೇ 82.39) ಪಡೆದಿತ್ತು. 2017–18ರಲ್ಲಿ ನಾಲ್ಕನೇ ಸ್ಥಾನ (ಶೇ 85.56) ಗಳಿಸಿತ್ತು. 2018–19ನೇ ಶೈಕ್ಷಣಿಕ ವರ್ಷದಲ್ಲಿ ಶೇ 86.73ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಏಳನೇ ಸ್ಥಾನ ಪಡೆದಿತ್ತು.

ಖಾಸಗಿ ಶಾಲೆಗಳ ಪಾರಮ್ಯ: ಜಿಲ್ಲೆಯ ಅನುದಾನರಹಿತ ಪ್ರೌಢ ಶಾಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಪಾರಮ್ಯ ಮೆರೆದಿವೆ. 161 ಅನುದಾನರಹಿತ ಪ್ರೌಢಶಾಲೆಗಳು ‘ಎ’ ಶ್ರೇಣಿ ಫಲಿತಾಂಶ ಪಡೆದಿವೆ. ತಲಾ 26 ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳು ಮಾತ್ರ ‘ಎ’ ಶ್ರೇಣಿ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿವೆ.

73 ಸರ್ಕಾರಿ ಪ್ರೌಢ ಶಾಲೆಗಳು ‘ಬಿ’ ಶ್ರೇಣಿಯ ಫಲಿತಾಂಶ ಪಡೆದಿವೆ. 50 ಅನುದಾನಿತ ಮತ್ತು 53 ಅನುದಾನರಹಿತ ಪ್ರೌಢ ಶಾಲೆಗಳು ‘ಬಿ’ ಶ್ರೇಣಿಯ ಫಲಿತಾಂಶ ಪಡೆದಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಸ್ವಾಮಿ ತಿಳಿಸಿದ್ದಾರೆ.

 ‘ಸಿ’ ಶ್ರೇಣಿ ಪಡೆದಿರುವ ಶಾಲೆಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳ ಸಂಖ್ಯೆಯೇ ಹೆಚ್ಚು. ಜಿಲ್ಲೆಯ 79 ಸರ್ಕಾರಿ ಪ್ರೌಢ ಶಾಲೆಗಳು ‘ಸಿ’ ಶ್ರೇಣಿಯ ಫಲಿತಾಂಶ ಪಡೆದಿವೆ. 32 ಅನುದಾನಿತ ಮತ್ತು 10 ಅನುದಾನರಹಿತ ಪ್ರೌಢ ಶಾಲೆಗಳಿಗೆ ‘ಸಿ’ ಶ್ರೇಣಿಯ ಫಲಿತಾಂಶ ದೊರಕಿದೆ.

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಮಾಧ್ಯಮಗಳಲ್ಲಿ ಅತ್ಯಧಿಕ ಅಂಕ ಗಳಿಸಿರುವವರ ಪಟ್ಟಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.