ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿ: ಸತತ 4 ವರ್ಷಗಳಿಂದ ದ.ಕ. ರಾಜ್ಯಕ್ಕೆ ಪ್ರಥಮ

Published 20 ನವೆಂಬರ್ 2023, 8:20 IST
Last Updated 20 ನವೆಂಬರ್ 2023, 8:20 IST
ಅಕ್ಷರ ಗಾತ್ರ

ಮಂಗಳೂರು: ಹವಾಮಾನ ಆಧಾರಿತ ಬೆಳೆ ವಿಮೆ ನೋಂದಣಿಯಲ್ಲಿ ಸತತ ಮೂರು ವರ್ಷಗಳಿಂದ ಪ್ರಥಮ ಸ್ಥಾನದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷವೂ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.

ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ ಮತ್ತು ಕಾಳುಮೆಣಸಿಗೆ ಬೆಳೆ ವಿಮೆ ಘೋಷಿಸಲಾಗಿತ್ತು. ಅಡಿಕೆಗೆ ಪ್ರತಿ ಹೆಕ್ಟೇರ್‌ಗೆ ₹6,475 ಹಾಗೂ ಕಾಳುಮೆಣಸಿಗೆ ₹2,350 ಮೊತ್ತ ನಿಗದಿಪಡಿಸಲಾಗಿತ್ತು. ಸಾಮಾನ್ಯವಾಗಿ ಜುಲೈನಲ್ಲಿ ಘೋಷಣೆಯಾಗುತ್ತಿದ್ದ ಬೆಳೆ ವಿಮೆ ಈ ಬಾರಿ ಆಗಸ್ಟ್‌ನಲ್ಲಿ ಘೋಷಣೆಯಾಗಿತ್ತು.

ಅಡಿಕೆಗೆ ಒಂದು ಹೆಕ್ಟೇರ್‌ಗೆ ಗರಿಷ್ಠ ₹1.28 ಲಕ್ಷ ಹಾಗೂ ಕಾಳುಮೆಣಸಿಗೆ ಗರಿಷ್ಠ ₹46 ಸಾವಿರ ಪಡೆಯಲು ಅವಕಾಶ ಇದೆ. ಇದನ್ನು ಆಧರಿಸಿ, ವಿಮಾ ಕಂಪನಿ ಕಂತಿನ ಮೊತ್ತವನ್ನು ನಿಗದಿಪಡಿಸುತ್ತದೆ. ಇದರಲ್ಲಿ ಶೇ 5ರಷ್ಟು ಮೊತ್ತದ ವಿಮಾಕಂತನ್ನು ರೈತರು ಪಾವತಿಸುತ್ತಾರೆ. ಇದೇ ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. 2016–17ರಿಂದ 2018–19ರವರೆಗೆ ರೈತರ ಸಂಖ್ಯೆಯನ್ನು ಆಧರಿಸಿ, ವಿಮೆಯನ್ನು ಲೆಕ್ಕ ಹಾಕಲಾಗುತ್ತಿತ್ತು. 2019–20ರಿಂದ ಸರ್ವೆಸಂಖ್ಯೆ ಆಧರಿಸಿ ಪ್ರತಿ ಸರ್ವೆಸಂಖ್ಯೆಯನ್ನು ಒಂದು ಪ್ರಕರಣ ಎಂದು ಪರಿಗಣಿಸಲಾಗುತ್ತಿತ್ತು ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

2023–24ನೇ ಸಾಲಿನಲ್ಲಿ ಪುನಃ ಹಿಂದಿನಂತೆ ಒಬ್ಬರ ರೈತನ ಎಷ್ಟೇ ಸರ್ವೆ ಸಂಖ್ಯೆ ಹೊಂದಿದ್ದರೂ, ಅದನ್ನು ಒಬ್ಬ ರೈತನ ಲೆಕ್ಕದಲ್ಲಿ ಪರಿಗಣಿಸಲಾಗುತ್ತಿದೆ. ಈ ಬಾರಿ ಅಡಿಕೆಗೆ 72,915 ರೈತರು ಒಟ್ಟು ₹27.79 ಕೋಟಿ, ಕಾಳುಮೆಣಸಿಗೆ 21,055 ರೈತರು ಒಟ್ಟು ₹2.78 ಕೋಟಿ ಮೊತ್ತದ ವಿಮೆ ಕಂತು ಪಾವತಿಸಿದ್ದಾರೆ. 2022–23ನೇ ಸಾಲಿನಲ್ಲಿ ಒಟ್ಟು 1,10,126 ಪ್ರಕರಣಗಳಿಗೆ ವಿಮೆ ಪಾವತಿಸಲಾಗಿತ್ತು ಎಂದು ಅಧಿಕಾರಿ ವಿವರಿಸಿದರು.

‘2022–23ನೇ ಸಾಲಿನ ವಿಮೆ ಪರಿಹಾರ ಮೊತ್ತ ಪಾವತಿಗೆ ಸಂಬಂಧಿಸಿ ರೈತರ ಖಾತೆಗೆ ಸದ್ಯದಲ್ಲಿ ಪರಿಹಾರದ ಹಣ ಜಮಾ ಆಗಲಿದೆ. ಬೆಳೆ ಸಮೀಕ್ಷೆಯಲ್ಲಿ ದಾಖಲಾಗಿರುವ ಬೆಳೆಗೂ ತೋಟದಲ್ಲಿರುವ ಬೆಳೆ ನಡುವೆ ಆಗಿರುವ ಗೊಂದಲದಿಂದ ಹಿಂದಿನ ವರ್ಷಗಳಲ್ಲಿ ಕೆಲವು ಪ್ರಕರಣಗಳಿಗೆ ವಿಮೆ ಪರಿಹಾರ ಮೊತ್ತ ಬಾಕಿ ಇದೆ. 2016–17ರಲ್ಲಿ ಆಧಾರ್ ಲಿಂಕ್ ಆಗದೆ, ಕೆಲವು ಮೃತ ಪ್ರಕರಣಗಳು ಇರುವ ಕಾರಣಕ್ಕೆ ಬಾಕಿಯಾಗಿವೆ. ಸಮಸ್ಯೆ ಪರಿಹಾರವಾಗುತ್ತಿದ್ದು, ಬಾಕಿ ಪ್ರಕರಣಗಳಿಗೂ ಮೊತ್ತ ಪಾವತಿಯಾಗಲಿದೆ’ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್‌.ಆರ್. ನಾಯ್ಕ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT