ಬುಧವಾರ, ಆಗಸ್ಟ್ 10, 2022
23 °C

ಕಸ ಸಂಗ್ರಹ ವಾಹನಕ್ಕೆ ಅಧ್ಯಕ್ಷರೇ ಚಾಲಕ

ಲೋಕೇಶ್ ಪೆರ್ಲಂಪಾಡಿ Updated:

ಅಕ್ಷರ ಗಾತ್ರ : | |

Prajavani

ಸುಳ್ಯ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರು ಕಸ ವಿಲೇವಾರಿ ವಾಹನವನ್ನು ಸ್ವತಃ ಚಲಾಯಿಸಿಕೊಂಡು, ಮನೆ–ಮನೆ ಕಸ ಸಂಗ್ರಹ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕೋವಿಡ್ ಕಾರಣಕ್ಕೆ ಪಟ್ಟಣ ಪಂಚಾಯಿತಿಯ ಮೂವರು ಕಾರ್ಮಿಕರು ಕ್ವಾರಂಟೈನ್‌ನಲ್ಲಿ ಇದ್ದಾರೆ. ಹೀಗಾಗಿ ತ್ಯಾಜ್ಯ ಸಂಗ್ರಹಕ್ಕೆ ಸಿಬ್ಬಂದಿ ಕೊರತೆ ಎದುರಾಗಿತ್ತು. ಪಟ್ಟಣದ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಅಧ್ಯಕ್ಷರು ತಾವೇ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಅವರಿಗೆ ಆರೋಗ್ಯ ನಿರೀಕ್ಷಕ ಲಿಂಗರಾಜು ಸಾಥ್ ನೀಡುತ್ತಿದ್ದಾರೆ.

ಒಬ್ಬ ಪೌರಕಾರ್ಮಿಕರ ಜೊತೆ ಶುಕ್ರವಾರ ಕಸ ಸಂಗ್ರಹ ವಾಹನ ಚಲಾಯಿಸಿಕೊಂಡು ಬಂದ ವಿನಯಕುಮಾರ್ ಅವರು, ಸುಳ್ಯ ಪಟ್ಟಣ, ಎ.ಪಿ.ಎಂ.ಸಿ ರಸ್ತೆ, ಪದವಿಪೂರ್ವ ಕಾಲೇಜು ರಸ್ತೆ ಮೊದಲಾದ ಕಡೆಗಳ ಕಸ ಸಂಗ್ರಹ ಮಾಡಿದರು. ತ್ಯಾಜ್ಯವನ್ನು ತಂದು ವಾಹನಕ್ಕೆ ಕೊಡುವವರಿಗೆ ಹಸಿ ಕಸ– ಒಣ ಕಸ ಪ್ರತ್ಯೇಕಿಸುವ ಕುರಿತು ಮಾಹಿತಿ ನೀಡಿದರು.

‘ನಮ್ಮ ಮೂವರು ಪೌರ ಕಾರ್ಮಿಕರು ಕ್ವಾರಂಟೈನ್‌ನಲ್ಲಿದ್ದಾರೆ. ಸಿಬ್ಬಂದಿ ಕೊರತೆ ಇದೆ. ಈ ಕೊರತೆ ನೀಗಿಸಲು ನಾನೇ ವಾಹನ ಚಲಾಯಿಸಲು ಮುಂದಾಗಿದ್ದೇನೆ. ಕಸವನ್ನು ಮೂಲದಿಂದಲೇ ಬೇರ್ಪಡಿಸುವ ಕುರಿತು ಜನರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನೂ ಮಾಡುತ್ತಿದ್ದೇನೆ’ ಎಂದು ವಿನಯಕುಮಾರ್ ಹೇಳಿದರು. 

‘ಕಸ ಸಂಗ್ರಹ ಕಾರ್ಯಕ್ಕೆ ಒಟ್ಟು ನಾಲ್ಕು ಜನರು ಇದ್ದರು. ತಲಾ ಇಬ್ಬರು ಒಂದೊಂದು ಮಾರ್ಗದಲ್ಲಿ ಸಂಚರಿಸಿ, ಕಸ ಸಂಗ್ರಹಿಸುತ್ತಿದ್ದರು. ಸದ್ಯಕ್ಕೆ ಒಬ್ಬರು ಮಾತ್ರ ಕೆಲಸಕ್ಕೆ ಲಭ್ಯರಿದ್ದಾರೆ’ ಎಂದು ತಿಳಿಸಿದರು.

‘ಪ್ರತಿ ದಿನ ಎಲ್ಲ ಭಾಗಗಳಲ್ಲಿ ಸಂಚರಿಸಿ, ತ್ಯಾಜ್ಯ ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ. ಎರಡು ದಿನಕ್ಕೊಮ್ಮೆ ಒಂದೊಂದು ಭಾಗಕ್ಕೆ ಹೋಗಲು ಯೋಚಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು