ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ ಪಾಲಿಕೆ ಅಸ್ತು

ಪೂರಕ ದಾಖಲೆಗಳ ಸಂಗ್ರಹ: ಗುರುತಿನ ಚೀಟಿ, ಪ್ರಮಾಣ ಪತ್ರ ಹಂಚಿಕೆ
Last Updated 26 ಸೆಪ್ಟೆಂಬರ್ 2021, 4:00 IST
ಅಕ್ಷರ ಗಾತ್ರ

ಮಂಗಳೂರು: ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ಮಹಾತ್ವಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಮಹಾನಗರ ಪಾಲಿಕೆ ‘ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ’ ಮುಂದಾಗಿದೆ.

ಮನೆಯಲ್ಲಿ ಒಬ್ಬರಿಗೆ ಮಾತ್ರ ಬೀದಿ ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡುವುದು ಕೂಡ ಸಮೀಕ್ಷೆಯ ಉದ್ದೇಶ. ಜೀವನೋಪಾಯಕ್ಕಾಗಿ ಹಲವು ವರ್ಷಗಳಿಂದ ನಿರ್ದಿಷ್ಟ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವವರ ಬದುಕಿಗೆ ಗಟ್ಟಿ ಅಡಿಪಾಯ ಹಾಕಿಕೊಡಬೇಕೆಂಬ ಗುರಿಯೊಂದಿಗೆ ಪಟ್ಟಿ ಸಿದ್ಧ ಪಡಿಸುವ ಕಾರ್ಯವನ್ನು ಸಮೀಕ್ಷಾ ತಂಡ ಆರಂಭಿಸಿದೆ.

ಪಾಲಿಕೆಯ ಸಮೀಕ್ಷಾ ತಂಡವು ಬೀದಿ ಬದಿಯಲ್ಲಿ ವ್ಯಾಪಾರ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಕಲೆ ಹಾಕಲಿದೆ. ರಸ್ತೆ, ಗಲ್ಲಿ, ಓಣಿ, ಫುಟ್‌ಪಾತ್‌, ಸಾರ್ವಜನಿಕ ಉದ್ಯಾನ ಸೇರಿದಂತೆ ಇನ್ನಿತರ ಕಡೆ ನಿಗದಿತ ಸ್ಥಳಗಳಲ್ಲಿ ವ್ಯಾಪಾರಸ್ಥರ ಪಟ್ಟಿ ಸಿದ್ಧಗೊಂಡ ನಂತರ ಅವರಿಗೆ ಗುರುತಿನ ಚೀಟಿ, ಪ್ರಮಾಣ ನೀಡಲಾಗುತ್ತದೆ.

‘ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಹೊರ ಜಿಲ್ಲೆಗಳಿಂದ ಬಂದು ವ್ಯಾಪಾರ ಮಾಡುವವರನ್ನು ಬೀದಿ ಬದಿ ವ್ಯಾಪಾರಿಗಳ ಪಟ್ಟಿಗೆ ಸೇರಲ್ಲ. ಪಾಲಿಕೆ ವ್ಯಾಪ್ತಿಯ ಸ್ಥಳೀಯರು ಬೀದಿ ಬದಿಯ ವ್ಯಾಪಾರದಲ್ಲಿ ತೊಡಗಿರುವುದು ಕಡಿಮೆ. ಬೇರೆ ಕಡೆಗಳಿಂದ ಬಂದು ಹಲವು ವರ್ಷಗಳಿಂದ ಇಲ್ಲಿಯೇ ಉಳಿದುಕೊಂಡು ಬೀದಿ ಬದಿ ವ್ಯಾಪಾರ ಮಾಡುವವರ ಸಂಖ್ಯೆ ಹೆಚ್ಚಿದೆ. ಅಂತಹ ವ್ಯಾಪಾರಿಗಳ ಮಾಹಿತಿ ಕಲೆ ಹಾಕುವ ಕೆಲಸ ಸಮೀಕ್ಷೆ ರೂಪದಲ್ಲಿ ಆಗುತ್ತಿದೆ. ಅಕ್ಟೋಬರ್‌ ಅಂತ್ಯಕ್ಕೆ ಸಮೀಕ್ಷೆ ಕಾರ್ಯ ಮುಗಿಯಲಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದರು.

‘ಸಮೀಕ್ಷಾ ಸಮಯದಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ತಮ್ಮಲ್ಲಿರುವ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಹನ ಚಾಲನಾ ಪ್ರಮಾಣ ಪತ್ರ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಮತ್ತು ಬೀದಿ ಬದಿ ವ್ಯಾಪಾರಸ್ಥರ ಸಂಘ ಅಥವಾ ಒಕ್ಕೂಟದಲ್ಲಿ ನೋಂದಣಿ ಮಾಡಿಕೊಂಡಿರುವ ದಾಖಲೆ, ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ಅಗತ್ಯ ದಾಖಲೆ (ನಕಲು ಪ್ರತಿ), ಡಿಜಿಟಲ್ ಹಣಕಾಸಿನ ವ್ಯವಹಾರದ ಕ್ಯೂಆರ್ ಕೋಡ್, ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ವ್ಯಾಪಾರ ಚಟುವಟಿಕೆ ಕೈಗೊಳ್ಳುತ್ತಿರುವ ಸ್ಥಳದ ಭಾವಚಿತ್ರ, ಕುಟುಂಬದ ಸದಸ್ಯರ ಜತೆಗೆ ಇರುವ ಭಾವಚಿತ್ರ ಮತ್ತು ಪಾಸ್ ಪೋರ್ಟ್ ಭಾವಚಿತ್ರವನ್ನು ಸಮೀಕ್ಷಾ ತಂಡಕ್ಕೆ ನೀಡಬೇಕು. ಸಮೀಕ್ಷೆಯ ವೇಳೆ ಬೀದಿ ಬದಿ ವ್ಯಾಪಾರಸ್ಥರು ನೋಂದಣಿ ಶುಲ್ಕ ₹ 50 ನೀಡಿ, ಸಮೀಕ್ಷೆಯ ತಂಡದಿಂದ ಸೂಕ್ತ ರಶೀದಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

‘ಮಹಾನಗರ ಪಾಲಿಕೆ ಸಮೀಕ್ಷೆಗೆ ಮುಂದಾಗಿರುವುದು ಒಳ್ಳೆಯ ನಿರ್ಧಾರ. ಎಂಟು ವರ್ಷಗಳಿಂದ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇನೆ. ಸಮೀಕ್ಷೆ ಮಾಡಿ ಗುರುತಿನ ಚೀಟಿ ಪ್ರಮಾಣ ಪತ್ರ ನೀಡುವುದರಿಂದ ಭದ್ರತೆ ಸಿಕ್ಕಂತೆ ಆಗುತ್ತದೆ. ಒಬ್ಬರ ಹೆಸರಿನಲ್ಲಿ ಇನ್ನೊಬ್ಬರು ವ್ಯಾಪಾರ ಮಾಡುವುದನ್ನು ತಡೆದಂತಾಗುತ್ತದೆ. ಕಷ್ಟ ಪಟ್ಟು ವ್ಯಾಪಾರ ಮಾಡುವವರಿಗೆ ಸಹಾಯವಾಗುತ್ತದೆ’ ಎಂದು ಬೀದಿ ಬದಿ ತರಕಾರಿ ವ್ಯಾಪಾರಿ ಶಿವ ನಾಯಕ್‌ ಹೇಳಿದರು.

‘ಮಂಗಳೂರು ಮಹಾನಗರ ಪಾಲಿಕೆ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ ಮುಂದಾಗಿರುವುದು ಒಳ್ಳೆಯ ನಿರ್ಧಾರ. ಸಮೀಕ್ಷೆ ಈ ಹಿಂದೆಯೇ ಆಗಬೇಕಿತ್ತು. ಗುರುತಿನ ಚೀಟಿ, ಪ್ರಮಾಣ ಪತ್ರ ನೀಡುವುದರಿಂದ ವ್ಯಾಪಾರಿಗಳಿಗೆ ಭದ್ರತೆ ಸಿಕ್ಕಂತಾಗುತ್ತದೆ. ಪಾಲಿಕೆ ವ್ಯಾಪ್ತಿಯಿಂದ ಬೀದಿ ಬದಿ ವ್ಯಾಪಾರಿಗಳ ಕೈಪಿಡಿಗೆ ಅನುಕೂಲ’ ಎಂದು ವಾರದ ಸಂತೆ ವ್ಯಾಪಾರಿ ರಾಜೇಶ್‌ ಹೇಳಿದರು.

‘ಸಮೀಕ್ಷೆ ನಂತರ ನಿಖರ ಸಂಖ್ಯೆ’

ಮೂರು ಹಂತದಲ್ಲಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಯಲಿದೆ. ತರಕಾರಿ, ಗೃಹ ಬಳಕೆ ವಸ್ತು, ಚಾಟ್ಸ್‌ ವ್ಯಾಪಾರಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗುತ್ತದೆ. ಈ ವ್ಯಾಪಾರಿಗಳು ಸಿಮೀತ ಸಮಯದಲ್ಲಿ ವ್ಯಾಪಾರ ಮಾಡುತ್ತಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 400ರಿಂದ 500 ಮಂದಿ ಬೀದಿ ಬದಿ ವ್ಯಾಪಾರಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಸಮೀಕ್ಷೆ ನಂತರ ನಿಖರ
ಸಂಖ್ಯೆ ಗೊತ್ತಾಗಲಿದ್ದು, ಅನಂತರ ವಲಯಗಳನ್ನು ಗುರುತಿಸುವ ಕಾರ್ಯಕ್ಕೆ ನೀಲನಕ್ಷೆ ಸಿದ್ಧ ಪಡಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT