ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಕಾರ್ಯಕ್ರಮ 2 ತಿಂಗಳು ಮುಂದೂಡಿ

ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜೊತೆಗೆ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಸಭೆ
Last Updated 30 ನವೆಂಬರ್ 2021, 16:56 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್– 19ನ 3ನೇ ಅಲೆ ಭೀತಿಯನ್ನು ಸಮರ್ಪಕವಾಗಿ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಪಾಲಿಕೆಯ ವ್ಯಾಪ್ತಿಯ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರೊಂದಿಗೆ ನಗರದ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮಂಗಳವಾರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್‌ ಸಭೆ ನಡೆಸಿದರು.

ಶಾಲಾ– ಕಾಲೇಜುಗಳಲ್ಲಿ ಪ್ರಸ್ತುತ ನಡೆಯುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು 2 ತಿಂಗಳವರೆಗೆ ಮುಂದೂಡಲು ಕ್ರಮ ಕೈಗೊಳ್ಳಬೇಕು. ವಿವಿಧ ಕಾರ್ಯಾಗಾರ, ಸಮ್ಮೇಳನ ಹಾಗೂ ವಿಚಾರ ಗೋಷ್ಠಿಯನ್ನು ವರ್ಚುವಲ್ ವೇದಿಕೆಯ ಮೂಲಕ ನಡೆಸಲು ಕ್ರಮ ಕೈಗೊಳ್ಳಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಒಂದನೇ ಮತ್ತು ಎರಡನೇ ಡೋಸ್ ಲಸಿಕೆಯನ್ನು ಪಡೆದಿರುವ ಕುರಿತು ಖಚಿತ ಪಡಿಸಿಕೊಳ್ಳಬೇಕು ಎಂದು ಅಕ್ಷಯ್‌ ಶ್ರೀಧರ್ ಸೂಚನೆ ನೀಡಿದರು.

ಒಂದು ವೇಳೆ ಯಾವುದೇ ಕಾಲೇಜುಗಳಲ್ಲಿ ಹಲವಾರು ಮಂದಿಗೆ ಕೋವಿಡ್–19 ಪಾಸಿಟಿವ್ ಬಂದಲ್ಲಿ ಆ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಂತೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಅವರೊಂದಿಗೆ ಸಂಪರ್ಕವಿದ್ದ, ನೆಗೆಟಿವ್ ವರದಿ ಬಂದ ವಿದ್ಯಾರ್ಥಿಗಳನ್ನು 7 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಇರಿಸಬೇಕು. ನಂತರ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿ ನೆಗೆಟಿವ್ ವರದಿ ಪಡೆಯಬೇಕು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಪಿಜಿಗಳಲ್ಲಿ ವಾಸ್ತವ್ಯವಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾ ಕಾಲೇಜಿನ ಮುಖ್ಯಸ್ಥರು ಪಾಲಿಕೆಗೆ ಕಡ್ಡಾಯವಾಗಿ ನೀಡಬೇಕು. ಪ್ರತಿ ಕಾಲೇಜಿನಲ್ಲಿ ಕಡ್ಡಾಯವಾಗಿ ಮಾಸ್ಟರ್ ನೋಡಲ್ ಅಧಿಕಾರಿ ಮತ್ತು ನೋಡಲ್ ಅಧಿಕಾರಿಯನ್ನು ನೇಮಿಸಿ, ಕೋವಿಡ್‌–19ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ತಮ್ಮ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಬೇಕು ಎಂದು ತಿಳಿಸಿದರು.

ಪಾಲಿಕೆಯ ವ್ಯಾಪ್ತಿಯ ಒಂದು ಪ್ರದೇಶದಲ್ಲಿ 10 ಕ್ಕಿಂತ ಅಧಿಕ ಮಂದಿ ಲಸಿಕೆ ಪಡೆಯಲು ಬಾಕಿ ಇದ್ದಲ್ಲಿ, ಈ ಕುರಿತು ಪಾಲಿಕೆಗೆ ಮಾಹಿತಿ ನೀಡಬಹುದು. ಪಾಲಿಕೆ ವತಿಯಿಂದಲೇ ಆಂಬುಲೆನ್ಸ್ ಮೂಲಕ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕೋವಿಡ್–19 ಸಂಬಂಧಿಸಿದಂತೆ ಸಹಾಯ ಬೇಕಿದ್ದಲ್ಲಿ ಪಾಲಿಕೆ ಕೈಜೋಡಿಸಲಿದೆ ಎಂದು ತಿಳಿಸಿದರು.

ಪಾಲಿಕೆ ಉಪ ಆಯುಕ್ತ ಅಜಿತ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್‌ಕುಮಾರ್‌, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಅಶೋಕ್, ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಹಾಗೂ ಪಾಲಿಕೆಯ ಕೋವಿಡ್ ಮತ್ತು ಮಲೇರಿಯಾ ನೋಡಲ್ ಅಧಿಕಾರಿ ಡಾ. ಅಣ್ಣಯ್ಯ ಕುಲಾಲ್, ಡಿಎಸ್ಒ ಡಾ.ಕೆ.ಜಗದೀಶ್ ಮತ್ತು ವಿವಿಧ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಮತ್ತು ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

‘ಆರ್‌ಟಿಪಿಸಿಆರ್‌ ವರದಿ ಕಡ್ಡಾಯ’

ಮಹಾರಾಷ್ಟ್ರ ಹಾಗೂ ಕೇರಳದಿಂದ ನಗರಕ್ಕೆ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಬೇಕು. ಇಲ್ಲಿಗೆ ಬಂದು ಏಳು ದಿನ ಕಳೆದ ನಂತರ ಮತ್ತೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಅಕ್ಷಯ್‌ ಶ್ರೀಧರ್‌ ಹೇಳಿದರು.

ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳು ಕಡ್ಡಾಯವಾಗಿ 72 ಗಂಟೆ ಮೀರದ ಆರ್‌ಟಿಪಿಸಿಆರ್‌ ವರದಿಯನ್ನು ಹಾಜರುಪಡಿಸಬೇಕು. ಈ ರಾಜ್ಯಗಳಿಂದ ಬರುವ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳು ಡಿಸೆಂಬರ್ 12 ರಿಂದ 27ರೊಳಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT