3
ಸತತ ಎರಡನೇ ದಿನವೂ ಸಂಚಾರ ದಟ್ಟಣೆ

ಇರುವೆ ಗತಿಯಲ್ಲಿ ಸಾಗುವ ವಾಹನ, ಪ್ರಯಾಣಿಕರ ಪರದಾಟ

Published:
Updated:
ನಗರದ ಬಲ್ಮಠ ರಸ್ತೆಯಲ್ಲಿ  ಸತತ ಎರಡನೇ ದಿನವಾದ ಮಂಗಳವಾರವೂ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಪರದಾಡುವಂತಾಯಿತು. ಪ್ರಜಾವಾಣಿ ಚಿತ್ರ

ಮಂಗಳೂರು: ನಗರದಲ್ಲಿ ಸಂಚಾರ ಮತ್ತೆ ದುಸ್ತರವೆನಿಸಿದೆ. ಸೋಮವಾರ ಮತ್ತು ಮಂಗಳವಾರ ನಗರದ ಪ್ರಮುಖ ರಸ್ತೆಗಳಲ್ಲಿ ಇರುವೆಗತಿಯಲ್ಲಿ ಸಂಚರಿಸುತ್ತಿದ್ದ ವಾಹನಗಳು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದವು. ಎರಡು ದಿನಗಳಲ್ಲಿ ನಿರಂತರ ಸಂಚಾರ ದಟ್ಟಣೆಯಿಂದ ರೋಸಿ ಹೋದ ನಾಗರಿಕರು ಸಂಚಾರ ವ್ಯವಸ್ಥೆಗೆ ಹಿಡಿಶಾಪ ಹಾಕಿದರು. 

ಮಂಗಳವಾರ ಬೆಳಿಗ್ಗೆಯಿಂದಲೇ ನಿರಂತರ ಹದವಾಗಿ ಮಳೆ ಸುರಿಯುತ್ತಿದ್ದುದರಿಂದ ಮಧ್ಯಾಹ್ನದ ವೇಳೆಗೆ ತಗ್ಗು ಪ್ರದೇಶಗಳು ಜಲಾವೃತವಾದವು. ರಸ್ತೆಯಲ್ಲಿ ವಾಹನಗಳು ಗಿಜಿಗುಡ್ಡ ಸಂಚರಿಸುತ್ತಿದ್ದು ಅಲ್ಲಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಕಂಕನಾಡಿ – ಜ್ಯೋತಿ ರಸ್ತೆ, ಬಂಟ್ಸ್‌ ಹಾಸ್ಟೆಲ್‌ – ಪಿವಿಎಸ್‌ ರಸ್ತೆ, ಸ್ಟೇಟ್‌ಬ್ಯಾಂಕ್‌ನಿಂದ ಹಂಪನ್‌ಕಟ್ಟೆವರೆಗಿನ ರಸ್ತೆಯಲ್ಲಿ ವಾಹನಗಳು ಬಿಡುವಿಲ್ಲದೇ ನಿರಂತರ ಸಾಗಿದವು.  ತೊಕ್ಕೊಟ್ಟು ಪಂಪ್‌ವೆಲ್‌ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದರು. 

ಸದಾ ಧಾವಂತದಲ್ಲಿಯೇ ಚಲಿಸುತ್ತಿದ್ದ ಬಸ್‌ಗಳು ಬದಲಿ ಮಾರ್ಗಗಳಲ್ಲಿ ಚಲಿಸಲಾರಂಭಿಸಿದವು. ನಿರ್ದಿಷ್ಟ ನಿಲ್ದಾಣಕ್ಕೆ ಟಿಕೆಟ್‌ಪಡೆದ ಪ್ರಯಾಣಿಕರು ಬಸ್‌ಗಳು ದಿಕ್ಕುತಪ್ಪಿ ಚಲಿಸುತ್ತಿರುವುದನ್ನು ಗಮನಿಸಿ ಆತಂಕಗೊಂಡರು. ತೊಕ್ಕೊಟ್ಟಿನ ಮಾರ್ಗದಲ್ಲಿ ಚಲಿಸುವ ಹಲವು ಬಸ್‌ಗಳು ಪಂಪ್‌ವೆಲ್‌ನಲ್ಲಿಯೇ ಪ್ರಯಾಣಿಕರನ್ನು ಇಳಿಸಿ ಅಲ್ಲಿಂದಲೇ ವಾಪಸ್‌ ತೆರೆಳಿದವು. ಆ ಮೂಲಕ ತಮ್ಮ ಸಮಯ ಪಾಲನೆಯನ್ನು ಕಾಯ್ದುಕೊಳ್ಳಲು ಯತ್ನಿಸಿದವು. 

ಮಳೆ ಬರುತ್ತಿದ್ದಂತೆಯೇ ನಾಗರಿಕರು ಕಾರುಗಳಲ್ಲೇ ಪ್ರಯಾಣಿಸುವುದರಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಸಂಜೆ ಮಳೆ ಶಾಲೆಯಿಂದ ಹೊರಡುವ ಮಕ್ಕಳನ್ನು ಕರೆದೊಯ್ಯಲು ಪಾಲಕರು ಸ್ವತಃ ಬರುವುದರಿಂದ ವಾಹನಗಳ ಸಂಖ್ಯೆ ಹೆಚ್ಚುತ್ತದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳುತ್ತಾರೆ. 

ಆದರೆ ರಸ್ತೆಯ ಇಕ್ಕೆಲದಲ್ಲಿ ಗುಂಡಿಗಳು, ರಸ್ತೆಯನ್ನು ವಿಭಜಿಸಲು ಸಾಲಾಗಿ ಹಾಕಿರುವ ಕೋನ್‌ಗಳು, ದೀರ್ಘ ವಾದ ಒನ್‌ವೇ ಸಂಚಾರದಿಂದಾಗಿ ದಟ್ಟಣೆ ಹೆಚ್ಚುತ್ತಿದೆ. ಫುಟ್‌ಪಾತ್‌ ನಿರ್ಮಾಣಕ್ಕೆಂದು ಬಿಟ್ಟ ಜಾಗದಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳು ರಸ್ತೆಯ ಬದಿಗೆ ಸರಿಯುವುದು ಸಾಧ್ಯವೇ ಇಲ್ಲ ಎಂಬಂತಾಗಿದೆ. ಆದ್ದರಿಂದ ವಾಹನಗಳು ಒಂದರ ಹಿಂದೆ ಒಂದು ನಿಧಾನವಾಗಿ ಚಲಿಸುವುದು ಅನಿವಾರ್ಯವಾಗಿದೆ ಎಂದು ಕಾರುಚಾಲಕ ಸುಧೀರ್‌ ಹೇಳುತ್ತಾರೆ. ‌ ಅಲ್ಲಲ್ಲಿ ವಿದ್ಯುತ್‌ ಕಂಬಗಳಲ್ಲಿ ತಂತಿ ರಿಪೇರಿ, ಮರಗಳ ವಿಲೇವಾರಿ, ರಸ್ತೆಗಳಲ್ಲಿ ಗುಂಡಿಯಿಂದಾಗಿ ಸಂಚಾರ ದುಸ್ತರವೆನಿಸಿದೆ. 

ಸೋಮವಾರ ಬಂಟ್ಸ್‌ ಹಾಸ್ಟೆಲ್‌ ವೃತ್ತದಲ್ಲಿ ಶಾಲಾವಾಹನವೊಂದು ಕೆಟ್ಟು ನಿಂತದ್ದರಿಂದ ದೀರ್ಘಹೊತ್ತು ಸಂಚಾರ ಅಸ್ತವ್ಯವಸ್ತವಾಗಿತ್ತು. ಅದರ ಪರಿಣಾಮ ಇಡೀ ನಗರಕ್ಕೆ ತಟ್ಟಿತ್ತು. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !