ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಸದ ನಳಿನ್ ಗೌರವಕ್ಕೆ ಚ್ಯುತಿಯಾದರೆ ಸುಮ್ಮನಿರೆವು: ಸತೀಶ್‌ ಕುಂಪಲ ಎಚ್ಚರಿಕೆ

Published 8 ಫೆಬ್ರುವರಿ 2024, 16:09 IST
Last Updated 8 ಫೆಬ್ರುವರಿ 2024, 16:09 IST
ಅಕ್ಷರ ಗಾತ್ರ

ಮಂಗಳೂರು: ‘ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಗ್ಗಳಿಕೆ ಇದೆ. ಅವರ ಗೌರವಕ್ಕೆ ಚ್ಯುತಿ ಉಂಟುಮಾಡಿದರೆ ನಮ್ಮ ಪಕ್ಷದ ಯುವ ಮೋರ್ಚಾ ಸುಮ್ಮನಿರುವುದಿಲ್ಲ. ನಮ್ಮಲ್ಲೂ ವಿದ್ಯಾರ್ಥಿ ಸಂಘಟನೆ ಇದೆ ಎಂಬುದು ಕಾಂಗ್ರೆಸ್‌ ಮುಖಂಡರಿಗೆ ತಿಳಿದಿರಲಿ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್‌ ಕುಂಪಲ ಎಚ್ಚರಿಕೆ ನೀಡಿದರು. 

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ನಳಿನ್‌ ಅವರ ಮನೆಗೆ ಎನ್‌ಎಸ್‌ಯುಐ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿರುವುದು ರಾಜ್ಯದಲ್ಲಿರುವ ಅರಾಜಕ ವಾತಾವರಣಕ್ಕೆ ಹಾಗೂ ದಬ್ಬಾಳಿಕೆ ನೀತಿಗೆ ಸಾಕ್ಷಿ. ಇದನ್ನು ಖಂಡಿಸುತ್ತೇವೆ’ ಎಂದರು.

‘ಅವರ ಮನೆಗೆ ಮುತ್ತಿಗೆ ಹಾಕಲು ಎನ್‌ಎಸ್‌ಯುಐ ಕಾರ್ಯಕರ್ತರಿಗೆ ಏನು ಅಧಿಕಾರ ಇದೆ. ಕಾಂಗ್ರೆಸ್‌ ಮುಖಂಡರು ಪುಂಡಾಟಿಕೆ ಮಾಡುವ ಹುಡುಗರನ್ನು ಛೂಬಿಟ್ಟಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಪೂರೈಸಲಾಗದೆ ಅತಂತ್ರ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ವಾಸ್ತವವನ್ನು ಮರೆಮಾಚಲು ಪಲಾಯನವಾದ ಅನುಸರಿಸಿದೆ’ ಎಂದರು. 

‘ದೇಶದಲ್ಲೇ ಉತ್ತಮವಾಗಿ ಕೆಲಸ ಮಾಡಿದ ಸಂಸದರಲ್ಲಿ ನಳಿನ್‌ ಒಬ್ಬರು. ಮೂರು ಸಲ ಸಂಸದರಾಗಿದ್ದು ಅವರು ಮಾಡಿದ ಒಳ್ಳೆಯ ಕೆಲಸದಿಂದಾಗಿ. ಅವರ ಅವಧಿಯಲ್ಲಿ ಜಿಲ್ಲೆಗೆ ₹ 1 ಲಕ್ಷ ಕೋಟಿಗೂ ಅಧಿಕ ಅನುದಾನ ಬಂದಿದೆ.  ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ₹ 16,038 ಕೋಟಿ, ಬಂದರುಗಳ ಅಭಿವೃದ್ಧಿಗೆ ₹ 3,599 ಕೋಟಿ,  ರೈಲ್ವೆ ಯೋಜನೆಗಳಿಗೆ ₹ 2,640 ಕೋಟಿ, ಸ್ಮಾರ್ಟ್ ಸಿಟಿ ಯೋಜನೆಗೆ ₹ 2,665 ಕೋಟಿ ಅನುದಾನ ಒದಗಿಸಿದ್ದಾರೆ.  ಅವರ ಅವಧಿಯಲ್ಲಿ ಜಿಲ್ಲೆಯಲ್ಲಿ ₹17,313 ಕೋಟಿ ಬಂಡವಾಳ ಹೂಡಿಕೆ ಆಗಿದೆ’ ಎಂದು ತಿಳಿಸಿದರು. 

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ವಕ್ತಾರ ಅರುಣ್ ಶೇಟ್ ಹಾಗೂ ಮಾಧ್ಯಮ ಪ್ರಮುಖ್‌ ವಸಂತ ಪೂಜಾರಿ ಭಾಗವಹಿಸಿದ್ದರು.

ಸಂಸದ ನಳಿನ್‌ ಮನೆ ಮುಂದೆ ಎನ್‌ಎಸ್‌ಯುಐ ಪ್ರತಿಭಟನೆ ಹಾಸ್ಯಾಸ್ಪದ. ಅನುದಾನ ಕಡಿಮೆಯಾದರೆ ಹಣಕಾಸು ಆಯೋಗದೆದುರು ಪ್ರತಿಭಟಿಸಬೇಕಿತ್ತು
ಬೃಜೇಶ್‌ ಚೌಟ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT