ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹಿಂದೆಲ್ಲ ಮೋದಿಯವರಿಗೆ ನಾರಾಯಣಗುರು ನೆನಪಾಗಿಲ್ಲ ಏಕೆ- ಮಮತಾ ಗಟ್ಟಿ ಪ್ರಶ್ನೆ

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪ್ರಶ್ನೆ
Published 18 ಏಪ್ರಿಲ್ 2024, 5:51 IST
Last Updated 18 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಮಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಸಲ ನಗರಕ್ಕೆ ಬಂದಿದ್ದಾರೆ. ಆಗೆಲ್ಲ ನೆನಪಾಗದ ಬ್ರಹ್ಮಶ್ರೀ ನಾರಾಯಣಗುರುಗಳು, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಅವರಿಗೆ ನೆನಪಾಗಿದ್ದು ಹೇಗೆ’‌ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪ್ರಶ್ನಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ನಾರಾಯಣಗುರುಗಳ ತತ್ವ ಸಿದ್ಧಾಂತವನ್ನು ಅನುಸರಿಸುತ್ತಿರುವ ಆರ್‌.ಪದ್ಮರಾಜ್‌ ಕಾಂಗ್ರೆಸ್‌ ಅಭ್ಯರ್ಥಿ. ಅವರು ಎಲ್ಲ ಜಾತಿಗಳ ನಾಯಕ. ಒಂದೇ ಜಾತಿಗೆ ಸೀಮಿತರಲ್ಲ. ಅವರಿಗೆ ಸಿಗುತ್ತಿರುವ ಜನಬೆಂಬಲ ಕಂಡು ಬಿಜೆಪಿ ವಿಚಲಿತವಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಜನಾರ್ದನ ಪೂಜಾರಿ ಸಂಸದರಾಗಿದ್ದವರೆಗೆ ಅಭಿವೃದ್ಧಿಯನ್ನು ಕಂಡಿದ್ದೇವೆ. ನಂತರ, ಧರ್ಮಗಳ ನಡುವೆ ದ್ವೇಷ ಬಿತ್ತಿ ಬಿಜೆಪಿಯವರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಬಿಜೆಪಿಯ ಸಂಸದರು ಜಿಲ್ಲೆಯ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ’‌ ಎಂದು ಆರೋಪಿಸಿದರು.

‘ನರೇಂದ್ರ ಮೋದಿ ಅವರ ಹತ್ತು ವರ್ಷಗಳ ಆಳ್ವಿಕೆಯಲ್ಲಿ ಕಂಡಿದ್ದು ಬರೀ ಮೋಸ. ಲೀಟರ್‌ಗೆ ₹ 56 ಇದ್ದ ಪೆಟ್ರೋಲ್ ದರ ಈಗ ₹ 98ಕ್ಕೆ ಏರಿದೆ. ಒಂದು ವಸ್ತುವನ್ನೂ ಬಿಡದೇ ಜಿಎಸ್‌ಟಿನ್ನು ವಿಧಿಸಲಾಗುತ್ತಿದೆ. ವಿದೇಶಿ ಬ್ಯಾಂಕ್‌ಗಳಿಂದ  ಕಪ್ಪುಹಣ ವಾಪಾಸ್‌ ತಂದು ಜನಧನ ಖಾತೆಗೆ ₹ 15 ಲಕ್ಷ ಹಂಚುವ ಭರವಸೆಯನ್ನೂ ಈಡೇರಿಸಿಲ್ಲ. ನೋಟು ರದ್ಧತಿಯಿಂದ ಜನ ಸಮಸ್ಯೆ ಎದುರಿಸಿದರು. ₹ 2ಸಾವಿರ ಮುಖಬೆಲೆಯ ನೋಟು ಮುದ್ರಿಸಿ, ಮೂರೇ ವರ್ಷದಲ್ಲಿ ಹಿಂಪಡೆದರು. ಚುನಾವಣಾ ಬಾಂಡ್‌ನಲ್ಲೂ ವ್ಯವಸ್ಥಿತ ಭ್ರಷ್ಟಾಚಾರ ನಡೆಸಿದ್ದಾರೆ. ಜನ ಎಚ್ಚೆತ್ತುಕೊಂಡಿದ್ದು, ಅವರ ಮೋಸಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

‘ಮಹಿಳೆಯರಿಗೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಶೇ 33ರಷ್ಟು ಮೀಸಲಾತಿ  ಘೋಷಿಸಿರುವ ಬಿಜೆಪಿ ಅದನ್ನೂ ಈಡೇರಿಸಿಲ್ಲ. ಪ್ರಧಾನಿ ಮನಸ್ಸು ಮಾಡಿದ್ದರೆ ಈ ಚುನಾವಣೆಯಲ್ಲೇ ಅದನ್ನು ಜಾರಿಗೊಳಿಸಬಹುದಿತ್ತು.  ರಾಜ್ಯದಲ್ಲಿ ಕಾಂಗ್ರೆಸ್‌ ಮಹಿಳೆಯರನ್ನು ಐದು ಕಡೆ ಕಣಕ್ಕಿಳಿಸಿದ್ದರೆ, ಬಿಜೆಪಿ ಕೇವಲ ಎರಡು ಕಡೆ ಟಿಕೆಟ್‌ ನೀಡಿದೆ. ಮಹಿಳೆಯರಿಗೆ ಪಂಚಾಯತ್‌ ರಾಜ್ಯ ಸಂಸ್ಥೆಗಳಲ್ಲಿ ಶೇ 50ರಷ್ಟು ಮೀಸಲಾತಿ ಜಾರಿಗೊಳಿಸಿದ್ದು ಕಾಂಗ್ರೆಸ್‌. ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿ ಯಾವುದೇ ಕಾರ್ಯಕ್ರಮವನ್ನೂ ಜಾರಿಗೊಳಿಸಿಲ್ಲ’ ಎಂದು ಟೀಕಿಸಿದರು. 

‘ದಕ್ಷಿಣ ಕನ್ನಡ ಜಿಲ್ಲೆಯು ಮತ್ತೆ ಅಭಿವೃದ್ಧಿಯ ಪಥಕ್ಕೆ ಮರಳಲು ಕಾಂಗ್ರೆಸ್‌ ಗೆಲ್ಲಬೇಕಿದೆ. ಈ ಸಲ ಜಿಲ್ಲೆಯ ಜನ ಬದಲಾವಣೆ ಬಯಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಡ ಮಹಿಳೆಯರಿಗೆ ವರ್ಷಕ್ಕೆ ₹ 1 ಲಕ್ಷ ಪಾವತಿಸುವ ಮಹಾಲಕ್ಷ್ಮಿ ಯೋಜನೆ  ಪಕ್ಷದ ಕೈ ಹಿಡಿಯಲಿವೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸಬಿತಾ ಮಿಸ್ಕಿತ್‌, ಚಂದ್ರಕಲಾ ರಾವ್, ಗೀತಾ, ಶಶಿಕಲಾ ಹಾಗೂ ಮಂಜುಳಾ ನಾಯಕ್‌ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT