ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 2.98 ಕೋಟಿ ವಶ

ಬೆಂಗಳೂರಿನಿಂದ ಸೊರಬದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಪತ್ತೆ
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ತುಮಕೂರು: ಬೆಂಗಳೂರಿನಿಂದ ಸೊರಬದ ಕಡೆಗೆ ತೆರಳುತ್ತಿದ್ದ ಗಜಾನನ ಮೋಟಾರ್ ಟ್ರಾನ್ಸ್‌ಪೋರ್ಟ್‌ಗೆ (ಎಸ್‌ಜಿಎಂಟಿ) ಸೇರಿದ ಸ್ಲೀಪರ್ ಕೋಚ್ ಬಸ್ಸಿನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹ 2.98 ಕೋಟಿ ಹಣವನ್ನು ನಗರದ ಹೊರ ವಲಯದ ಜಾಸ್ ಟೋಲ್ ಗೇಟ್ ಹತ್ತಿರ ಪೊಲೀಸರು ಸೋಮವಾರ ಬೆಳಗಿನ ಜಾವ ವಶಪಡಿಸಿಕೊಂಡಿದ್ದಾರೆ.

'ಬಸ್ಸಿನಲ್ಲಿ ಹಣ ಸಾಗಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಕಂಟ್ರೊಲ್ ರೂಂಗೆ ಕರೆ ಬಂದಿತ್ತು. ಕರೆ ಮೇರೆಗೆ ಜಾಸ್ ಟೋಲ್ ಬಳಿ ಗಜಾನನ ಮೋಟಾರ್ ಟ್ರಾನ್ಸ್‌ಪೋರ್ಟ್‌ಗೆ ಸೇರಿದ ಗಜಾನನ ಬಸ್ ಬಂದಾಗ ಪರಿಶೀಲನೆ ನಡೆಸಲಾಯಿತು. ಆಸನಗಳ ಕೆಳಗಡೆ ರೆಕ್ಸಿನ್ ಬ್ಯಾಗಿನಲ್ಲಿ ₹2000 ಮತ್ತು ₹ 500 ಮುಖ ಬೆಲೆಯ ಹಣದ ಬಂಡಲ್‌ ಇದ್ದವು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ತಿಳಿಸಿದ್ದಾರೆ.

'ಈ ಹಣ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು, ಕ್ಲೀನರ್ ಮತ್ತು ಚಾಲಕರನ್ನು ವಿಚಾರಣೆ ಮಾಡಲಾಯಿತು. ಯಾರೊಬ್ಬರು ಹಣ ತಮ್ಮದು ಎಂದು ಹೇಳಲಿಲ್ಲ’ ಎಂದು ತಿಳಿಸಿದ್ದಾರೆ.

‘ಚುನಾವಣಾ ನೀತಿ ಸಂಹಿತೆ ಪ್ರಯುಕ್ತ ವಾಹನ ತಪಾಸಣೆ, ಪರಿಶೀಲನೆಗೆ ಜಾಸ್ ಟೋಲ್‌ನಲ್ಲಿ ನಿಯೋಜನೆಗೊಂಡ ಸ್ಥಿರ ತಪಾಸಣಾ ತಂಡ (ಎಸ್‌ಎಸ್‌ಟಿ) ಅಧಿಕಾರಿಗಳಿಂದ ಹಣ ಎಣಿಕೆ ಮಾಡಿಸಲಾಯಿತು. ಬ್ಯಾಗಿನಲ್ಲಿ ಒಟ್ಟು ₹ 2.98 ಕೋಟಿ ಇತ್ತು. ಈ ಹಣ ಮತ್ತು ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.

ಈಶ್ವರಪ್ಪ ಮನೆ ಬಳಿ ₹ 1.80 ಹಣ ವಶಕ್ಕೆ
ಶಿವಮೊಗ್ಗ:
ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರ ಮನೆ ಬಳಿ ಹಣ ಸಾಗಿಸುತ್ತಿದ್ದ ದ್ವಿಚಕ್ರ ವಾಹನವನ್ನು ಚುನಾವಣಾ ಸಿಬ್ಬಂದಿ ಸೋಮವಾರ ವಶಕ್ಕೆ ಪಡೆದಿದ್ದಾರೆ.

₹ 1.80 ಲಕ್ಷ ನಗದು ದೊರಕಿದೆ. ಗಸ್ತಿನಲ್ಲಿದ್ದ ಚುನಾವಣಾ ಸಿಬ್ಬಂದಿ ಮಲ್ಲೇಶ್ವರ ನಗರದ (ಗುಂಡಪ್ಪ ಶೆಡ್) ಈಶ್ವರಪ್ಪ ಅವರ ಮನೆಯಿಂದ ಹೊರಬಂದ ಸ್ಕೂಟರ್‌ ಅನ್ನು ತಪಾಸಣೆಗಾಗಿ ತಡೆದಾಗ, ಇಬ್ಬರೂ ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಅದರಲ್ಲಿ ₹ 2 ಸಾವಿರ ಮುಖಬೆಲೆಯ ₹ 1 ಲಕ್ಷ, ₹ 100 ಮುಖ ಬೆಲೆಯ 80 ಸಾವಿರ ನಗದು ಇತ್ತು. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT