ಸುಳ್ಯ: ದ್ವೀಪವಾದ ನಾಲ್ಕು ಗ್ರಾಮ

7
ಸುತಾಲ್ಲೂಕು ಕೇಂದ್ರವೇ ದೂರ ದೂರ..

ಸುಳ್ಯ: ದ್ವೀಪವಾದ ನಾಲ್ಕು ಗ್ರಾಮ

Published:
Updated:
Deccan Herald

ಸುಳ್ಯ: ಇಲ್ಲಿನ ಜನರು ನಿರಾಶ್ರಿತರು ಅಲ್ಲ. ಆದರೆ ಅಕ್ಷರಶಃ ಇದ್ದರೂ ಇಲ್ಲದಂತಾಗಿದ್ದಾರೆ. ಸಾಮಾನ್ಯ ಕೆಲಸಕ್ಕೂ ಕೂಡಾ ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾದವರೂ ಅದರಿಂದ ದೂರವಾಗಿದ್ದಾರೆ.

ಹೌದು, ಜೋಡುಪಾಲ ಭೂಕುಸಿತದಿಂದ ಈ ಭಾಗದಲ್ಲಿ ಹಾದು ಹೋಗುವ ಮಾಣಿ-ಮೈಸೂರು ಹೆದ್ದಾರಿ ಬಂದ್ ಆಗಿರುವುದರಿಂದ ಜೋಡುಪಾಲದಿಂದ ಕೆಳ ಭಾಗದ ಕಡೆಗೆ ಸಂಪರ್ಕ ಸೇತು ಇಲ್ಲ. ಆಗ ಸಹಜವಾಗಿಯೇ ಜೋಡುಪಾಲದಿಂದ ಈಚೆಗೆ ಇರುವ 4 ಗ್ರಾಮಗಳು ಅ ಗ್ರಾಮಗಳ ಜನರ ತಾಲ್ಲೂಕು, ಜಿಲ್ಲಾ ಕೇಂದ್ರ ಮಡಿಕೇರಿ ಆಗಿರುವುದರಿಂದ ಅವರು ದ್ವೀಪದಲ್ಲಿದ್ದಾರೆ.

ಸರ್ಕಾರಿ ಕೆಲಸ, ಕೋರ್ಟ್, ಇತರ ಉದ್ಯೋಗ, ಸರ್ಕಾರದ ಸವಲತ್ತು ಪಡೆಯಲು, ಮಕ್ಕಳ ವಿದ್ಯಾಭ್ಯಾಸ, ಇತರ ಏನೇ ಕೆಲಸ ಇದ್ದರೂ ಮೊದಲಿನ ಹಾಗೇ ಹೋಗುವಾಗಿಲ್ಲ. ಅತ್ತ ನಡೆದು ಹೋಗಬೇಕಾದರೆ 40 ಕಿ.ಮೀ ನಡೆದು ಹೋಗಬೇಕು. ಅನಿವಾರ್ಯವಾದರೆ ಸುತ್ತುಬಳಸಿ ಹೋಗುವ ಎಂದಾದರೆ ಅಷ್ಟು ದೂರು ಸುಲಭದ ಮಾತಲ್ಲ. ಒಂದು ವೇಳೆ ನಡೆದೇ ಹೋದರೂ ರಸ್ತೆ ಮಧ್ಯೆ ಬಿದ್ದ ಮಣ್ಣು ರಾಶಿಯಲ್ಲಿ ಸಾಗಲು ಸಾಧ್ಯ ಇಲ್ಲ.

ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿಗೆ ಸೇರಿರುವ ಜೋಡುಪಾಲ, ಕೊಡಗು ಸಂಪಾಜೆ, ಚೆಂಬು ಮತ್ತು ಸುಳ್ಯ ಸಮೀಪದ ಪೆರಾಜೆ ಗ್ರಾಮಗಳು ದ್ವೀಪವಾಗಿದೆ. ಎಲ್ಲಾ ದಾಖಲೆ ಪತ್ರ, ಸರ್ಕಾರಿ ಕೆಲಸಕ್ಕಾಗಿ ಮಡಿಕೇರಿಗೆ ಹೋಗುವರು ಇವರು. ಈ ನಾಲ್ಕು ಗ್ರಾಮಗಳಲ್ಲಿ ಸುಮಾರು 6 ಸಾವಿರ ಮಂದಿ ಇದ್ದಾರೆ.

ತಾತ್ಕಾಲಿಕ ವಾಸ್ತವ್ಯ:  ಪ್ರಕೃತಿ ವಿಕೋಪ ಕೇವಲ ಸಾವಿರಾರು ಮಂದಿಯನ್ನು ನಿರಾಶ್ರಿತರನ್ನಾಗಿ ಮಾಡಿದ್ದರೆ, ಅಷ್ಟೇ ಮಂದಿಗೆ ಬೇರೆ ಬೇರೆ ತೊಂದರೆ ಆಗಿದೆ. ವಿದ್ಯಾರ್ಥಿಗಳನ್ನು ಈ ಗ್ರಾಮದವರು ವಸತಿ ನಿಲಯಕ್ಕೆ ಸೇರಿಸಿದ್ದಾರೆ. ಖಾಸಗಿ ಉದ್ಯೋಗದವರು ಅನೇಕ ಮಂದಿ ಇನ್ನೂ ರಜೆ ಮೇಲಿದ್ದಾರೆ. ಸರ್ಕಾರಿ ಉದ್ಯೋಗದವರಿಗೆ ಅಷ್ಟೊಂದು ರಜೆಯನ್ನು ಈ ತುರ್ತು ಸಂದರ್ಭದಲ್ಲಿ ಮಾಡಲು ಸಾಧ್ಯ ಆಗದೇ ಇರುವುದರಿಂದ ಅವರು ಸರ್ಕಾರಿ ಕಚೇರಿಯ ಕೊಠಡಿಗಳಲ್ಲಿಯೇ ತಾತ್ಕಾಲಿಕ ವಾಸ್ತವ್ಯ ಹೂಡಿದ್ದಾರೆ.

‘ನನ್ನ ಮಗಳು ಮಡಿಕೇರಿ ಕಾಲೇಜಿನಲ್ಲಿ ಓದುತ್ತಿದ್ದಾಳೆ. ಈಗ ಫುಲ್ ರಜೆ ಆಗಿದೆ. ಇನ್ನು ಈ ರಸ್ತೆ ಆಗುವುದಕ್ಕೆ ಕೆಲವು ತಿಂಗಳೇ ಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಆದುದ್ದರಿಂದ ನನ್ನ ಮಗಳು ದೂರದ ಸಂಬಂಧಿಕರ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದೇನೆ. ಅಲ್ಲಿಯೂ ಅವಳಿಗೆ ಸುಮಾರು 30 ಕಿ.ಮೀ. ಕ್ರಮಿಸಿ ಕಾಲೇಜು ಸೇರಬೇಕಾಗಿದೆ’ ಎಂದು ಚೆಂಬು ಗ್ರಾಮದ ನಂಜಪ್ಪ ಹೇಳುತ್ತಾರೆ.

‘ನಾನು ಮಡಿಕೇರಿಯಲ್ಲಿ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದೇನೆ. ಆದರೆ ಊರಿಗೆ ಬಂದ ತೊಂದರೆ. ಕೆಲಸಕ್ಕೆ ಹೋಗಲು ಆಗುತ್ತಿಲ್ಲ.  ಮನೆಯಲ್ಲಿಯೇ ಇದ್ದು, ನಿರಾಶ್ರಿತ ಕೇಂದ್ರದಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಕೊಡಗು ಸಂಪಾಜೆಯ ಗುರುಪ್ರಸಾದ್ ಹೇಳುತ್ತಾರೆ.

 ಜನರ ವ್ಯವಹಾರ ಸರಿ ಆಗಬೇಕಾದರೆ ರಾಜ್ಯ ಹೆದ್ದಾರಿ ಸಂಚಾರಕ್ಕೆ ತೆರೆದುಕೊಳ್ಳಬೇಕು. ಅದಕ್ಕೆ ಸಮೀಕ್ಷೆ ಕಾರ್ಯ ಪೂರ್ಣಗೊಂಡು ಸರ್ಕಾರ ಹಂತದಲ್ಲಿ ಕೆಲಸ ಆಗಬೇಕು. ಅಲ್ಲಿಯವರೆಗೆ ಇಲ್ಲಿನ ಜನರ ಬವಣೆ ತಪ್ಪಿದ್ದಲ್ಲ.

ಸುತ್ತು ಬಳಸಿ  ಸಂಚಾರ

ಅನಿವಾರ್ಯವಾಗಿ ಹೋಗಬೇಕಾದರೆ ಅವರು ಜೋಡುಪಾಲ, ಕೊಡಗು ಸಂಪಾಜೆ, ಚೆಂಬು ಗ್ರಾಮದವರು ಸುಮಾರು 30 ಕಿ.ಮೀ. ದೂರದಿಂದ ಮತ್ತು ಪೆರಾಜೆಯವರು 10 ಕಿ.ಮೀ. ದೂರದಿಂದ ಸುಳ್ಯಕ್ಕೆ ಬಂದು ಅಲ್ಲಿದಂದ ಸುಮಾರು 110 ಕಿ.ಮೀ ಕ್ರಮಿಸಿ ತಾಲ್ಲೂಕು, ಜಿಲ್ಲಾ ಕೇಂದ್ರಕ್ಕೆ ಸೇರಬೇಕಾಗಿದೆ. ಇಲ್ಲಿಯೂ ನೇರ ಬಸ್ ಸಂಚಾರ ಇಲ್ಲ. ಖಾಸಗಿ ವಾಹನ ಬಳಸಿಯೇ ಹೋಗಬೇಕು.

ಮಡಿಕೇರಿಯಲ್ಲೇ ವಾಸ್ತವ್ಯ!

ನೂರಾರು ಮಂದಿ ತಾಲ್ಲೂಕು ಕೇಂದ್ರ, ಜಿಲ್ಲಾ ಕೇಂದ್ರಕ್ಕೆ ಹೋಗಿ ಬರುವ ವಿದ್ಯಾರ್ಥಿಗಳು, ಖಾಸಗಿ ಸರ್ಕಾರಿ ಉದ್ಯೋಗಿಗಳು ಇನ್ನಿತರ ವ್ಯವಹಾರಕ್ಕಾಗಿ ದಿನನಿತ್ಯ ಹೋಗುವ ಬಹುತೇಕ ಮಂದಿ ಮಡಿಕೇರಿ ಮತ್ತು ಅದರ ಸುತ್ತ ಮುತ್ತ ಪ್ರದೇಶದಲ್ಲಿ ಸಂಬಂಧಿಕರ ಮನೆಗಳಲ್ಲಿ, ಖಾಸಗಿ ಮನೆ ಮಾಡಿಕೊಂಡು ಅಲ್ಲೇ ಮೊಕ್ಕಾಂ ಹೂಡಿದ್ದಾರೆ.

ಮಳೆ ಕಡಿಮೆ ಆಗುತ್ತಾ ಇದೆ. ಇನ್ನೂ ಎಲ್ಲಾ ರೀತಿಯ ಮೂಲ ಸೌಲಭ್ಯಗಳೊಂದಿಗೆ ಪರಿಹಾರ ಕ್ರಮ ಆಗಬೇಕಾಗಿದೆ. ಹಿಂದಿನ ಸ್ಥಿತಿಗೆ ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತೇನೆ
-ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !